ಸುರಪುರ: ನಗರಸಭೆ ವ್ಯಾಪ್ತಿಯ ಹಸನಾಪುರ ವಾರ್ಡ್‌ನಲ್ಲಿ ರಾಜುಗೌಡ ಗ್ರೌಂಡ್ ವರ್ಕ್ ಟೀಂ ವತಿಯಿಂದ ಉಚಿತವಾಗಿ ಆಯುಷ್ಮಾನ್ ಆರೋಗ್ಯ ಕಾರ್ಡ್ ಮಾಡಿಕೊಡಲಾಯಿತು.
ಹಸನಾಪುರದ ಬಸವೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಬಿಜೆಪಿ ಮುಖಂಡ ಹೊನ್ನಪ್ಪ ತಳವಾರ, ಸರ್ಕಾರದ ಜನಪರ ಯೋಜನೆಗಳನ್ನು ಮನೆಬಾಗಿಲಗೆ ತಲುಪಿಸಬೇಕೆನ್ನುವುದು ಶಾಸಕ ರಾಜುಗೌಡರ ಉದ್ದೇಶ. ಈ ನಿಟ್ಟಿನಲ್ಲಿ ಅವರು 170 ಯುವಕರ ತಂಡ ರಚಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ತಂಡದ ಯುವಕರು ತಾಲೂಕಿನ ಪ್ರತಿ ಹಳ್ಳಿಗೆ ಭೇಟಿ ನೀಡಿ ಅಲ್ಲಿನ ಜನರಿಗೆ ಉಚಿತವಾಗಿ ಆರೋಗ್ಯ ಕಾರ್ಡ್, ಕಾರ್ಮಿಕ ಕಾರ್ಡ್ ಮಾಡಿಕೊಡುತ್ತಿದ್ದಾರೆ ಎಂದು ತಿಳಿಸಿದರು.
ಯುವ ಮುಖಂಡ ಅರವಿಂದ ಬಿಲ್ಲವ್ ಮಾತನಾಡಿ, ರಾಜ್ಯ-ಕೇಂದ್ರ ಸರ್ಕಾರ ಬಡ ಜನರಿಗಾಗಿ ಸಾಕಷ್ಟು ಯೋಜನೆ ಜಾರಿಗೆ ತಂದಿದೆ. ಆದರೆ ಜಾಗೃತಿ-ಅರಿವಿನ ಕೊರತೆಯಿಂದ ಅವುಗಳನ್ನು ಬಳಸಿಕೊಳ್ಳುವಲ್ಲಿ ಬಹುತೇಕರು ವಿಫಲರಾಗುತ್ತಿದ್ದಾರೆ. ಇದರಿಂದ ಯೋಜನೆಗಳು ನಿರ್ದಿಷ್ಟ ಗುರಿ ಸಾಧಿಸುತ್ತಿಲ್ಲ. ಇದನ್ನು ಪರಿಗಣಿಸಿದ ಶಾಸಕರು ಈ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ತಿಳಿಸಿದರು.
ರಾಜೂಗೌಡ ಗ್ರೌಂಡ್ ವರ್ಕ್ ಟೀಂ ಮುಖ್ಯಸ್ಥ ಶರಣು ನಾಯಕ ಮಾತನಾಡಿ, ಹುಣಸಗಿ ಮತ್ತು ಸುರಪುರ ತಾಲೂಕಿನಲ್ಲಿ ಈಗಾಗಲೇ ಉಚಿತವಾಗಿ 80 ಸಾವಿರ ಆರೋಗ್ಯ ಮತ್ತು 200 ಕಾರ್ಮಿಕ ಕಾರ್ಡ್ ಮಾಡಿಕೊಡಲಾಗಿದೆ. ದಿವಳಗುಡ್ಡ, ರಂಗಂಪೇಟೆ, ತಿಮ್ಮಾಪುರ, ಹಸನಾಪುರ ವಾರ್ಡ್‌ಗಳಲ್ಲಿ ಒಟ್ಟು 2200 ಕಾರ್ಡ್ ಮಾಡಿಕೊಡಲಾಗಿದೆ ಎಂದರು.
ಸಂಧ್ಯಾಸುರಕ್ಷಾ, ವಿಧವಾ, ವಿಕಲಚೇತನ, ಭಾಗ್ಯ ಲಕ್ಷ್ಮೀ ಬಾಂಡ್, ಕಾರ್ಮಿಕ ಕಾರ್ಡ್, ಪ್ರಧಾನಮಂತ್ರಿ ಕೃಷಿ ಸನ್ಮಾನ್, ಪ್ರಧಾನಮಂತ್ರಿ ಫಸಲ್ ಬೀಮಾ, ಜೀವನಜ್ಯೋತಿ ಹೀಗೆ ಇತರೆ ಯೋಜನೆಗಳಿಗೆ ಅರ್ಜಿ ಸ್ವೀಕರಿಸಿ ಯೋಜನೆ ತಲುಪಿಸಲಾಗುವುದು ಎಂದರು.