Advertisement

Bulldozer ನ್ಯಾಯಕ್ಕೆ ಸುಪ್ರೀಂ ಕೋರ್ಟ್‌ ತರಾಟೆ

12:46 AM Sep 03, 2024 | Team Udayavani |

ಹೊಸದಿಲ್ಲಿ: “ಬುಲ್ಡೋಜರ್‌ ನ್ಯಾಯ’ದ ಬಗ್ಗೆ ಸುಪ್ರೀಂ ಕೋರ್ಟ್‌ ಸೋಮವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕೇವಲ ಆರೋಪ ಕೇಳಿ ಬಂದಾಕ್ಷಣ ಆರೋಪಿಯ ಮನೆ ಅಥವಾ ಕಟ್ಟಡವನ್ನು ಹೇಗೆ ನೆಲಸಮ ಮಾಡು ತ್ತೀರಿ ಎಂದು ಸರಕಾರವನ್ನು ಪ್ರಶ್ನಿಸಿದೆ. ಅಲ್ಲದೆ ಈ ಕುರಿತು ಮಾರ್ಗ ದರ್ಶಿ ರೂಪಿಸುವ ಪ್ರಸ್ತಾವ ಮಾಡಿದೆ.

Advertisement

ಒಂದು ವೇಳೆ ಆರೋಪಿ ಶಿಕ್ಷೆಗೆ ಗುರಿಯಾಗಿದ್ದರೂ ಆತನಿಗೆ ಸಂಬಂಧಿಸಿದ ಮನೆಯನ್ನು ಸೂಕ್ತಕಾನೂನು ಪ್ರಕ್ರಿಯೆಗಳು ಇಲ್ಲದೆ ನೆಲಸಮ ಮಾಡುವಂತಿಲ್ಲ ಎಂದು ನ್ಯಾ| ಬಿ.ಆರ್‌. ಗವಾಯಿ ಮತ್ತು ನ್ಯಾ| ಕೆ.ವಿ. ವಿಶ್ವನಾಥ್‌ ಅವರಿದ್ದ ಪೀಠವು ಅಭಿಪ್ರಾಯಪಟ್ಟಿದೆ.

ಕಟ್ಟಡಗಳ ಬುಲ್ಡೋಜರ್‌ ಕಾರ್ಯಾಚರಣೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಈ ಅಭಿಪ್ರಾಯಪಟ್ಟು, ಮುಂದಿನ ವಿಚಾರಣೆಯನ್ನು ಸೆ. 17ಕ್ಕೆ ಮುಂದೂಡಿತು. ಅಲ್ಲದೆ ಈ ಕುರಿತು ಸಲಹೆಗಳನ್ನೂ ಆಹ್ವಾನಿಸಿತು.

ಸರಕಾರದ ಪರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌, ಕಟ್ಟಡ ನೆಲಸಮ ಕಾರ್ಯಾಚರಣೆಯನ್ನು ಕೋರ್ಟ್‌ ಮುಂದೆ ತಪ್ಪಾಗಿ ಬಿಂಬಿಸಲಾಗಿದೆ ಎಂದು ವಾದಿಸಿದರು. ಆಗ ಪೀಠವು ಹಾಗಿದ್ದರೆ ಈ ಕುರಿತು ನ್ಯಾಯಾಲಯವು ಸಮಗ್ರ ದೇಶಕ್ಕೆ ಅನ್ವಯವಾಗುವಂತೆ ಮಾರ್ಗದರ್ಶಿಗಳನ್ನು ಸೂಚಿಸಲಿದೆ ಎಂದು ಹೇಳಿತು.

ಉದಾಹರಣೆ ಸಹಿತ ವಾದ: ಅರ್ಜಿದಾರರ ಪರ ವಾದ ಮಂಡಿಸಿದ ದುಷ್ಯಂತ್‌ ದವೆ ಮತ್ತು ಸಿ.ಯು. ಸಿಂಗ್‌, ದಿಲ್ಲಿಯ ಜಹಾಂಗೀರ್‌ಪುರಿಯಲ್ಲಿ ಬಾಡಿಗೆ ನೀಡಿದ ಮನೆಯನ್ನು ಧ್ವಂಸ ಮಾಡಲಾಗಿದೆ. ಪುತ್ರ ಅಥವಾ ಬಾಡಿಗೆದಾರ ಕಾನೂನುಬಾಹಿರ ಕೃತ್ಯ ಎಸಗಿದ್ದಾನೆಂದು 50- 60 ವರ್ಷಗಳ ಹಳೆಯ ಮನೆಯನ್ನು ಕೆಡವಲಾಗಿದೆ. ರಾಜಸ್ಥಾನದ ಉದಯಪುರದಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗೆ ಚಾಕುವಿನಿಂದ ಇರಿದಿದ್ದಾನೆ, ಆತ ವಾಸಿಸುತ್ತಿದ್ದ ಮನೆಯನ್ನು ನೆಲಸಮ ಮಾಡಲಾಗಿದೆ. ವಿದ್ಯಾರ್ಥಿ ದುಷ್ಕೃತ್ಯ ಎಸಗಿದ್ದಾನೆಂದು ಆತನ ತಂದೆ ವಾಸಿಸುವ ಮನೆಯನ್ನು ನೆಲಸಮ ಮಾಡಿದ್ದು ಸರಿಯಲ್ಲ ಎಂದು ವಾದಿಸಿದರು.

Advertisement

ಮಾರ್ಗದರ್ಶಿ ಸೂತ್ರ ಪ್ರಸ್ತಾವನೆ: ಈ ಹಂತದಲ್ಲಿ ಮಾತನಾಡಿದ ನ್ಯಾ| ಗವಾಯಿ, ಉತ್ತರ ಪ್ರದೇಶ ಸರಕಾರ ಅಫಿದಾವಿತ್‌ ಸಲ್ಲಿಸಿದ್ದು, ಕಾನೂನು ಪ್ರಕಾರವೇ ಸ್ಥಿರಾಸ್ತಿಗಳನ್ನು ನೆಲಸಮ ಮಾಡಲು ಸಾಧ್ಯ ಎಂದು ಹೇಳಿದೆ. ಕಟ್ಟಡಗಳನ್ನು ನೆಲಸಮಗೊಳಿಸುವ ಸಂಬಂಧ ದೇಶಾದ್ಯಂತ ಅನ್ವಯವಾಗುವ ಕೆಲವು ಮಾರ್ಗದರ್ಶಿ ರೂಪಿಸಬೇಕು ಎಂದು ಹೇಳಿದರು.

ಅನಧಿಕೃತ ಕಟ್ಟಡಗಳಿಗೆ ರಕ್ಷಣೆ ಇಲ್ಲ: ವಿಚಾರಣೆಯ ಒಂದು ಹಂತದಲ್ಲಿ, ಅನಧಿಕೃತ ಕಟ್ಟಡಗಳ ರಕ್ಷಣೆಗೆ ಕೋರ್ಟ್‌ ನಿಲ್ಲುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು. ದೇವಾಲಯಗಳ ಸಹಿತ ಸಾರ್ವಜನಿಕ ರಸ್ತೆಗೆ ಅಡ್ಡಿಯಾಗುವ ಯಾವುದೇ ಅನಧಿಕೃತ ಕಟ್ಟಡಗಳಿಗೆ ನಾವು ರಕ್ಷಣೆ ನೀಡವುದಿಲ್ಲ. ಆದರೆ ಕಟ್ಟಡಗಳನ್ನು ನೆಲಸಮ ಮಾಡಲು ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಬೇಕು ಎಂದು ಹೇಳಿತು.

ಏನಿದು ಬುಲ್ಡೋಜರ್‌ ನ್ಯಾಯ?
-ಅಪರಾಧ ಎದುರಿಸುವವರ ಮನೆ, ಆಸ್ತಿಗಳನ್ನು ಬುಲ್ಡೋಜರ್‌ ಮೂಲಕ ನೆಲಸಮ ಮಾಡುವುದು “ಬುಲ್ಡೋಜರ್‌ ನ್ಯಾಯ’
-2017ರಿಂದಲೇ ಉತ್ತರ ಪ್ರದೇಶದಲ್ಲಿ ಯೋಗಿ ಸರಕಾರದಿಂದ ಇದರ ಜಾರಿ
-ಮ.ಪ್ರದೇಶ, ರಾಜಸ್ಥಾನ, ತೆಲಂಗಾಣದಲ್ಲೂ ಜಾರಿ

 

Advertisement

Udayavani is now on Telegram. Click here to join our channel and stay updated with the latest news.

Next