ಸುರಪುರ: ನಗರದ ಬುದ್ಧ ವಿಹಾರದಲ್ಲಿ ಬುದ್ಧ ಪೂರ್ಣಿಮೆ ಅಂಗವಾಗಿ ದಲಿತ ಸಂಘಟನೆಗಳ ಮುಖಂಡರಿಂದ ಶನಿವಾರ ಸಾರಿಪುತ್ರ ಗೌತಮ್ ಬುದ್ಧ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಬುದ್ಧನ ಅನುಯಾಯಿಗಳು ಬುದ್ಧ ವಿಹಾರಕ್ಕೆ ತೆರಳಿ ಬುದ್ಧನ ಮೂರ್ತಿಗೆ ಪೂಜೆ ಸಲ್ಲಿಸಿ, ಮೇಣದ ಬತ್ತಿ ಹಚ್ಚಿ ಪ್ರಾರ್ಥಿಸಿದರು. ನಂತರ ಧ್ವಜಾರೋಹಣ ನೆರವೇರಿಸಿ ಜಯಘೋಷ ಕೂಗಿ ಸಂಭ್ರಮಿಸಿದರು.
ದಲಿತ ಮುಖಂಡ ವೆಂಕಟೇಶ ಹೊಸಮನಿ ಮಾತನಾಡಿ, ಇತಿಹಾಸದಲ್ಲಿ ಬುದ್ಧ ಭಗವಾನ ಸ್ಥಾನ ಅದ್ವಿತೀಯವಾದದ್ದು. ಭಗವಾನರು ಮಾನವರ ಇತಿಮಿತಿಗಳನ್ನು ಬಲ್ಲವರಾಗಿದ್ದರು. ಸಾಮಾನ್ಯ ಮನುಷ್ಯನ ಬದುಕು ನೆಮ್ಮದಿಯಿಂದ ಇರಬಹುದಾದ ಸೂಕ್ತ ಮಾರ್ಗಗಳನ್ನು ಬೋಧಿಸಿದರು. ನಮ್ಮ ದುಖಃಕ್ಕೆ ಆಸೆಯೇ ಮೂಲ ಕಾರಣ ಎಂಬ ಸತ್ಯವನ್ನು ಜಗತ್ತಿಗೆ ತಿಳಿಸಿಕೊಟ್ಟ ಮಹಾತ್ಮ. ಅವರು ಬೋಧಿಸಿದ ತ್ರಿಪಟಿಕ ಸೂತ್ರಗಳು ಸಾರ್ವಕಾಲಿಕ ಶ್ರೇಷ್ಠವಾಗಿವೆ ಎಂದರು.
ಎರಡೂವರೆ ಸಾವಿರ ವರ್ಷಗಳ ಹಿಂದೆ ರಾಜನಾಗಿದ್ದ ಗೌತಮ್ ಬುದ್ಧ ಜನರ ನೋವುಗಳನ್ನು ಕಂಡು ಆತ್ಮಜ್ಞಾನಕ್ಕಾಗಿ ದೇಶ ಸಂಚಾರ ನಡೆಸಿದರು. ಬೋಧಿ ವೃಕ್ಷದಡಿಯಲ್ಲಿ ಧ್ಯಾನಸ್ತನಾಗಿ ಕುಳಿತು ಮಹಾ ಜ್ಞಾನ ಪಡೆದು ಆತ್ಮ ವಿಕಸನ ಮಾಡಿಕೊಂಡರು. ಪ್ರತಿಯೊಬ್ಬರ ಸುಖ ಜೀವನಕ್ಕೆ ಪಂಚಶೀಲಗಳ ಸಂದೇಶ ಸಾರಿದರು. ಅವೇ ಇವತ್ತು ಧರ್ಮ ಸೂತ್ರಗಳಾಗಿವೆ. ಜಗತ್ತಿನ ಶಾಂತಿ ಬಯಸಿದ ಬುದ್ಧ ಮುಂದೆ ಬೌದ್ಧ ಧರ್ಮವನ್ನು ಸ್ಥಾಪಿಸಿ ಬಾಬಾ ಸಾಹೇಬ್ ಅಂಬೇಡ್ಕರ್‌ರಂತ ಮಹಾನ್ ಜ್ಞಾನಿಗಳಿಗೆ ಪ್ರೇರಣೆಯಾಗಿದ್ದಾರೆ. ಶಾಂತಿ ನೆಮ್ಮದಿ ಬದುಕಿಗಾಗಿ ಭಗವಾನರ ಸಂದೇಶಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.
ರಾಹುಲ್ ಹುಲಿಮನಿ ಮಾತನಾಡಿ, ತ್ರಿಪಟಿಕ ಸೂತ್ರಗಳ ಮೂಲಕ ಬೌದ್ಧ ಧವåರ್ ಜಗತ್ತಿನಲ್ಲಿಯೇ ಮಾದರಿ ಧರ್ಮವಾಗಿದೆ. ಇವತ್ತು ಜಗತ್ತಿನ ಅನೇಕ ರಾಷ್ಟ್ರಗಳು ಬೌದ್ಧ ಧರ್ಮವನ್ನು ಪಾಲಿಸುವ ಮೂಲಕ ಬುದ್ಧನನ್ನು ಒಪ್ಪಿವೆ. ಪ್ರಸ್ತುತ ದಿನಮಾನಗಳಲ್ಲಿ ಭಾರತದಲ್ಲಿ ಬೌದ್ಧ ಧರ್ಮ ಪರಿಪಾಲಿಸುವುದು ಅತ್ಯಂತ ಅಗತ್ಯವಾಗಿದೆ ಎಂದರು. ದಲಿತ ಮುಖಂಡರಾದ ಆದಪ್ಪ ಹೊಸಮನಿ, ನಾಗಣ್ಣ ಕಲ್ಲದೇವನಹಳ್ಳಿ, ನಿಂಗಣ್ಣ ಗೋನಾಲ, ಮಾಳಪ್ಪ ಕಿರದಹಳ್ಳಿ, ವೆಂಕಟೇಶ ಸುರಪುರ, ರಾಮಚಂದ್ರ ವಾಗಣಗೇರಾ, ರಾಮಣ್ಣ ಶೆಳ್ಳಿಗಿ, ಆಕಾಶ ಕಟ್ಟಿಮನಿ, ಚಂದಪ್ಪ ಪಂಚಮ್, ಅಜ್ಮೀರ್, ಹುಲಗಪ್ಪ ದೇವತ್ಕಲ್, ಅಪ್ಪಣ್ಣ ಗಾಯಕವಾಡ, ವೈಜನಾಥ ಹೊಸಮನಿ, ಹಣಮಂತ ಹೊಸಮನಿ, ಶರಣು ತಳವಾರಗೇರಾ, ಮಲ್ಲು ಕೆಸಿಪಿ, ರಾಜು ಕಟ್ಟಿಮನಿ, ಮಾನಪ್ಪ ಮೂಲಿಮನಿ, ಮಲ್ಲಿಕಾರ್ಜುನ ಮುಷ್ಠಳ್ಳಿ, ಶಂಕರ ಬೊಮ್ಮನಹಳ್ಳಿ ಇದ್ದರು. ರಮೇಶ ಬಡಿಗೇರ ಸ್ವಾಗತಿಸಿದರು. ಆನಂದ ಅರಕೇರಿ ನಿರೂಪಿಸಿದರು. ವಿಶ್ವನಾಥ ಹೊಸಮನಿ ವಂದಿಸಿದರು.