Advertisement

ಬಡ್ತಿಯಲ್ಲಿ ಮೀಸಲು ಸುಪ್ರೀಂನಿಂದ ವಜಾ; ಕರ್ನಾಟಕ ಸರ್ಕಾರಕ್ಕೆ ಹಿನ್ನಡೆ

03:45 AM Feb 11, 2017 | |

ನವದೆಹಲಿ: ಹಿಂದುಳಿದ ವರ್ಗಗಳ ಉದ್ಯೋಗಿಗಳಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ಕಾನೂನಿನ ವಿಚಾರದಲ್ಲಿ ಕರ್ನಾಟಕ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ಒದಗಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಹೀಗಾಗಿ, ಕರ್ನಾಟಕ ಸರ್ಕಾರದ 39 ವರ್ಷಗಳ ಕೋಟಾ ಕಾನೂನಿಗೆ ಮಾನ್ಯತೆಯಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

Advertisement

ಸುಪ್ರೀಂನ ಈ ಮಹತ್ವದ ತೀರ್ಪಿನಿಂದಾಗಿ 1978ರಿಂದಲೂ ಕರ್ನಾಟಕ ಸರ್ಕಾರವು ಮೇಲಿನ ಕಾನೂನಿನನ್ವಯ ಎಸ್‌ಸಿ, ಎಸ್‌ಟಿ ನೌಕರರಿಗೆ ನೀಡಿದ್ದ ಬಡ್ತಿಯು ರದ್ದಾದಂತಾಗಿದೆ. ಸರ್ಕಾರದ 63 ಇಲಾಖೆಗಳಾದ್ಯಂತ ಇರುವ ನೂರಾರು ನೌಕರರ ಮೇಲೆ ಇದು ಭಾರಿ ಪರಿಣಾಮ ಬೀರಲಿದೆ. ಮೀಸಲಾತಿ ನೀಡಿ ಯಾರಿಗೆಲ್ಲ ಮುಂಬಡ್ತಿ ನೀಡಲಾಗಿತ್ತೋ, ಅವರಿಗೆ ಹಿಂಬಡ್ತಿ ನೀಡಲು 3 ತಿಂಗಳ ಕಾಲಾವಕಾಶವನ್ನು ನ್ಯಾಯಾಲಯ ಒದಗಿಸಿದೆ. ಈ ಅವಧಿಯ ಬಳಿಕ, ಹಲವು ವರ್ಷಗಳಿಂದ ಬಡ್ತಿಗಾಗಿ ಕಾಯುತ್ತಿದ್ದ ಸಾಮಾನ್ಯ ಹಾಗೂ ಇತರೆ ಹಿಂದುಳಿದ ವರ್ಗಗಳ ನೌಕರರಿಗೆ ನ್ಯಾಯ ಸಿಗಲಿದ್ದು, ಅವರು ನೆಮ್ಮದಿಯ ನಿಟ್ಟುಸಿರು ಬಿಡಬಹುದಾಗಿದೆ.

2011ರಲ್ಲಿ ಬಿಡಿಎ ಎಂಜಿನಿಯರಿಂಗ್‌ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಪವಿತ್ರಾ ಎಂಬವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಗುರುವಾರ ವಿಚಾರಣೆ ನಡೆಸಿದ ನ್ಯಾ. ಆದರ್ಶ ಗೋಯೆಲ್‌ ಮತ್ತು ನ್ಯಾ.ಯು ಯು ಲಲಿತ್‌ ಅವರನ್ನೊಳಗೊಂಡ ನ್ಯಾಯಪೀಠ, “ಸೂಕ್ತ ಪ್ರಕ್ರಿಯೆಗಳನ್ನು ಅನುಸರಿಸದೇ ಎಸ್‌ಸಿ ಹಾಗೂ ಎಸ್‌ಟಿ ನೌಕರರಿಗೆ ಬಡ್ತಿಯನ್ನು ನೀಡಿರುವ ಕಾರಣ, “ಮೀಸಲಾತಿ ಆಧಾರದಲ್ಲಿ ಬಡ್ತಿ ನೀಡಲಾದ ಸರ್ಕಾರಿ ಅಧಿಕಾರಿಗಳ ಹಿರಿತನದ ನಿರ್ಣಯ(ರಾಜ್ಯ ನಾಗರಿಕ ಸೇವೆಗಳ ಹುದ್ದೆಗಳು) ಕಾಯ್ದೆ’ಯು ಅಸಿಂಧುವಾಗಿದೆ’ ಎಂದು ಹೇಳಿದೆ.

