ಸುರಪುರ: ತಾಲೂಕಿನ ಬೋನ್ಹಾಳ ಗ್ರಾಮದಲ್ಲಿ ಹೋಳಿ ಹಬ್ಬದ ನಿಮಿತ್ತ ಜರುಗಿದ ಗ್ರಾಮೀಣ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಬೋನ್ಹಾಳ ಟಿಪ್ಪು ಸುಲ್ತಾನ್ ತಂಡ ಮೊದಲ ಸ್ಥಾನ ಗಳಿಸಿ ಪ್ರಶಸ್ತಿ ಗಿಟ್ಟಿಸಿಕೊಂಡಿತು.
ಫೈನಲ್ ಪಂದ್ಯದಲ್ಲಿ ಅದೇ ಗ್ರಾಮದ ವೀರ ಸಾರ್ವಕರ ತಂಡದ ವಿರುದ್ಧ 35-22 ಅಂತರಿಂದ ಪ್ರಶಸ್ತಿ ಪಡೆದು ಜಯ ಗಳಿಸಿತು. ಆಯೋಜಕರು ವಿಜೇತ ತಂಡಕ್ಕೆ ನಗದು ಮತ್ತು ಪ್ರಶಸ್ತಿ ಫಲಕ ನೀಡಿ ಗೌರವಿಸಿದರು. ಟಿಪ್ಪು ಸುಲ್ತಾನ್ ತಂಡದ ಸದ್ದಾಂ ಹುಸೇನ್ ಅತ್ಯುತ್ತಮ ಹಿಡಿತಗಾರ ಪ್ರಶಸ್ತಿಗೆ ಭಾಜನರಾದರು.
ಸಾಹಿತಿ ಜಿ.ವಿ. ಶಿವುಕುಮಾರ ಅಮ್ಮಾಪುರ ಪ್ರಶಸ್ತಿ ವಿತರಿಸಿ ಮಾತನಾಡಿ, ದೇಶದ ಸಂಸ್ಕೃತಿ ಮತ್ತು ಜಾನಪದ ಸಾಹಿತ್ಯ ಹಳ್ಳಿಗಳಲ್ಲಿ ಮಾತ್ರ ಉಳಿದಿದೆ. ಹೀಗಾಗಿ ಸಂಸ್ಕೃತಿ ಕಾಪಾಡಿಕೊಂಡು ಬರುವಲ್ಲಿ ಹಳ್ಳಿಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಗ್ರಾಮೀಣ ಕ್ರೀಡೆಗಳನ್ನು ಉಳಿಸಿ-ಬೆಳೆಸಿದರೆ ಮುಂದೊಂದು ದಿನ ನಮ್ಮ ಅನೇಕ ದೇಶಿ ಕ್ರೀಡೆಗಳು ನಶಿಸಿ ಹೋಗುವ ಅಪಾಯವಿದೆ ಎಂದರು.
ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಪ್ರಸ್ತುತ ಯಾಂತ್ರಿಕ ಜೀವನದಲ್ಲಿ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಪ್ರತಿಯೊಬ್ಬರಿಗೂ ಕ್ರೀಡೆ, ಯೋಗ, ವ್ಯಾಯಾಮ ಅವಶ್ಯಕವಾಗಿದೆ ಎಂದು ಸಲಹೆ ನೀಡಿದರು.
ಬಸಲಿಂಗಪ್ಪ ನಾವದಗಿ, ಬಸಯ್ಯ ಹಿರೇಮಠ, ಗುರು ನಾವದಗಿ, ಗೌಡಪ್ಪ ಬಬಲಾದಿ, ಗುರು ಬಸರಡ್ಡಿ, ಮೌಲಾಲ್ ಅಹ್ಮದ್ ಸೇರಿದಂತೆ ಕಬಡ್ಡಿ ಆಟಗಾರರು ಮತ್ತು ಗ್ರಾಮದ ಇತರರು ಇದ್ದರು.