Advertisement

ಎಲೆಕ್ಟೋರಲ್‌ ಬಾಂಡ್‌ ತಕರಾರು ಸಂಬಂಧ ಇಂದು ಸುಪ್ರೀಂ ತೀರ್ಪು

12:16 PM Apr 13, 2019 | Hari Prasad |

ನವದೆಹಲಿ: ರಾಜಕೀಯ ಪಕ್ಷಗಳಿಗೆ ದೇಣಿಗೆ ಸಂಗ್ರಹಿಸಲು ಕೇಂದ್ರ ಸರಕಾರವು ಜಾರಿಗೊಳಿಸಿರುವ ‘ಎಲೆಕ್ಟೋರಲ್‌ ಬಾಂಡ್‌ ಸ್ಕೀಂ’ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಇಂದು ತನ್ನ ತೀರ್ಪನ್ನು ನೀಡಲಿದೆ. ನರೆಂದ್ರ ಮೋದಿ ನೇತೃತ್ವದ ಎನ್‌.ಡಿ.ಎ. ಸರಕಾರವು 2017ರ ಆಯ-ವ್ಯಯದಲ್ಲಿ ಈ ವಿನೂತನ ಯೋಜನೆಯನ್ನು ಜಾರಿಗೊಳಿಸಿತ್ತು ಮತ್ತು ಈ ಯೋಜನೆಯಿಂದ ರಾಜಕೀಯ ಪಕ್ಷಗಳಿಗೆ ಅನಾಮಧೇಯ ಮೂಲಗಳಿಂದ ಹಣ ಹರಿದುಬರುವುದಕ್ಕೆ ಕಡಿವಾಣ ಹಾಕಿದಂತಾಗುತ್ತದೆ ಮತ್ತು ಈ ಪ್ರಕ್ರಿಯೆಗೊಂದು ಪಾರದರ್ಶಕತೆ ಸಿಕ್ಕಂತಾಗುತ್ತದೆ ಎಂದು ಸರಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿತ್ತು.

Advertisement

ಎಲೆಕ್ಟೋರಲ್‌ ಬಾಂಡ್‌ ಯೋಜನೆಯ ಕುರಿತಾಗಿ ಕೆಲವೊಂದು ಆಕ್ಷೇಪಗಳನ್ನು ವ್ಯಕ್ತಪಡಿಸಿ ‘ಪ್ರಜಾಪ್ರಭುತ್ವ ಸುಧಾರಣಾ ಸಂಘ’ ಎಂಬ ಸರಕಾರೇತರ (ಎ.ಡಿ.ಆರ್‌.) ಸಂಘಟನೆಯೊಂದು ಸುಪ್ರಿಂ ಕೋರ್ಟ್‌ನಲ್ಲಿ ಅರ್ಜಿಯೊಂದನ್ನು ಸಲ್ಲಿಸಿತ್ತು. ಒಂದೋ ಈ ಎಲೆಕ್ಟೋರಲ್‌ ಬಾಂಡ್‌ ಯೋಜನೆಗೆ ತಡೆ ನೀಡಬೇಕು ಅಥವಾ ಈ ರೀತಿ ಪಕ್ಷಗಳಿಗೆ ದೇಣಿಗೆ ನೀಡುವವರ ಹೆಸರನ್ನು ಬಹಿರಂಗಪಡಿಸಲು ಯೋಜನೆಯಲ್ಲಿ ಅವಕಾಶವಿರಬೇಕು ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಒತ್ತಾಯಿಸಿದ್ದರು.

ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದ್ದ ಸವೋಚ್ಛ ನ್ಯಾಯಾಲಯವು ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ವಾದವನ್ನ ಗುರುವಾರದಂದು ಆಲಿಸಿತ್ತು. ಮತ್ತು ಈ ಸಂದರ್ಭದಲ್ಲಿ ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯ್‌, ನ್ಯಾಯಮೂರ್ತಿ ದೀಪಕ್‌ ಗುಪ್ತಾ ಮತ್ತು ನ್ಯಾಯಮೂರ್ತಿ ಸಂಜೀವ ಖನ್ನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಕೆಂದ್ರಸರಕಾರವನ್ನು ಪ್ರತಿನಿಧಿಸುತ್ತಿರುವ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅವರಿಂದ ಕೆಲವೊಂದು ಸ್ಪಷ್ಟೀಕರಣವನ್ನು ಪಡೆದುಕೊಂಡಿತ್ತು.

