ಸುರಪುರ: ನೆರೆ ಹಾವಳಿಗೆ ತುತ್ತಾಗಿ ಬದುಕು ಕಳೆದುಕೊಂಡ ತಾಲೂಕಿನ ವಿವಿಧ ಗ್ರಾಮಗಳ 3 ಸಾವಿರಕ್ಕೂ ಅಧಿಕ ನೆರೆ ಸಂತ್ರಸ್ತರ ಇಲ್ಲಿಯ ಎಪಿಎಂಸಿ ಗಂಜಿ ಕೇಂದ್ರದಲ್ಲಿ ದಾಖಲಾಗಿದ್ದಾರೆ.
ಪ್ರವಾಹ ಹೆಚ್ಚಳ ಭೀತಿಯಿಂದ ಶಳ್ಳಗಿ, ಮುಷ್ಟಳ್ಳಿ, ಕರ್ನಾಳ, ಹೆಮ್ಮಡಗಿ, ಸೂಗೂರು, ಚೌಡೇಶ್ವರಿಹಾಳ ಹಾವಿನಾಳ ದೇವಾಪುರ ಸೇರಿದಂತೆ ಇತರೆ ಗ್ರಾಮಗಳ ಜನರು ನಿರಾಶ್ರಿತ ಕೇಂದ್ರದಲ್ಲಿ ಸುರಕ್ಷತೆ ಪಡೆದುಕೊಂಡಿದ್ದಾರೆ.
ಎಲ್ಲಾ ಸಂತ್ರಸ್ತರಿಗೆ ತಾಲೂಕು ಆಡಳಿತ ಊಟ, ಉಪಹಾರ, ವಸತಿ ಸೇರಿದಂತೆ ಸಕಲ ಸೌಲಭ್ಯ ಕಲ್ಪಸಿದೆ. ವೈದ್ಯಕೀಯ ತಪಾಸಣೆ ನಡೆಸಿ ಔಷದೋಪಚಾರ ನೀಡಿದೆ. ವಿವಿಧ ಸಂಘ ಸಂಸ್ಥೆಗಳ ಮುಖಂಡರು ಕೇಂದ್ರಕ್ಕೆ ಆಗಮಿಸಿ ಸಂತ್ರಸ್ತರಿಗೆ ವಿವಿಧ ಸಾಮಗ್ರಿ ನೀಡಿ ಮಾನವೀಯತೆ ಮೆರೆದಿದ್ದಾರೆ.
ಸುರಪುರ ವಲಯದ ಅಂಗನವಾಡಿಯ 50ಕ್ಕೂ ಹೆಚ್ಚು ಕಾರ್ಯಕರ್ತೆಯರು ಸ್ವಯಂ ಪ್ರೇರಿತರಾಗಿ ಕೇಂದ್ರಕ್ಕೆ ಆಗಮಿಸಿ ಸಂತ್ರಸ್ತರ ಸೇವೆ ಮಾಡಿದರು. ಊಟ, ಉಪಾಹರ, ನೀರು ನೀಡಿ ಶ್ರಮದಾನ ಸೇವೆ ಮಾಡಿದರು.
ಶಾಸಕ ನರಸಿಂಹ ನಾಯಕ (ರಾಜುಗೌಡ) ಅಭಿಮಾನಿಗಳ ಬಳಗದಿಂದ ಶನಿವಾರ ರಾತ್ರಿ ಸಂತ್ರಸ್ತರಿಗೆ 1 ಸಾವಿರ ಚಾದರ್ ವಿತರಿಸಿ ಸಂತ್ರಸ್ತರಿಗೆ ನೆರವಾಗಿದ್ದಾರೆ. ಅಭಿಮಾನಿಗಳ ಬಳಗ ಕೈಗೊಂಡಿರುವ ನೆರವಿಗೆ ಶಾಸಕ ರಾಜುಗೌಡ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ರಂಗಂಪೇಟೆಯ ಮಜೀದ ಎ ಶೇಕ್-ಮಾಕ್ಸರ್- ಬೈತುಲ್ ಮಹಲ್ ಇಸ್ಲಾಮಿಕ ಸಂಘಟನೆಯಿಂದ ಸಂತ್ರಸ್ತರಿಗೆ ಬಿರಿಯಾನಿ ಊಟ ಉಣಬಡಿಸಿ ಅನ್ನ ದಾಸೋಹ ಸೇವೆ ಮಾಡಿ ಮಾನವೀಯತೆ ತೋರಿದರು. ರಂಗಂಪೇಟೆಯ ದಿವಂಗತ ನಿಂಗಪ್ಪ ಎಲಿಗಾರ ಸ್ಮರಣಾರ್ಥವಾಗಿ ಎಲಿಗಾರ ಪರಿವಾರದವರು 50 ಲೀಟರ್ ನಂದಿನಿ ಹಾಲು ವಿತರಿಸಿದರು.