Advertisement

ಗೋಪಾಲಸ್ವಾಮಿ ವಿರುದ್ಧ ಸೂರಜ್‌ ರೇವಣ್ಣ ಸ್ಪರ್ಧೆ?

12:58 PM Nov 12, 2021 | Team Udayavani |

ಹಾಸನ: ವಿಧಾನ ಪರಿಷತ್‌ಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಡಿ.10 ರಂದು ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ಪ್ರಯತ್ನ ನಡೆಸಿವೆ. 2023ರ ವಿಧಾನಸಭಾ ಚುನಾವಣೆಗೆ ಮೇಲ್ಮನೆಗೆ ನಡೆಯುವ ಚುನಾವಣೆಯ ಫ‌ಲಿತಾಂಶವು ದಿಕ್ಸೂಚಿ ಎಂದೇ ಭಾವಿಸಿರುವ ರಾಜಕೀಯ ಪಕ್ಷಗಳು ಗೆಲ್ಲುವ ಅಭ್ಯರ್ಥಿಗಳಿಗಾಗಿಯೇ ಹುಡುಕಾಟ ಆರಂಭಿಸಿವೆ.

Advertisement

ಈ ನಿಟ್ಟಿನಲ್ಲಿ ಹಾಸನದಲ್ಲಿ ಜಿಲ್ಲೆಯ ಜೆಡಿಎಸ್‌ ಶಾಸಕರು ಹಾಗೂ ಮುಖಂಡರ ಸಭೆ ಶುಕ್ರವಾರ ನಿಗದಿಯಾಗಿದೆ. ಹಾಸನ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ಒಬ್ಬ ಸದಸ್ಯನನ್ನು ಆಯ್ಕೆ ಮಾಡಬೇಕಾಗಿದ್ದು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಮುಖಂಡರು ಈ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿ ಗೆಲ್ಲಲೇ ಬೇಕು ಎಂಬ ಹಟಕ್ಕೆ ಬಿದ್ದಂತಿವೆ. ಆಡಳಿತಾರೂಢ ಬಿಜೆಪಿಗೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚು ಬಲ ಇಲ್ಲ.

ಹಾಗಾಗಿ ಜಿಲ್ಲೆಯಲ್ಲಿ ಬಿಜೆಪಿ ಗಂಭೀರವಾಗಿ ಈ ಚುನಾವಣೆಯನ್ನು ಪರಿಗಣಿಸುತ್ತಿಲ್ಲ. ಆದರೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ಗೆ ಈ ಚುನಾವಣೆ ಗೆಲ್ಲುವುದು ಅಸ್ತಿತ್ವ ಹಾಗೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರು ತಮ್ಮ ಪಕ್ಷದ ಅಭ್ಯರ್ಥಿ ಯಾರಾಗಬೇಕು ಎಂದು ಈಗಾಗಲೇ ಅನೌಪಚಾರಿಕವಾಗಿ ಚರ್ಚೆ ನಡೆಸಿದ್ದಾರೆ.

ಇದುವರೆಗಿನ ಬೆಳವಣಿಗೆಗಳ ಪ್ರಕಾರ ಕಾಂಗ್ರೆಸ್‌ನಿಂದ ಹಾಲಿ ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ ಅವರನ್ನೇ ಸ್ಪರ್ಧೆಗಿಳಿಸಲು ಕಾಂಗ್ರೆಸ್‌ ಮುಖಂಡರು ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್‌ನ ಮೂಲಗಳು ತಿಳಿಸಿವೆ. ಹಾಗೆಯೇ ಜೆಡಿಎಸ್‌ ನಿಂದ ಮಾಜಿ ಸಚಿವ, ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್‌.ಡಿ.ರೇವಣ್ಣ ಹಿರಿಯ ಪುತ್ರ ಡಾ.ಸೂರಜ್‌ ರೇವಣ್ಣ ಅವರನ್ನು ಸ್ಪರ್ಧೆಗಿಳಿಸಲು ತೀರ್ಮಾನವಾಗಿದೆ ಎಂದು ತಿಳಿದು ಬಂದಿದೆ. ಎಂ.ಎ.ಗೋಪಾಲಸ್ವಾಮಿ ಅವರು ಮೇಲ್ಮನೆಗೆ 2ನೇ ಬಾರಿ ಸ್ಪರ್ಧೆಗಿಳಿಯಲು ಹಿಂದೇಟು ಹಾಕಿ ಮುಂಬರುವ ವಿಧಾನ ಸಭಾ ಚುನಾವಣೆಗೆ ಶ್ರವಣಬೆಳಗೊಳ ಕ್ಷೇತ್ರದಿಂದ ಸ್ಪರ್ಧೆಗಿಳಿಯುವ ಆಸೆಯನ್ನು ರಾಜ್ಯ ಕಾಂಗ್ರೆಸ್‌ ವರಿಷ್ಠರ ಬಳಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:- ಪತ್ರಕರ್ತರು ಸಮಾಜದ ಪ್ರತಿಬಿಂಬ: ರಾಜುಗೌಡ