ಚುನಾವಣೆಗಳ ಸಂದರ್ಭದಲ್ಲಿ ಕಪ್ಪುಹಣದ ಹರಿಯುವಿಕೆಗೆ ತಡೆಹಾಕುವುದೇ ಸರಕಾರದ ಉದ್ದೇಶವಾಗಿದ್ದಲ್ಲಿ ಈ ಎಲೆಕ್ಟೋರಲ್‌ ಬಾಂಡ್‌ ಗಳನ್ನು ಬ್ಯಾಂಕ್‌ ಗಳಿಂದ ಖರೀದಿಸುವವರ ಹೆಸರು ಪಾರದರ್ಶಕ ಮಾಡಬೇಕಲ್ಲವೇ? ಇಲ್ಲದಿದ್ದಲ್ಲಿ ಸರಕಾರದ ಉದ್ದೇಶಕ್ಕೆ ಏನು ಅರ್ಥ ಬರುತ್ತದೆ ಎಂದು ನ್ಯಾಯಪೀಠವು ಅಟಾರ್ನಿ ಜನರಲ್‌ ಅವರನ್ನು ಪ್ರಶ್ನಿಸಿತು.

ಅಟಾರ್ನಿ ಜನರಲ್‌ ಸಮರ್ಥನೆ:
– ಎಲೆಕ್ಟೋರಲ್‌ ಬಾಂಡ್‌ ಮೂಲಕ ವಿವಿಧ ಪಕ್ಷಗಳಿಗೆ ದೇಣಿಗೆ ನೀಡುವ ವ್ಯಕ್ತಿಗಳ ಹೆಸರು ಬ್ಯಾಂಕ್‌ ಗಳಿಗೆ ತಿಳಿಯಲಿರುವುದರಿಂದ ಕಪ್ಪುಹಣ ತಡೆ ಉದ್ದೇಶಕ್ಕೆ ಇದು ಪೂರಕವಾಗಿದೆ.
– ಇದು ಸರಕಾರದ ನೀತಿ ರೂಪಣೆಯ ಒಂದು ಭಾಗವಾಗಿದೆ. ಮತ್ತು ಯಾವ ಸರಕಾರವೂ ತನ್ನ ನೀತಿ ರೂಪಣೆಯಲ್ಲಿ ತಪ್ಪೆಸಗುವುದಿಲ್ಲ.
– ಯಾವುದೇ ವ್ಯಕ್ತಿಯು ಬ್ಯಾಂಕ್‌ ಮೂಲಕ ಎಲೆಕ್ಟೋರಲ್‌ ಬಾಂಡ್‌ ಖರೀದಿ ಮಾಡಬೇಕೆಂದರೆ ಕೆ.ವೈ.ಸಿ. (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ಫಾರ್ಮ್ ಅನ್ನು ತುಂಬಲೇಬೇಕು. ಆ ಸಂದರ್ಭದಲ್ಲಿ ದೇಣಿಗೆ ನೀಡುವ ವ್ಯಕ್ತಿಯ ವಿವರಗಳು ಬ್ಯಾಂಕ್‌ ಗಳ ಬಳಿ ಇರುತ್ತದೆ.
– ತೆರಿಗೆ ವ್ಯಾಪ್ತಿಗೊಳಪಡುವ ಹಣವನ್ನೇ ದೇಣಿಗೆದಾರರು ನಿರ್ಧಿಷ್ಟ ಬ್ಯಾಂಕ್‌ ಗಳಿಂದ ಚೆಕ್‌, ಡಿಮಾಂಡ್‌ ಡ್ರಾಫ್ಟ್ ಮತ್ತು ಇತರೇ ವಿದ್ಯುನ್ಮಾನ ವಿಧಾನಗಳ ಮೂಲಕವೇ ಈ ಬಾಂಡ್‌ ಗಳನ್ನು ಖರೀದಿಸಬೇಕಾಗಿರುತ್ತದೆ ಮತ್ತು ಮೂರನೇ ಪ್ಯಕ್ತಿಗೆ ಸಂಬಂಧಿಸಿದ ಚೆಕ್‌ ಗಳ ಮೂಲಕ ಬಾಂಡ್‌ ಗಳನ್ನು ಖರೀದಿಸಲು ಈ ಯೋಜನೆಯಲ್ಲಿ ಅವಕಾಶವಿಲ್ಲ.
– ಬ್ಯಾಂಕ್‌ ಗಳಿಗೆ ಬಾಂಡ್‌ ಖರೀದಿಸುವವರ ಮಾಹಿತಿ ಇರುತ್ತದೆ ಆದರೆ ಯಾವ ಪಕ್ಷಕ್ಕೆ ಈ ಬಾಂಡ್‌ ನೀಡಲ್ಪಟ್ಟಿದೆ ಎಂಬ ಮಾಹಿತಿ ಬ್ಯಾಂಕ್‌ ಗಳ ಬಳಿ ಇರುವುದಿಲ್ಲ.
– ದೇಣಿಗೆದಾರರಿಗೆ ತಮ್ಮ ಖಾಸಗಿತನ್ನವನ್ನು ಕಾಪಾಡಿಕೊಳ್ಳುವ ಹಕ್ಕಿದೆ. ಹಾಗಾಗಿ ಈ ಯೋಜನೆಯ ಮಾನ್ಯತೆಯನ್ನು ಎತ್ತಿಹಿಡಿಯಬೇಕು.
– ಈಗ ನಡೆಯುತ್ತಿರುವ ಲೋಕಸಭಾ ಚುನಾವಣಾ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕವಷ್ಟೇ ಈ ಯೋಜನೆಯ ಫ‌ಲಶ್ರುತಿ ತಿಳಿಯಲಿರುವುದರಿಂದ ಈ ಸಂದರ್ಭದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬಾರದು.

