Advertisement

ಸುಪ್ರೀಂ ಐತಿಹಾಸಿಕ ಆದೇಶ

11:12 AM Nov 03, 2017 | Team Udayavani |

ಜನಪ್ರತಿನಿಧಿಗಳ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಕೇಸ್‌ಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವ ಸಲುವಾಗಿ ವಿಶೇಷ ನ್ಯಾಯಾಲಯ ಗಳನ್ನು ಸ್ಥಾಪಿಸಲು ಸುಪ್ರೀಂ ಕೋರ್ಟ್‌ ನ.1ರಂದು ನೀಡಿರುವ ಆದೇಶ ರಾಜಕೀಯದ ಅಪರಾಧೀಕರಣವನ್ನು ತಡೆಯುವ ನಿಟ್ಟಿನಲ್ಲಿ ಐತಿಹಾಸಿಕವಾದುದು. ಪ್ರಸ್ತುತ ಅತ್ಯಾಚಾರ ಹಾಗೂ ಇನ್ನಿತರ ಬರ್ಬರ ಅಪರಾಧ ಕೃತ್ಯಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ರೂಢಿಯಿದೆ. ಜನಪ್ರತಿನಿಧಿಗಳ ವಿರುದ್ಧವಿರುವ ಕ್ರಿಮಿನಲ್‌ ಕೇಸ್‌ಗಳನ್ನು ಇದೇ ಮಾದರಿಯಲ್ಲಿ ವಿಚಾರಣೆಗೊಳಪಡಿಸಿ ಕಾಲಮಿತಿಯೊಳಗೆ ತೀರ್ಪು ಪ್ರಕಟಿಸುವುದರಿಂದ ಪ್ರಜಾಪ್ರಭುತ್ವಕ್ಕೆ ಮಾತ್ರವಲ್ಲದೆ ಸ್ವತಃ ಜನಪ್ರತಿನಿಧಿಗಳಿಗೂ ಲಾಭವಿದೆ.

Advertisement

ಇತ್ತೀಚೆಗಿನ ವರ್ಷಗಳಲ್ಲಿ ಅಪರಾಧಿ ಹಿನ್ನೆಲೆ ಜನನಾಯಕರು ಸಂಸತ್ತು ಮತ್ತು ವಿಧಾನಸಭೆಗೆ ಆಯ್ಕೆಯಾಗಿ ಹೋಗುವ ಪ್ರವೃತ್ತಿ ಹೆಚ್ಚುತ್ತಿದೆ. ಧನ ಬಲ, ತೋಳ್ಬಲ ಮತ್ತು ಜನ ಬಲ ಇದ್ದವರು ಸುಲಭವಾಗಿ ಚುನಾವಣೆಯಲ್ಲಿ ಗೆದ್ದು ಬರುವಂತಹ ಪರಿಸ್ಥಿತಿ ಇದೆ. ಪೋಲಿ ಫ‌ಟಿಂಗರ ಅಂತಿಮ ತಾಣ ರಾಜಕೀಯ ಎನ್ನುವ ಮಾತನ್ನು ಎಲ್ಲ ರೀತಿಯಲ್ಲೂ ನಿಜಗೊಳಿಸಲು ರಾಜಕೀಯ ಪಕ್ಷಗಳು ಶಕ್ತಿಮೀರಿ ಪ್ರಯತ್ನಿಸುತ್ತಿರುವುದು ಪ್ರಜಾತಂತ್ರದ ಒಟ್ಟು ಆಶಯಗಳಿಗೆ ಗಂಡಾಂತರಕಾರಿಯಾಗಿರುವುದರಿಂದ ಸುಪ್ರೀಂ ಕೋರ್ಟಿನ ಆದೇಶಕ್ಕೆ ಹೆಚ್ಚು ಮಹತ್ವವಿದೆ.  ಪ್ರಸ್ತುತ ಒಂದು ಕೇಸ್‌ ಇತ್ಯರ್ಥವಾಗಲು ಕನಿಷ್ಠ ಎಂದರೂ ಐದಾರು ವರ್ಷ ಹಿಡಿಯುತ್ತದೆ.

