Advertisement

ಕನ್ನಡಿಗರಿಂದಲೇ ಕನ್ನಡ ಭಾಷೆಗೆ ವಿಪತ್ತು

05:41 PM Nov 25, 2019 | Naveen |

ಸುರಪುರ: ಕರ್ನಾಟಕದಲ್ಲಿ ಕನ್ನಡ ಭಾಷೆ ಉಳಿಸಲು ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿರುವುದು ನಮ್ಮ ರ್ದುದೈವದ ಸಂಗತಿ. ಅದರಲ್ಲೂ ವಿಶೇಷವಾಗಿ ಅನ್ಯ ಭಾಷಿಕರಿಗಿಂತ ಮಾತೃಭಾಷೆಗೆ ಕನ್ನಡಿಗರಿಂದಲೇ ವಿಪತ್ತು ಎದುರಾಗಿದೆ ಎಂದು ಸಾಹಿತಿ ಅಶೋಕ ಅಂಚಲಿ ಕಳವಳ ವ್ಯಕ್ತ ಪಡಿಸಿದರು.

Advertisement

ನಗರದ ಗರುಡದ್ರಿ ಕಲಾಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ರವಿವಾರ ಹಮ್ಮಿಕೊಂಡಿದ್ದ ವರ್ಷದ ವ್ಯಕ್ತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಸಂದಲ್‌ ಗಜಲ್‌ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ನಾಡಿನ ಪ್ರತಿಯೊಬ್ಬ ಪಾಲಕ ಪೋಷಕರಲ್ಲಿ ಆಂಗ್ಲ ಭಾಷೆ ವ್ಯಾಮೋಹ ಕಾಡುತ್ತಿದೆ. ಮಕ್ಕಳಿಗೆ ಇಂಗ್ಲಿಷ್‌ ಭಾಷೆಯಲ್ಲಿ ಶಿಕ್ಷಣ ಕೊಡಿಸುವ ಉದ್ದೇಶದಿಂದ ಆಂಗ್ಲ ಮಾಧ್ಯಮ ಶಾಲೆಗಳ ಮುಂದೆ ದೊಡ್ಡ ಸಾಲು ಇರುತ್ತಿದೆ. ಇದರಿಂದ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಭೀತಿಯಲ್ಲಿವೆ. ತಾಯಿ ನೆಲದ ಭಾಷಿಕರೆ ಈ ರೀತಿ ವರ್ತಿಸಿದಾಗ ಕನ್ನಡ ಉಳಿಯುದಾದರು ಹೇಗೆ ಎಂದು ಪ್ರಶ್ನಿಸಿದರು.

ಭಾಷೆ ಉಳಿಯಬೇಕಾದರೆ ಪ್ರತಿಯೊಬ್ಬರು ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಕೊಡಿಸುವ ದೀಕ್ಷೆ ತೊಡಬೇಕು ಎಂದು ಸಲಹೆ ನೀಡಿದರು. ಬ್ರಿಟಿಷ್‌ ವಸಾಹತು ಶಾಹಿಗೆ ಒಳಪಟ್ಟಿದ್ದ ಅಮೆರಿಕಾ, ಫ್ರಾನ್ಸ್‌, ಈಜಿಪ್ತ ಇತರೆ ರಾಷ್ಟ್ರಗಳಲ್ಲಿ ಕೂಡ ಇಂಗ್ಲಿಷ್‌ ತನ್ನ ಪ್ರಭಾವ ವ್ಯಾಪಿಸಿದೆ. ಕೇವಲ ನಾಲ್ಕೈದು ನೂರು ವರ್ಷಗಳ ಇತಿಹಾಸವಿರುವ ಭಾಷೆಗಳು ನೋಬೆಲ್‌ ಪ್ರಶಸ್ತಿ ಪಡೆದುಕೊಳ್ಳುತ್ತಿವೆ ಎನ್ನುವುದಾದರೆ 2 ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ನೋಬೆಲ್‌ ಪ್ರಶಸ್ತಿ ಪಡೆಲಾಗುತ್ತಿಲ್ಲವೇಕೆ? ಈ ಕುರಿತು ಚಿಂತನೆ ಮಾಡುವುದು ಅಗತ್ಯವಾಗಿದೆ. ಇದಕ್ಕೆ ನಮ್ಮನಾಳುವ ಸರಕಾರ ಮತ್ತು ಜನಪ್ರತಿನಿಧಿಗಳಲ್ಲಿನ ಇಚ್ಛಾಶಕ್ತಿ ಕೊರತೆ ಪ್ರಮುಖವಾಗಿದೆ ಎಂದು ದೂರಿದರು.

