ಸುರಪುರ: ಬಸವ ಜಯಂತ್ಯುತ್ಸವ ಸಮಿತಿ ವತಿಯಿಂದ ಜಗಜ್ಯೋತಿ ಬಸವೇಶ್ವರರ 96ನೇ ಜಯಂತ್ಯುತ್ಸವವನ್ನು ಮೇ. 7ರಂದು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಬಸವ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಸುನೀಲ್ ಶೆಟ್ಟಿ ಸರಪಟ್ಟಣ ತಿಳಿಸಿದರು.
ಜಯಂತ್ಯುತ್ಸವ ನಿಮಿತ್ತ ನಗರದ ಪಂಚಾಂಗ ಮಠದಲ್ಲಿ ಶ್ರೀ ಬಸವ ಜಯಂತ್ಯುತ್ಸವ ಸಮಿತಿ ನೇತೃತ್ವದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಮಿತಿ ವತಿಯಿಂದ ಮಠದಲ್ಲಿ 1923ರಿಂದ ಬಸವ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಕೂಡ 96ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು.
ಬಸವ ಜಯಂತಿ ನಿಮಿತ್ತ ಮಠದ ಆವರಣದಲ್ಲಿ ಬೆಳಗ್ಗೆ ವಿವಿಧ ಕಾರ್ಯಕ್ರಮ ಜರುಗಲಿವೆ. ಅಂದು ಮಧ್ಯಾಹ್ನ 3:00 ಗಂಟೆಗೆ ನಗರದ ಪ್ರಮುಖ ಬೀದಿಗಳಲ್ಲಿ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ಜರುಗಲಿದೆ. ಸಮಾಜ ಬಾಂಧವರು ಕಡ್ಡಾಯವಾಗಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸೂಚಿಸಿದರು.
ಪಂಚಾಂಗ ಮಠದ ಚಂದ್ರಶೇಖರ ಪಂಚಾಂಗ ಮಠ, ಶರಣು ಕಳ್ಳಿಮನಿ, ಶಾಂತರಾಜ್ ಬಾರಿ, ವೀರೇಶ ನಿಷ್ಠಿ ದೇಶಮುಖ, ಸೂಗುರೇಶ ಮಡ್ಡಿ, ಮಂಜುನಾಥ ಜಾಲಹಳ್ಳಿ, ನಿಟಲಾಕ್ಷಿ ಪಂಚಾಂಗಮಠ, ಶ್ರೀನಾಥ ದಿವಟೆ, ಭೀಮಾಶಂಕರ ಹಳ್ಳದ, ಸಂತೋಷ ಇದ್ದರು.
ವಿವಿಧ ಕಾರ್ಯಕ್ರಮ ಆಯೋಜನೆ: ಇಲ್ಲಿಯ ಪಂಚಾಂಗ ಮಠದಲ್ಲಿ ಜಯಂತ್ಯುತ್ಸವ ನಿಮಿತ್ತ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಮೇ. 7ರಂದು ಬೆಳಗ್ಗೆ 7.15ಕ್ಕೆ ಜಯಂತಿ ಸಮಿತಿ ಅಧ್ಯಕ್ಷ ಸುನೀಲ್ ಶೆಟ್ಟಿ ಸರಪಟ್ಟಣ ಶಟ್ಟರ ಅವರಿಂದ ರುದ್ರಾಭಿಷೇಕ, ಸಿದ್ಧಯಸ್ವಾಮಿ ಬಳುಂಡಗಿ ಮಠ ಅವರಿಂದ ರುದ್ರ ಪಠಣ, ಬೆಳಗ್ಗೆ 9.30 ಗಂಟೆಗೆ ಕಡ್ಲಪ್ಪನವರ ನಿಷ್ಠಿ ವಿರಕ್ತ ಮಠದ ಪ್ರಭುಲಿಂಗ ಸ್ವಾಮೀಜಿ ಧ್ವಜಾರೋಹಣ ನೆರವೇರಿಸುವರು. ಶಾಸಕ ನರಸಿಂಹ ನಾಯಕ ಅಧ್ಯಕ್ಷತೆ ವಹಿಸುವರು.