ವಿಚಾರಣೆ ವೇಳೆ, 2006ರ ಪ್ರಕರಣ(ಎಂ. ನಾಗರಾಜ್‌ ಕೇಸು)ವೊಂದಕ್ಕೆ ಸಂಬಂಧಿಸಿ ಸಂವಿಧಾನ ಪೀಠ ನೀಡಿದ ತೀರ್ಪನ್ನು ಉಲ್ಲೇಖೀಸಿದ ನ್ಯಾಯಪೀಠ, “ರಾಜ್ಯ ಸರ್ಕಾರವು 16(4)ನೇ ವಿಧಿಯನ್ವಯ ಮೀಸಲಾತಿ ನೀಡುವಾಗ ಹಿಂದುಳಿಯುವಿಕೆ, ಪ್ರಾತಿನಿಧ್ಯದ ಕೊರತೆ ಹಾಗೂ ದಕ್ಷತೆಯ ನಿರ್ವಹಣೆಯನ್ನು ಪ್ರದರ್ಶಿಸಬೇಕಾಗುತ್ತದೆ. ಎಸ್‌ಸಿ, ಎಸ್‌ಟಿ ಜನಸಂಖ್ಯೆಗೆ ಹೋಲಿಸಿದರೆ, ಬಡ್ತಿಗೆ ಅರ್ಹವಾದ ಹುದ್ದೆಯಲ್ಲಿ ಅವರ ಪ್ರಾತಿನಿಧ್ಯ ಕಡಿಮೆಯಿದೆ ಎಂಬ ಒಂದೇ ಒಂದು ಕಾರಣ ನೀಡಿ, ಜೂನಿಯರ್‌ ಆಗಿದ್ದರೂ ಅವರಿಗೆ ಸೀನಿಯರ್‌ ಆಗಿ ಬಡ್ತಿ ನೀಡುವುದು ಸರಿಯಾದ ಕ್ರಮವಲ್ಲ. ಇದರಿಂದ, ನಿಜಕ್ಕೂ ಬಡ್ತಿಗೆ ಅರ್ಹರಾದ ಇತರೆ ವರ್ಗದವರಿಗೆ ಮೋಸ ಮಾಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ನ್ಯಾಯಪೀಠ ಹೇಳಿದ್ದೇನು?
– ಪ್ರಾತಿನಿಧ್ಯ ಕಡಿಮೆಯಿದೆ ಎಂಬ ಕಾರಣಕ್ಕಾಗಿ ಕೆಳಹಂತದ ನೌಕರರಿಗೆ ಬಡ್ತಿ ನೀಡುವ ಕ್ರಮ ಸರಿಯಲ್ಲ
– ಕರ್ನಾಟಕ ಸರ್ಕಾರದ 39 ವರ್ಷಗಳ ಕೋಟಾ ಕಾನೂನು ಅಸಿಂಧು
– ಗುರುವಾರದಿಂದ ಆರಂಭವಾಗಿ 3 ತಿಂಗಳ ಅವಧಿಯೊಳಗೆ ಬಡ್ತಿಯ ಪಟ್ಟಿಯನ್ನು ಸರ್ಕಾರ ತೀರ್ಪಿಗೆ ಅನುಗುಣವಾಗಿ ಪರಿಷ್ಕರಿಸಬೇಕು
– ಈಗಾಗಲೇ ಬಡ್ತಿ ಪಡೆದು ನಿವೃತ್ತಿಯಾದವರಿಗೆ ಹಾಗೂ ಹಣಕಾಸು ಸೌಲಭ್ಯ ಪಡೆದವರಿಗೆ ಈ ತೀರ್ಪು ಅನ್ವಯಿಸುವುದಿಲ್ಲ

Advertisement
Advertisement

Udayavani is now on Telegram. Click here to join our channel and stay updated with the latest news.

Next