ರಾಜ್ಯದಲ್ಲಿ ಕನ್ನಡ ಏನಾದರು ಉಳಿದಿದ್ದರೆ ಅದು ನಮ್ಮ ಗ್ರಾಮೀಣ ಜನರ ಕೊಡುಗೆ ಮಾತ್ರ. ಅವರ ಜನಜೀವನ ಮತ್ತು ಸಂಸ್ಕೃತಿಯಿಂದ ಒಂದಿಷ್ಟು ಕನ್ನಡ ಉಳಿದಿದೆ ಹೊರತು ನಗರದ ಪ್ರದೇಶಗಳಿಂದಲ್ಲ. ನಗರ ಮತ್ತು ಸ್ಮಾರ್ಟ್‌ ಸಿಟಿಗಳಿಂದ ನಮ್ಮ ಮೂಲಪಂಪರೆ ಮತ್ತು ಭಾಷೆಗೆ ಹೆಚ್ಚಿನ ಹೊಡೆತ ಬೀಳುತ್ತಿದೆ. ಕನ್ನಡ ಪ್ರೇಮವನ್ನು ನಾವೆಲ್ಲಿ ತೋರಿಸುತ್ತಿದ್ದೇವೆ. ಅಂದರೆ ಗೋಡೆ ಮತ್ತು ವಾಹನಗಳ ಮೇಲೆ ಕನ್ನಡ ಅಕ್ಷರ ಬರೆಸಿ ಭಾಷೆ ಪ್ರೇಮ ಮೆರೆಯುತ್ತಿದ್ದೇವೆ. ಇದರಿಂದ ಯಾವುದೇ ಲಾಭವಿಲ್ಲ. ಇದು ಕನ್ನಡ ಅಭಿಮಾನವಲ್ಲ. ಪ್ರತಿಯೊಬ್ಬರ ಮನೆ ಮನದಲ್ಲೂ ಕನ್ನಡ ಅರಳಬೇಕಿದೆ.

ಉನ್ನತ ಶಿಕ್ಷಣ ಕೂಡ ಮಾತೃಭಾಷೆಯಲ್ಲಿ ಸಿಗುವಂತಾಗಬೇಕು. ಈ ಕುರಿತು ಸರಕಾರ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿದರು. ರಾಜ್ಯೋತ್ಸವ ಪ್ರಶಸ್ತಿ ಮತ್ತು ಕೇಂದ್ರ ಬಾಲ ಸಾಹಿತ್ಯ ಅಕಾಡೆಮಿ ಪುರಸ್ಕೃತ ಚಂದ್ರಕಾಂತ ಕರದಳ್ಳಿ ಮಾತನಾಡಿ, ಬೀಟಿಷರ ನಂತರ ಹೈಕ ಭಾಗ ನಿಜಾಮನ ಆಡಳಿತಕ್ಕೆ ಒಳಪಟ್ಟಿತ್ತು. ಇಲ್ಲಿ ಕನ್ನಡ ಮಾತನಾಡುವುದು ಅಪರಾಧವಾಗಿತ್ತು. ಅಂತಹ ಸಂದಿಗ್ಧತೆಯಲ್ಲಿ ಬಹಳಷ್ಟು ಶ್ರಮಪಟ್ಟು ಈ ಭಾಗದಲ್ಲಿ ಕನ್ನಡ ಭಾಷೆ ಕಟ್ಟಲಾಗಿದೆ. ಇದನ್ನು ಉಳಿಸಿ ಬೆಳೆಸುವತ್ತ ಯುವ ಜನಾಂಗ ಮತ್ತು ಜನಪ್ರತಿನಿ ಧಿಗಳು ಆಸಕ್ತಿ ತೋರುವುದು ಅತ್ಯಂತ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

