Advertisement

ಬಿಬಿಎಂಪಿ ಚುನಾವಣೆಗೆ ಸುಪ್ರೀಂ ಸೂಚನೆ; ಸ್ಥಳೀಯ ಸಂಸ್ಥೆಗಳ ಆಡಳಿತವನ್ನು ಸರಕಾರ ನಡೆಸುವಂತಿಲ್ಲ

01:42 AM May 21, 2022 | Team Udayavani |

ಬೆಂಗಳೂರು: ಎರಡು ವರ್ಷಗಳ ವಿಳಂಬದ ಬಳಿಕ ಕೊನೆಗೂ ಬಿಬಿಎಂಪಿ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ವಾರ್ಡ್‌ಗಳ ಮರು ವಿಂಗಡಣೆ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಅಂತಿಮಗೊಳಿಸುವ ಪ್ರಕ್ರಿಯೆ ಪೂರ್ಣಗೊಂಡ ಒಂದು ವಾರದಲ್ಲೇ ಚುನಾವಣೆಗೆ ಅಧಿಸೂಚನೆ ಹೊರಡಿಸಬೇಕು ಎಂದು ರಾಜ್ಯ ಚುನಾವಣ ಆಯೋಗಕ್ಕೆ ಶುಕ್ರವಾರ ಸುಪ್ರೀಂ ಕೋರ್ಟ್‌ ಸೂಚಿಸಿದೆ.

Advertisement

ಅಲ್ಲದೆ, ಸ್ಥಳೀಯ ಸಂಸ್ಥೆಗಳ ಆಡಳಿತವನ್ನು ರಾಜ್ಯ ಸರಕಾರ ನಡೆಸುವಂತಿಲ್ಲ. ಚುನಾಯಿತ ಸಂಸ್ಥೆಯು ಅಸ್ತಿತ್ವದಲ್ಲಿರಬೇಕು ಎಂದೂ ಕೋರ್ಟ್‌ ಹೇಳಿದೆ.

ಚುನಾವಣೆ ನಡೆಸಲು ಅಗತ್ಯವಿರುವ ವಾರ್ಡ್‌ ಮರು ವಿಂಗಡಣೆ ಪ್ರಕ್ರಿಯೆಯು(2020ರ ಹೊಸ ಕಾಯ್ದೆಗೆ ಅನುಗುಣವಾಗಿ) ಮುಂದಿನ 8 ವಾರಗಳಲ್ಲೇ ಪೂರ್ಣಗೊಳ್ಳಲಿದೆ ಎಂದು ರಾಜ್ಯ ಸರ್ಕಾರವು ಕೋರ್ಟ್‌ಗೆ ಮಾಹಿತಿ ನೀಡಿದ್ದು, ಇದನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್‌ ನ್ಯಾಯಪೀಠ, ಆದಷ್ಟು ಬೇಗ ಬಿಬಿಎಂಪಿ ಚುನಾವಣೆ ನಡೆಸುವಂತೆ ಆಯೋಗಕ್ಕೆ ಆದೇಶಿಸಿದೆ.

ವಿಜಯಪುರ ಚುನಾವಣೆಗೂ ಅಸ್ತು
ಚುನಾವಣೆಗೆ ಯಾಕೆ ತಡ ಮಾಡಲಾಗುತ್ತಿದೆ? ಪಾಲಿಕೆ ಗಳನ್ನು ಸರಕಾರ ನಡೆಸಲು ಸಾಧ್ಯವಿಲ್ಲ. ಚುನಾಯಿತ ಸಂಸ್ಥೆಯನ್ನು ರಚಿಸಲೇಬೇಕು. ನೀವು ಹೇಳಿರುವ ಸಮಯಕ್ಕೆ ಸರಿಯಾಗಿ ಎಲ್ಲ ಪ್ರಕ್ರಿಯೆಯನ್ನೂ ಮುಗಿಸಬೇಕು. ಅದಾದ ಒಂದು ವಾರದಲ್ಲಿ ಚುನಾವಣ ಆಯೋಗವು ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದೂ ನ್ಯಾಯಪೀಠ ಸೂಚಿಸಿದೆ. ಇದೇ ವೇಳೆ, ವಿಜಯಪುರ ಸ್ಥಳೀಯ ಸಂಸ್ಥೆ ಚುನಾವಣೆಗೆ ತಡೆಯಾಜ್ಞೆ ತಂದಿರುವ ಕುರಿತು ವಕೀಲ ರೋಹಿತ್‌ ಶರ್ಮಾ ಅವರು ಪ್ರಸ್ತಾಪಿಸಿದ್ದು, ಕೂಡಲೇ ನ್ಯಾಯಪೀಠ ತಡೆಯಾಜ್ಞೆಯನ್ನು ತೆರವುಗೊಳಿಸಿತು.

ಸ್ಥ. ಸಂಸ್ಥೆ ಚುನಾವಣೆ ಮೀಸಲಾತಿ ಸುಪ್ರೀಂಗೆ ಅರ್ಜಿ: ಈಶ್ವರಪ್ಪ
ಶಿವಮೊಗ್ಗ: ಮಧ್ಯಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಒಬಿಸಿ ಮೀಸಲಾತಿಯೊಂದಿಗೆ ನಡೆಸಲು ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿದೆ. ಇದನ್ನು ಆಧರಿಸಿ ರಾಜ್ಯ ಸರಕಾರದಿಂದ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುವುದು ಎಂದು ಶಾಸಕ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನದಂಡ ಅನುಸರಿಸದೇ ಒಬಿಸಿ ಮೀಸಲಾತಿ ನೀಡಬಾರದು ಒಬಿಸಿ ಮೀಸಲಾತಿ ಇಲ್ಲದೆ ಚುನಾವಣೆ ನಡೆಸುವಂತೆ ಇತ್ತೀಚೆಗೆ ಸುಪ್ರೀಂ ಕೋರ್ಟ್‌ ಆದೇಶ ನೀಡಿತ್ತು. 15 ದಿನಗಳಲ್ಲಿ ಒಬಿಸಿ ಮೀಸಲಾತಿ ವರದಿ ಸಲ್ಲಿಕೆಯಾದಲ್ಲಿ ಅದರಂತೆ ಚುನಾವಣೆ ನಡೆಸಬಹುದು ಎಂದು ಹೇಳಿದ್ದು, ಈ ಬಗ್ಗೆ ರಾಜ್ಯ ಸರಕಾರದಿಂದ ಅರ್ಜಿ ಸಲ್ಲಿಸಲಾಗಿತ್ತು ಎಂದರು.

ಸುಪ್ರೀಂ ಕೋರ್ಟ್‌ ತೀರ್ಪನ್ನು ಸ್ವಾಗತಿಸುತ್ತೇನೆ. ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದೆ. ಆದಷ್ಟು ಬೇಗ ಎಲ್ಲ ಸಿದ್ಧತೆಗಳನ್ನೂ ನಡೆಸಲಾಗುವುದು.
ಬಸವರಾಜ ಬೊಮ್ಮಾಯಿ, ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next