ನ್ಯಾಯಾಲಯಗಳ ಮೇಲಿರುವ ವ್ಯಾಜ್ಯಗಳ ಹೊರೆಯೇ ಇದಕ್ಕೆ ಕಾರಣ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲಾ ನ್ಯಾಯಾಲಯಗಳು ಅಥವಾ ಹೈಕೋರ್ಟುಗಳಲ್ಲಿ ಜನಪ್ರತಿನಿಧಿಗಳು ಅಥವ ರಾಜಕೀಯ ಮುಖಂಡರ ವಿರುದ್ಧ ದಾಖಲಾಗಿರುವ ಪ್ರಕರಣಗಳು ಕ್ಷಿಪ್ರವಾಗಿ ವಿಲೇವಾರಿ ಆಗುತ್ತವೆ ಎಂದು ನಿರೀಕ್ಷಿಸುವುದು ಅಸಾಧ್ಯ. ಭಂಡ ನಾಯಕರು ನ್ಯಾಯಾಂಗದ ಈ ಲೋಪವನ್ನೇ ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಉದಾಹರಣೆಗಳು ಧಾರಾಳವಾಗಿ ಸಿಗುತ್ತವೆ. ಲಾಲೂ ಪ್ರಸಾದ್‌ ಅವರಂತಹ ರಾಜಕೀಯ ಮುಖಂಡರ ವಿರುದ್ಧ ಹತ್ತಾರು ಕ್ರಿಮಿನಲ್‌ ಕೇಸ್‌ಗಳು ದಾಖಲಾಗಿದ್ದರೂ ಅವರಿನ್ನೂ ರಾಜಕೀಯದಲ್ಲಿ ಬಹಳ ಸಕ್ರಿಯವಾಗಿರುವುದೇ ಇದಕ್ಕೆ ಸಾಕ್ಷಿ. ನ್ಯಾಯಾಲಯಗಳ ಕಣ್ಣಿಗೆ ಮಣ್ಣೆರಚಿ ವಿಚಾರಣೆ ವಿಳಂಬಿಸುವ ವಿದ್ಯೆರಾಜಕೀಯದವರಿಗೆ ಕರಗತವಾಗಿರುವುದರಿಂದ ರಾಜಕೀಯದ ಅಪರಾಧೀಕರಣವನ್ನು ತಡೆಯಲು ಮಾಡಿರುವ ಪ್ರಯತ್ನಗಳು ನಿರೀಕ್ಷಿತ ಫ‌ಲ ನೀಡುತ್ತಿಲ್ಲ.

ಅಪರಾಧ ಸಾಬೀತಾಗಿ 2 ವರ್ಷಕ್ಕೆ ಮೇಲ್ಪಟ್ಟು ಶಿಕ್ಷೆಯಾದವರು ಶಿಕ್ಷೆಯ ಅವಧಿ ಮುಗಿಸಿದ ಬಳಿಕ ಆರು ವರ್ಷ ತನಕ ಚುನಾವಣೆಯಲ್ಲಿ ಸ್ಪರ್ಧಿಸಬಾರದೆಂಬ ನಿಯಮ ಈಗ ಇದೆ. ಆದರೆ ಇಷ್ಟರತನಕ ಈ ನಿಯಮದಡಿ ಚುನಾವಣೆಗೆ ಸ್ಪರ್ಧಿಸಲು ಅನರ್ಹಗೊಂಡಿರುವವರ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟು ಮಾತ್ರ ಇದೆ.  ಹಾಗೆಂದು ಜನಪ್ರತಿನಿಧಿಗಳ ಮೇಲೆ ಕ್ರಿಮಿನಲ್‌ ಕೇಸ್‌ಗಳು ದಾಖಲಾಗಿಲ್ಲ ಎಂದಲ್ಲ. 1,581 ಜನಪ್ರತಿನಿಧಿಗಳ ವಿರುದ್ಧ 13,500 ಕ್ರಿಮಿನಲ್‌ ಕೇಸ್‌ಗಳು ವಿಚಾರಣೆಗೆ ಬಾಕಿ ಇದೆ ಎಂದು ಸ್ವತಃ ನ್ಯಾಯಾಲಯವೇ ಹೇಳಿದೆ. ಮಾಮೂಲು ನ್ಯಾಯಾಲಯಗಳಲ್ಲಿ ಈ ಪ್ರಕರಣಗಳು ಇತ್ಯರ್ಥವಾಗಿ ಅಪರಾಧಿಗಳಿಗೆ ಶಿಕ್ಷೆಯಾಗುವುದು ಯಾವ ಕಾಲಕ್ಕೋ? ಹೀಗಾಗಿ ವಿಶೇಷ ನ್ಯಾಯಾಲಯಗಳ ಸ್ಥಾಪನೆ ಅಪೇಕ್ಷಿತ ನಡೆ. ಇದರಿಂದ ಕ್ರಿಮಿನಲ್‌ ರಾಜಕಾರಣಿಗಳನ್ನು ರಾಜಕೀಯದ ಮುಖ್ಯವಾಹಿನಿಯಿಂದ ದೂರವಿಡಲು ಸಾಧ್ಯವಾಗುತ್ತದೆ. ನ್ಯಾಯಾಲಯವೇ ಆ ಕೆಲಸ ಮಾಡುವುದರಿಂದ ರಾಜಕೀಯವನ್ನು ಸ್ವತ್ಛಗೊಳಿಸುವ ಕೆಲಸವೂ ಸುಲಭವಾಗಲಿದೆ. ಇನ್ನೊಂದು ದೃಷ್ಟಿಯಿಂದ ರಾಜಕಾರಣಿಗಳಿಗೂ ಈ ನಡೆಯಿಂದ ಲಾಭಗಳಿವೆ. ಪ್ರಸ್ತುತ ಚುನಾವಣೆಯ ಮೇಲೆ ದೃಷ್ಟಿಯಿರಿಸಿ ಜನನಾಯಕರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದು ಕೇಸುಗಳನ್ನು ದಾಖಲಿಸುವುದು ಮಾಮೂಲಾಗಿದೆ. ಎಲ್ಲ ರಾಜ್ಯಗಳಲ್ಲೂ ಹಿಟ್‌ ಆ್ಯಂಡ್‌ ರನ್‌ ರಾಜಕಾರಣಿಗಳಿರುತ್ತಾರೆ.

