ಸುರಪುರ: ನಾರಾಯಣಪುರ ಬಸವ ಸಾಗರ ಜಲಾಶಯದಿಂದ ಶನಿವಾರ 6.25 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗಿದ್ದು, ಇದರಿಂದ ನದಿಯಲ್ಲಿ ನೀರಿನ ಪ್ರವಾಹ ಅಪಾಯ ಮಟ್ಟ ತಲುಪಿದ್ದು, ನದಿ ತೀರದ ಗ್ರಾಮಗಳ ಜನರು ಬೇಸತ್ತು ಹೋಗಿದ್ದಾರೆ.
ನದಿ ಹಿನ್ನೀರಿನಿಂದ ನದಿ ಪಾತ್ರದ ಗ್ರಾಮಗಳಾದ ದೇವಾಪುರ, ಶೆಳ್ಳಗಿ, ಮುಷ್ಠಳ್ಳಿ, ಚೌಡೇಶ್ವರಿಹಾಳ, ಹೆಮ್ಮಡಗಿ, ಸೂಗೂರು ಕರ್ನಾಳ, ಆಲ್ದಾಳ ಸೇರಿದಂತೆ ಇತರೆ ಗ್ರಾಮಗಳ ಬುಹುತೇಕ ಜಮೀನುಗಳು ಜಲಾವೃತಗೊಂಡಿದ್ದು, ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ.
ರಸ್ತೆ ಸಂರ್ಪಕ ಸ್ಥಗಿತ: ಆಲ್ದಾಳ ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ದೇವಾಪುರ ಹತ್ತಿರ ಹಳ್ಳದ ಹಿನ್ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಬೀದರ-ಬೆಂಗಳೂರು ರಾಜ್ಯ ಹೆದ್ದಾರಿ ಬಂದ್ ಆಗಿದೆ.
ಬೆಳೆ ಹಾನಿ: ಶೆಳ್ಳಗಿ, ಮುಷ್ಟಳ್ಳಿ, ಅಡ್ಡೊಡಗಿ, ಹೆಮ್ಮಡಗಿ, ಚೌಡೇಶ್ವರಿ ಹಾಳ, ಸೂಗೂರು, ದೇವಾಪುರ, ಹಾವಿನಾಳ, ಆಲ್ದಾಳ, ತಿಂಥಣಿ, ಬಂಡೋಳಿ, ಅಡವಿಲಿಂಗದಳ್ಳಿ, ಹೊಸೂರು, ಬೆಂಚಿಗಡ್ಡಿ ಸೇರಿದಂತೆ ನದಿ ಪಾತ್ರದ ಇತರೆ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿದ್ದರಿಂದ ಸುಮಾರು 7 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜೆಸ್ಕಾಂ ಇಲಾಖೆಗೆ ನಷ್ಟ: ತಾಲೂಕಿನ ಶಳ್ಳಗಿ, ದೇವಾಪುರ ಸೇರಿದಂತೆ ನದಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿನ ಸುಮಾರು 5 ನೂರಕ್ಕೂ ಹೆಚ್ಚು ವಿದ್ಯುತ್ ಕಂಬ ಉರುಳಿ ಬಿದ್ದಿವೆ. 200ಕ್ಕೂ ಹೆಚ್ಚು ಟಿ.ಸಿ ನೀರಲ್ಲಿ ಮುಳುಗಡೆಯಾಗಿ ಸುಟ್ಟು ಹೋಗಿವೆ. ಅಂದಾಜು 1 ಕೋಟಿ ರೂ. ನಷ್ಟವಾಗಿದೆ ಎಂದು ಎಇಇ ಈರಣ್ಣ ಹಳಿಚೆಂಡ ತಿಳಿಸಿದ್ದಾರೆ.
ಪ್ರವಾಹ ವೀಕ್ಷಣೆಗೆ ಜನರ ದಂಡು: ಮೈದುಂಬಿ ಹರಿಯುತ್ತಿರುವ ಕೃಷ್ಣೆಯ ರಮಣೀಯ ದೃಶ್ಯವನ್ನು ವೀಕ್ಷಿಸಲು ತಾಲೂಕಿನ ವಿವಿಧ ಗ್ರಾಮಗಳ ಜನರು ಆಗಮಿಸುತ್ತಿದ್ದಾರೆ.
ಪೊಲೀಸ್ ಬಂದೋಬಸ್ತ್: ಶೆಳ್ಳಗಿ, ಮುಷ್ಟಳ್ಳಿ, ಚೌಡೇಶ್ವರಿಹಾಳ, ಸೂಗೂರು, ಹೆಮ್ಮಡಗಿ ಸೇರಿದಂತೆ ನದಿ ಪಾತ್ರದ ಗ್ರಾಮಗಳ ನದಿ ದಂಡೆಗೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಜನರು ನದಿ ಹತ್ತರಕ್ಕೆ ಹೋಗದಂತೆ ಬ್ಯಾರಿಕೇಡ್ ಹಾಕಲಾಗಿದೆ.