ಸುರಪುರ: ತಾಲೂಕಿನ ಆಲ್ದಾಳ ಗ್ರಾಪಂ ಕಚೇರಿ ಆವರಣದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿ ಕಾರ್ಮಿಕ ಸಂಘ ನಾಗರಾಳ ಗ್ರಾಮ ಘಟಕದ ನೇತೃತ್ವದಲ್ಲಿ ಕೃಷಿ ಕೂಲಿ ಕಾರ್ಮಿಕರು ಶುಕ್ರವಾರ ಪ್ರತಿಭಟಿಸಿದರು.
ಹೋರಾಟದ ನೇತೃತ್ವ ವಹಿಸಿದ್ದ ಕರ್ನಾಟಕ ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ದಾವುಲ್ಸಾಬ್ ನದಾಫ್ ಮಾತನಾಡಿ, ಸಕಾಲಕ್ಕೆ ಮಳೆಯಾಗದೆ ಕೃಷಿ ಚಟುವಟಿಕೆಗಳು ನಿಂತು ಹೋಗಿವೆ. ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಕಾರ್ಮಿಕರು ಕಂಗಾಲಾಗಿದ್ದಾರೆ. ಒಪ್ಪತಿನ ಊಟಕ್ಕೂ ಸಮಸ್ಯೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಸ್ಥಳೀಯವಾಗಿ ಕೆಲಸ ಸಿಗದ ಕಾರಣ ಕೃಷಿ ಕೂಲಿ ಕಾರ್ಮಿಕರು ಹೊಟ್ಟೆ ಪಾಡಿಗಾಗಿ ದೂರದ ನಗರ ಪ್ರದೇಶಗಳಿಗೆ ಗುಳೆ ಹೋಗುತ್ತಿದ್ದಾರೆ. ಜೀವನ ನಡೆಸುವುದೇ ದೊಡ್ಡ ಸಮಸ್ಯೆಯಾಗಿದೆ. ಕಾರಣ ಸ್ಥಳೀಯವಾಗಿ ಖಾತ್ರಿ ಯೋಜನೆ ಆರಂಭಿಸಿ ಕೆಲಸ ಕೊಡುವ ಮೂಲಕ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಜಾಬ್ ಕಾರ್ಡ್ ಇಲ್ಲದವರಿಗೆ ಜಾಬ್ ಕಾರ್ಡ್ ಕೊಡಬೇಕು. ಫಾರಂ 6 ಸ್ವೀಕರಿಸಿ ಕೆಲಸ ಕೊಡಬೇಕು. ಗ್ರಾಮಸಭೆ ಮೂಲಕ ಕೂಲಿ ಕಾರ್ಮಿಕರಿಗೆ ಮನೆ ಹಂಚಿಕೆ ಮಾಡಬೇಕು. ಎಂಎನ್‌ಆರ್‌ಇಜಿಎ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಬರೆದ ಮನವಿ ಪತ್ರವನ್ನು ಪಿಡಿಒ ರಾಜಕುಮಾರ ಸುಬೇದಾರ್ ಅವರಿಗೆ ಸಲ್ಲಿಸಲಾಯಿತು.
ಜೂನ್ 18ರಂದು ಜಾಬ್ ಕಾರ್ಡ್ ನೀಡಿ ಕೆಲಸ ಕೊಡಲಾಗುವುದು. ಫಾರಂ ನಂ. 6 ಸ್ವೀಕರಿಸಲಾಗುವುದು. ಅಲ್ಲದೆ 24ರಂದು ಕ್ರಿಯಾ ಯೋಜನೆ ಸಲ್ಲಿಸಲಾಗುವುದು ಎಂದು ಗ್ರಾಪಂ ಅಧಿಕಾರಿಗಳು ಭರವಸೆ ನೀಡಿದರು. ಸಂಘದ ರಾಜ್ಯ ಸಮಿತಿಯ ಜಂಟಿ ಕಾರ್ಯದರ್ಶಿ ಮಲ್ಲಮ್ಮ ಕೊಡ್ಲಿ, ಸಂಚಾಲಕ ಶರಣಪ್ಪ ಅನ್ಸೂರು, ಕಾರ್ಯದರ್ಶಿ ಖಾಜಾ ಸಾಬ್ ಬೋನ್ಹಾಳ, ಅಹ್ಮದ್ ಪಠಾಣ ಸೇರಿದಂತೆ ಕೃಷಿ ಕೂಲಿ ಕಾರ್ಮಿಕರು ಇದ್ದರು.