ನವದೆಹಲಿ: ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳನ್ನು ಘೋಷಿಸುವ ಸಂಸ್ಕೃತಿಯಿಂದಾಗಿ ದೇಶದ ಆರ್ಥಿಕತೆಗೆ ದೊಡ್ಡ ನಷ್ಟವುಂಟಾಗಲು ಕಾರಣವಾಗುತ್ತಿದೆ ಎಂದು ಸುಪ್ರೀಂಕೋರ್ಟ್ ಗುರುವಾರ (ಆಗಸ್ಟ್ 11) ಅಭಿಪ್ರಾಯವ್ಯಕ್ತಪಡಿಸಿದೆ.
ಇದನ್ನೂ ಓದಿ:ಪ್ರವೀಣ್ ಹತ್ಯೆ: 16 ದಿನದಲ್ಲೇ ಪ್ರಮುಖ ಆರೋಪಿಗಳ ಬಂಧನ; ಕುಟುಂಬಸ್ಥರು ಹೇಳಿದ್ದೇನು?
ರಾಜಕೀಯ ಪಕ್ಷಗಳ ಉಚಿತ ಕೊಡುಗೆಗಳ ಘೋಷಣೆ ಮತ್ತು ಉಚಿತ ಕೊಡುಗೆಗಳನ್ನು ನೀಡುವುದು ಗಂಭೀರ ಸಮಸ್ಯೆಯಾಗಿದೆ. ಅಷ್ಟೇ ಅಲ್ಲ ಈ ಸಂಸ್ಕೃತಿಯನ್ನು ನಿಲ್ಲಿಸಬೇಕಾದ ಅಗತ್ಯವಿದೆ. ಇದರೊಂದಿಗೆ ಜನಪರ ಅಭಿವೃದ್ಧಿ ಕಾರ್ಯಕ್ರಮ ಮತ್ತು ಉಚಿತ ಕೊಡುಗೆಗಳ ಬಗ್ಗೆ ಸಮತೋಲನ ಕಾಯ್ದುಕೊಳ್ಳಬೇಕಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಉಚಿತ ಕೊಡುಗೆಗಳಿಗೆ ವ್ಯಯವಾಗುವ ಎಲ್ಲಾ ಹಣವನ್ನು ಮೂಲಭೂತ ಅಭಿವೃದ್ಧಿಗೆ ಬಳಸಬೇಕು ಎಂದು ಸುಪ್ರೀಂಕೋರ್ಟ್ ಒತ್ತಿ ಹೇಳಿದೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಉಚಿತ ಕೊಡುಗೆಗಳನ್ನು ನೀಡುವುದಾಗಿ ಭರವಸೆ ನೀಡುವ ರಾಜಕೀಯ ಪಕ್ಷಗಳನ್ನು ನಿಷೇಧಿಸಬೇಕೆಂದು ಕೋರಿ ವಕೀಲರಾದ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ಅಂಶವನ್ನು ಹೇಳಿದೆ.
ಇದೊಂದು ಸಮಸ್ಯೆ ಅಲ್ಲ ಎಂದು ಯಾರೂ ಹೇಳುವುದಿಲ್ಲ. ಇದು ಗಂಭೀರವಾದ ವಿಷಯವಾಗಿದೆ. ರಾಜ್ಯದ ಅಭಿವೃದ್ಧಿಗೆ ವಿನಿಯೋಗವಾಗಬೇಕಾದ ಹಣಕಾಸು ಉಚಿತ ಕೊಡುಗೆಗಳಿಗೆ ನೀಡಿದರೆ ಇದರಿಂದ ಸಮಸ್ಯೆಯೇ ಹೆಚ್ಚು ಎಂದು ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದೆ.