ಮುಡಿಪು: ವಿದ್ಯಾಸಂಸ್ಥೆಗಳಲ್ಲಿ ಕಲೆ ಸಂಸ್ಕೃತಿಯನ್ನು ಬೆಳೆಸುವ ಕಾರ್ಯ ನಿರಂತರವಾಗಿ ನಡೆದರೆ ಎಳವೆಯಲ್ಲಿಯೇ ವಿದ್ಯಾರ್ಥಿಗಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಕೆ. ಬೈರಪ್ಪ ಅವರು ಅಭಿಪ್ರಾಯಪಟ್ಟರು.
ಮುಡಿಪುವಿನಲ್ಲಿ ನಡೆಯುತ್ತಿರುವ ಸೂರಜ್ ಕಲಾಸಿರಿ-2017 ಸಾಂಸ್ಕೃತಿಕ ಉತ್ಸವದ ಎರಡನೇ ದಿನವಾದ ಶುಕ್ರವಾರ
ಸೂರಜ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಸಾಧನ ಶ್ರೀ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ
ಸಾಧನೆಗೈದ ಗಣ್ಯರಿಗೆ ಸಾಧನಶ್ರೀ ಪ್ರಶಸ್ತಿ ಪ್ರಧಾನಗೈದು ಮಾತನಾಡಿದರು.
ಪಠ್ಯದೊಂದಿಗೆ ಪಠ್ಯೇತರ ಚಟುವಿಕೆಗಳು ಮಕ್ಕಳಲ್ಲಿರುವ ಪ್ರತಿಭೆಗೆ ಪೂರಕವಾಗುತ್ತದೆ. ಅದರಲ್ಲೂ ನಮ್ಮ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದಾಗ ವಿದ್ಯಾರ್ಥಿಗಳಲ್ಲಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಉತ್ತೇಜನ ನೀಡಿದಂತಾಗುತ್ತದೆ. ಇದಕ್ಕೆ ಶಾಲೆಯ ಶಿಕ್ಷಕರೊಂದಿಗೆ ಹೆತ್ತವರ ಪ್ರೋತ್ಸಾಹವೂ ಅಗತ್ಯವಿದ್ದು, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಇಂತಹ ಕಾರ್ಯಕ್ರಮವನ್ನು ಸೂರಜ್ ಶಿಕ್ಷಣ ಸಂಸ್ಥೆಯು ನಡೆಸುತ್ತಿರುವುದು ಶ್ಲಾಘನೀಯವಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ವಿಜೃಂಭಣೆಯಿಂದ ನಡೆಯುವಂತಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಕರುಣಾಕರನ್, ಹೇಮಂತ್ ಕುಮಾರ್, ಇಲಿಯಾಸ್ ಸ್ಯಾಂಟೀಸ್, ನವೀನ್ ಕಿಲ್ಲೆ, ದೇವದಾಸ್ ರೈ, ಪ್ರಕಾಶ್ ಶೆಟ್ಟಿ, ಶ್ರೀಪತಿ ಭಟ್ ಮೂಡಬಿದ್ರೆ ಇವರನ್ನು ಸಮ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಗಳೂರಿನ ಕೌನ್ಸಿಲರ್ ಬಿ. ರೇವತಿ ಸನಿಲ್, ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಸೂರಜ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ರೇವಣ್ಕರ್, ಸಮಿತಿ ಉಪಾಧ್ಯಕ್ಷ ಹೈದರ್ ಪರ್ತಿಪ್ಪಾಡಿ, ತಾಲೂಕು ಪಂಚಾಯತ್ ಸದಸ್ಯ ನವೀನ್ ಪಾದಲ್ಪಾಡಿ, ಪ್ರಚಾರ ಸಮಿತಿ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ಹೇಮಲತಾ ರೇವಣ್ಕರ್, ಗೀತಾ ಕೆ. ಉಚ್ಚಿಲ್ ಉಪಸ್ಥಿತರಿದ್ದರು. ಸೂರಜ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಂಜುನಾಥ ರೇವಣ್ಕರ್ ಅವರು ಸ್ವಾಗತಿಸಿದರು. ಭಾಸ್ಕರ್ ರೈ ಕುಕ್ಕುವಳ್ಳಿ ವಂದಿಸಿದರು. ಲಕ್ಷ್ಮೀಶ ಹೆಗಡೆ ಸೋಂದಾ ಕಾರ್ಯಕ್ರಮ ನಿರೂಪಿಸಿದರು.