Advertisement

ಆದರೆ, ಈ ಬಾರಿ ಮೇಲ್ಮನೆ ಚುನಾವಣೆಗೆ ಹಾಸನದಿಂದ 2ನೇ ಬಾರಿ ಸ್ಪರ್ಧಿಸಬೇಕು. ಪ್ರಸ್ತುತ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಯಾಗಿರುವುದರಿಂದ ಗೋಪಾಲಸ್ವಾಮಿ ಸ್ಪರ್ಧೆಗಿಳಿದರೆ ಗೆಲ್ಲಬಹುದು. ಒಂದು ವೇಳೆ ಈ ಚುನಾವಣೆಯಲ್ಲಿ ಸೋತರೂ ಮುಂಬರುವ ಚುನಾವಣೆಗೆ ಶ್ರವಣಬೆಳಗೊಳ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್‌ ನೀಡುವುದಾಗಿ ಖಚಿತ ಭರವಸೆ ನೀಡಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಈ ಬೆಳವಣಿಗೆ ಹಿನ್ನಲೆಯಲ್ಲಿ ಗೋಪಾಲಸ್ವಾಮಿ ಅವರು 2ನೇ ಬಾರಿಗೆ ಸ್ಪರ್ಧೆಗಿಳಿಯುವ ಸಾಧ್ಯತೆ ಹೆಚ್ಚಿದೆ. ಇನ್ನು ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆಯ ಬಗ್ಗೆ ಈ ವರೆಗೂ ಚರ್ಚೆ ನಡೆಸುವ ಸೂಚನೆಗಳೂ ಕಂಡು ಬಂದಿಲ್ಲ. ಮಾಜಿ ಸಚಿವ ಎ.ಮಂಜು ಅವರ ಹೆಸರು ಕೇಳಿ ಬಂದಿತ್ತಾದರೂ ಅವರು ಸ್ಪರ್ಧೆಗಿಳಿಯಲು ಹಿಂದೇಟು ಹಾಕುತ್ತಿದ್ದಾರೆ.

ಎ.ಮಂಜು ಅವರು ಮುಂಬರುವ ವಿಧಾನಸಭಾ ಚುನಾವಣೆಯ ಸ್ಪರ್ಧೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ತಮ್ಮ ಪುತ್ರ ಡಾ.ಮಂತರ್‌ಗೌಡ ಅವರ ರಾಜಕೀಯ ಭವಿಷ್ಯದ ಬಗ್ಗೆ ಯೋಜಿಸುತ್ತಿದ್ದಾರೆ ಎಂದು ಅವರ ಆಪ್ತ ವಲಯಗಳು ತಿಳಿಸಿವೆ. ಬಿಜೆಪಿಯಲ್ಲಿ ಇನ್ನೂ ಅಭ್ಯರ್ಥಿಯ ಬಗ್ಗೆ ಚಿಂತನೆಯನ್ನೇ ನಡೆಸಿಲ್ಲ. ಯಾವ ನಿಲುವು ತೆಗೆದುಕೊಂಡರೆ ಜಿಲ್ಲೆಯಲ್ಲಿ ಜೆಡಿಎಸ್‌ ಪ್ರಾಬಲ್ಯ ಕುಗ್ಗಿಸುವುದಷ್ಟೇ ಈಗ ಜಿಲ್ಲೆಯ ಬಿಜೆಪಿ ಮುಖಂಡರ ಮೊದಲ ಆದ್ಯತೆ ಆಗಿದೆ. ಈ ಚುನಾವಣೆಯ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಪಕ್ಷದ ಮುಖಂಡರ ಅಭಿಪ್ರಾಯವಾಗಿದೆ.

ಮನೆಮಗನ ಕಣಕ್ಕಿಳಿಸಲು ಕುಟುಂಬದಲ್ಲಿ ಒಲವು –

ಜೆಡಿಎಸ್‌ನಿಂದ ಭವಾನಿ ರೇವಣ್ಣ ಅವರನ್ನು ಸ್ಪರ್ಧೆಗಿಳಿಸಲು ಎಚ್‌.ಡಿ.ರೇವಣ್ಣ ಅವರು ಆಸಕ್ತಿ ತೋರಿದ್ದರೆಂದು, ಆದರೆ ಭವಾನಿ ರೇವಣ್ಣ ಅವರ ಬದಲು ರೇವಣ್ಣರ ಪುತ್ರ ಡಾ.ಸೂರಜ್‌ ಅವರನ್ನು ಸ್ಪರ್ಧೆಗಿಳಿಸಲು ಗೌಡರ ಕುಟುಂಬ ಒಲವು ವ್ಯಕ್ತಪಡಿಸಿದೆ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ. ಎಚ್‌.ಡಿ.ರೇವಣ್ಣ ಸೇರಿದಂತೆ ಶಾಸಕರೂ ಡಾ.ಸೂರಜ್‌ ರೇವಣ್ಣ ಅವರನ್ನು ಸಮ್ಮತಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಸಮ್ಮುಖದಲ್ಲಿ ಶುಕ್ರವಾರ ಜಿಲ್ಲೆಯ ಜೆಡಿಎಸ್‌ ಶಾಸಕರು ಹಾಗೂ ಪಕ್ಷದ ಮುಖಂಡರ ಸಭೆಯನ್ನು ಶುಕ್ರವಾರ ಔಪಚಾರಿಕವಾಗಿ ನಡೆಸಿ ಡಾ.ಸೂರಜ್‌ ರೇವಣ್ಣ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next