ದ್ವೇಷ ಸಾಧನೆಗಾಗಿ ದಾಖಲಾಗುವ ಇಂತಹ ಕೇಸ್‌ಗಳಿಂದ ರಾಜಕೀಯ ಬದುಕು ಮುಗಿದುಹೋಗುವ ಸಾಧ್ಯಯಿದೆ. ಈ ಮಾದರಿಯ ಕೇಸುಗಳು ವಿಶೇಷ ನ್ಯಾಯಾಲಯಗಳಲ್ಲಿ ಕ್ಷಿಪ್ರವಾಗಿ ವಿಚಾರಣೆಗೆ ಬಂದರೆ ರಾಜಕಾರಣಿಗಳಿಗೆ ತಮ್ಮನ್ನು ಸಮರ್ಥಿಸಿಕೊಳ್ಳಲು ಒಂದು ಅವಕಾಶ ಸಿಗುತ್ತದೆ. ಒಂದು ವೇಳೆ ಕ್ಷಿಪ್ರವಾಗಿ ಇತ್ಯರ್ಥಗೊಂಡು ನಿರ್ದೋಷಿ ಎಂದು ಸಾಬೀತಾದರೆ ಜನರೆದುರು ಮತ್ತೆ ತಲೆಎತ್ತಿ ನಿಲ್ಲಬಹುದು.  ಶಿಕ್ಷೆಯಾದ ಜನಪ್ರತಿನಿಧಿಗಳಿಗೆ ಆಜೀವ ಪರ್ಯಂತ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ನಿಷೇಧ ಹೇರಬೇಕೆಂಬ ಬೇಡಿಕೆಯೂ ರಾಜಕೀಯ ವನ್ನು ಅಪರಾಧಿಗಳಿಂದ ಸ್ವತ್ಛಗೊಳಿಸುವ ಇನ್ನೊಂದು ಉತ್ತಮ ಕ್ರಮ. ಚುನಾವಣಾ ಆಯೋಗ ಈ ಕುರಿತಾಗಿ ನ್ಯಾಯಾಲಯಕ್ಕೆ ತನ್ನ ನಿಲುವು ಸ್ಪಷ್ಟಪಡಿಸಿದೆ. ಆದರೆ ಸರಕಾರದ ಕಡೆಯಿಂದ ಇನ್ನೂ ಸಕಾರಾತ್ಮಕವಾದ ಪ್ರತಿಕ್ರಿಯೆ ಬಂದಿಲ್ಲ. ಸ್ವತ್ಛ ಆಡಳಿತ ನೀಡುವ ಭರವಸೆಯೊಂದಿಗೆ ಅಧಿಕಾರಕ್ಕೇರಿರುವ ನರೇಂದ್ರ ಮೋದಿ ಸರಕಾರ ಈ ವಿಚಾರದಲ್ಲಿ ಮೀನಮೇಷ ಎಣಿಸದೆ ನಿಲುವು ಸ್ಪಷ್ಟಪಡಿಸಬೇಕು. ಈ ವಿಚಾರದಲ್ಲಿ ಸರಕಾರ ಯಾವುದೇ ಒತ್ತಡಕ್ಕೆ ಮಣಿದರೆ ಅದರಿಂದ ಪ್ರಜಾಪ್ರಭುತ್ವಕ್ಕೆ ಬಲು ದೊಡ್ಡ ಹಾನಿಯಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next