Advertisement

ಜಾನಪದ ಕಲಾ ಅಕಾಡೆಮಿ ಸದಸ್ಯ ಅಮರಯ್ಯಸ್ವಾಮಿ ಜಾಲಿಬೆಂಚಿ ಮಾತನಾಡಿ, ಸಿಕ್ಕಿರುವ ಅವಕಶ ಸದ್ಬಳಕೆ ಮಾಡಿಕೊಂಡು ಈ ಭಾಗದ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತೇನೆ. ವಿವಿಧ ಉತ್ಸವಗಳಂತೆ ಸುರಪುರ ಉತ್ಸವ ಆಚರಣೆ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿಯೇ ಸುರಪುರದಲ್ಲಿ ಜಿಲ್ಲಾ ಮಟ್ಟದ ಜಾನಪದ ಕಲಾ ತರಬೇತಿ ಶಿಬಿರ ಆಯೋಜಿಸಲಾಗುವುದು. 371ನೆ(ಜೆ) ವಿಧಿಯನ್ನು ಜಾನಪದ ಅಕಾಡೆಮಿಗೂ ವಿಸ್ತಿರಿಸಲು ಸರಕಾರ ಗಮನ ಹರಿಸಬೇಕಿದೆ ಎಂದು ಹೇಳಿದರು.

ಇದೇ ವೇಳೆ ಸಾಹಿತ್ಯ ಪರಿಷತ್‌ನ ವರ್ಷದ ವ್ಯಕ್ತಿ ಶಾಂತಪ್ಪ ಬೂದಿಹಾಳ, ಕೇಂದ್ರ ಬಾಲ ಸಾಹಿತ್ಯ ಅಕಾಡೆಮಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಚಂದ್ರಕಾಂತ ಕರದಳ್ಳಿ. ಮೋಹನ ಸೀತನೂರ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಕಾಶಚಂದ್‌ ಜೈನ್‌, ಧಾರವಾಡ ವಿವಿ ಅಂತಾರಾಷ್ಟ್ರೀಯ ಚಿತ್ರಕಲಾವಿದ ಜೆ.ಬಿ. ಕಟ್ಟಿಮನಿ, ಜಾನಪದ ಕಲಾ ಅಕಾಡೆಮಿ ಸದಸ್ಯ ಅಮರಯ್ಯ ಸ್ವಾಮಿ ಜಾಲಿಬೆಂಚಿ, ಜಾನಪದ ಅಕಾಡೆಮಿ ವರ್ಷದ ವ್ಯಕ್ತಿ ಲಕ್ಷ್ಮಣ ಗುತ್ತೇದಾರ, ಕನಕಗಿರಿ ಕನ್ನಡ ಗಜಲ್‌ ಕವಿ ಅಲ್ಲಾಗಿರಿರಾಜ, ಗೌರವ ಡಾಕ್ಟೆರೇಟ್‌ ಪುರಸ್ಕೃತ ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಸಾಪ ತಾಲೂಕು ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಎಸ್‌ಪಿ ಚಂದ್ರಕಾಂತ ಭಂಡಾರಿ, ಹೈಕೋರ್ಟ್‌ ವಕೀಲ ಜೆ. ಅಗಸ್ಟೀನ್‌ ಇದ್ದರು. ರಾಜಶೇಖರ ದೇಸಾಯಿ ಸ್ವಾಗತಿಸಿದರು. ದೇವು ಹೆಬ್ಟಾಳ ನಿರೂಪಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next