Advertisement

ಬ್ಯಾಂಕ್‌ ಗಳು ಎಲೆಕ್ಟೋರಲ್‌ ಬಾಂಡ್‌ ಗಳನ್ನು ನೀಡುವ ಸಂದರ್ಭದಲ್ಲಿ ಯಾರಿಗೆ ಬಾಂಡ್‌ ನೀಡಲ್ಪಟ್ಟಿದೆ ಎಂಬ ಮಾಹಿತಿ ಬ್ಯಾಂಕ್‌ ಗೆ ತಿಳಿದಿರುತ್ತದೆಯೇ ಎಂದು ನ್ಯಾಯಪೀಠ ಈ ಸಂದರ್ಭದಲ್ಲಿ ಸರಕಾರವನ್ನು ಪ್ರಶ್ನಿಸಿತು. ಇದಕ್ಕೆ ಅಟಾರ್ನಿ ಜನರಲ್‌ ಅವರು ಉತ್ತರ ಇಲ್ಲ ಎಂದಾಗಿತ್ತು. ಹಾಗಾದರೆ ಬಾಂಡ್‌ ಖರೀದಿಸುವವರ ಗುರುತು ಬ್ಯಾಂಕ್‌ ಗಳಿಗೆ ಇರುವುದಿಲ್ಲ ಎಂದಾದರೆ ಇದು ಆದಾಯ ತೆರಿಗೆ ಕಾನೂನುಗಳ ಉಲ್ಲಂಘನೆಯಾಗುವುದಿಲ್ಲವೇ ಎಂದು ತ್ರಿಸದಸ್ಯ ಪೀಠ ಸರಕಾರವನ್ನು ಪ್ರಶ್ನಿಸಿತು.

ಅರ್ಜಿದಾರರ ಪರ ವಕೀಲ ಪ್ರಶಾಂತ್‌ ಭೂಷಣ್‌ ಅವರು ವಾದಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next