Advertisement

Supreme court: ಅಸ್ಸಾಂ ವಲಸಿಗರ ಪೌರತ್ವ ಕಾಯ್ದೆ 6ಎ ಸಿಂಧು: ಸುಪ್ರೀಂಕೋರ್ಟ್

01:43 PM Oct 17, 2024 | Team Udayavani |

ನವದೆಹಲಿ: ಅಸ್ಸಾಂ ಒಪ್ಪಂದದ ಪ್ರಕಾರ 1955ರ ಪೌರತ್ವ ಕಾಯ್ದೆ 6ಎ ಅನ್ವಯ ವಲಸಿಗರಿಗೆ ಪೌರತ್ವ ನೀಡುವ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂಕೋರ್ಟ್‌ (Supreme court) ಸಾಂವಿಧಾನಿಕ ಪೀಠ ಗುರುವಾರ (ಅ.17) ಎತ್ತಿಹಿಡಿದಿದೆ.

Advertisement

1966ರ ಜನವರಿ 1ರಿಂದ 1971ರ ಮಾರ್ಚ್‌ 25ರ ನಡುವೆ ಅಸ್ಸಾಂ ಪ್ರವೇಶಿಸಿದ್ದ ವಲಸಿಗರಿಗೆ ಪೌರತ್ವ ನೀಡುವ 1955ರ ಪೌರತ್ವ ಕಾಯ್ದೆ 6ಎ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂಕೋರ್ಟ್‌ ಪೀಠ 4:1ರ ಅನುಪಾತದಲ್ಲಿ ಎತ್ತಿಹಿಡಿದಿದೆ.

ಸುಪ್ರೀಂಕೋರ್ಟ್‌ ಸಿಜೆಐ ಡಿ.ವೈ.ಚಂದ್ರಚೂಡ್‌ ಮತ್ತು ಇತರ ಮೂವರು ಜಡ್ಜ್‌ ಗಳು ಪೌರತ್ವ ಕಾಯ್ದೆಯ ಸಿಂಧುತ್ವ ಎತ್ತಿಹಿಡಿದಿದ್ದು, ಜಸ್ಟೀಸ್‌ ಪರ್ಡಿವಾಲಾ ಅವರು ಭಿನ್ನ ತೀರ್ಪು ನೀಡಿರುವುದಾಗಿ ವರದಿ ತಿಳಿಸಿದೆ.

“ಸ್ವತಂತ್ರ ಬಾಂಗ್ಲಾದೇಶ ರಚನೆಯ ನಂತರ ಅಕ್ರಮ ವಲಸಿಗರ ಸಮಸ್ಯೆಗೆ ಅಸ್ಸಾಂ ಒಪ್ಪಂದವು ರಾಜಕೀಯ ಪರಿಹಾರವಾಗಿದೆ. ಅದೇ ರೀತಿ ಸೆಕ್ಷನ್‌ 6ಎ ಶಾಸಕಾಂಗ ಪರಿಹಾರವಾಗಿದೆ ಎಂದು” ಸಿಜೆಐ ಚಂದ್ರಚೂಡ್‌ ಅವರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

Advertisement

1971ರ ಮಾರ್ಚ್‌ 25ರ Cut Off ದಿನಾಂಕವು ತರ್ಕಬದ್ಧವಾಗಿದೆ. ಯಾಕೆಂದರೆ ಬಾಂಗ್ಲಾದೇಶ ವಿಮೋಚನಾ ಯುದ್ಧ ಕೊನೆಗೊಂಡ ದಿನಾಂಕವಾಗಿದೆ ಎಂದು ಬಹುಮತದ ತೀರ್ಪು ನೀಡಿದೆ.

1966ರ ಜನವರಿ 1ಕ್ಕಿಂತ ಮೊದಲು ಅಸ್ಸಾಂ ರಾಜ್ಯ ಪ್ರವೇಶಿಸಿದ್ದ ವಲಸಿಗರನ್ನು ಭಾರತೀಯ ಪ್ರಜೆಗಳೆಂದು ಪರಿಗಣಿಸಲಾಗುತ್ತದೆ. ಆದರೆ 1966ರ ಜನವರಿ 1ರಿಂದ 1971ರ ಮಾರ್ಚ್‌ 25ರ ನಡುವೆ ಅಸ್ಸಾಂ ಪ್ರವೇಶಿಸಿದ್ದ ವಲಸಿಗರು ಅರ್ಹತೆಯ ಆಧಾರದ ಮೇಲೆ ಭಾರತೀಯ ಪೌರತ್ವ ಪಡೆಯಲು ಅರ್ಹರಾಗಿರುತ್ತಾರೆ ಎಂದು ಜಸ್ಟೀಸ್‌ ಕಾಂತ್‌ ತೀರ್ಪಿನಲ್ಲಿ ತಿಳಿಸಿದ್ದಾರೆ.

1971ರ ಮಾರ್ಚ್‌ 25ರ ನಂತರ ಅಸ್ಸಾಂ ಪ್ರವೇಶಿಸಿದ್ದ ವಲಸಿಗರನ್ನು ಪತ್ತೆಹಚ್ಚಿ ವಶಕ್ಕೆ ಪಡೆದು, ಗಡಿಪಾರು ಮಾಡಲು ಹೊಣೆಗಾರರಾಗಿರುತ್ತಾರೆ ಎಂದು ಸುಪ್ರೀಂ ಪೀಠ ಸ್ಪಷ್ಟಪಡಿಸಿದೆ.

ಜಸ್ಟೀಸ್‌ ಪರ್ಡಿವಾಲಾ ಭಿನ್ನ ತೀರ್ಪು:

1955ರ ಪೌರತ್ವ ಕಾಯ್ದೆಯ ಸೆಕ್ಷನ್‌ 6ಎ ಸಂವಿಧಾನಬಾಹಿರವಾಗಿದೆ. ಸೆಕ್ಷನ್‌ 6ಎ ದೀರ್ಘ ಸಮಯಾವಕಾಶದೊಂದಿಗೆ ಅಸಾಂವಿಧಾನಿಕತೆ ಹೊಂದಿದೆ ಎಂದು ಜಸ್ಟೀಸ್‌ ಪರ್ಡಿವಾಲಾ ಭಿನ್ನ ತೀರ್ಪು ನೀಡಿದ್ದಾರೆ.

1971ರ ಮೊದಲು ಅಸ್ಸಾಂ ಪ್ರವೇಶಿಸಿದ್ದ ಯಾವ ವಲಸಿಗರಿಗೂ ಶಾಸಕಾಂಗವು ಸರಳವಾಗಿ ಪೌರತ್ವ ನೀಡಬಹುದಾಗಿತ್ತು. 1966ರಿಂದ 1971ರವರೆಗೆ ಎಂದು ಶಾಸನಬದ್ಧ ವರ್ಗ ರಚಿಸಿರುವುದು ರಾಜ್ಯದಲ್ಲಿನ ಮುಂಬರುವ ಚುನಾವಣೆ ಮೇಲಿನ ದೃಷ್ಟಿಕೋನದಿಂದ ಕೂಡಿರುವುದಾಗಿ ಜಸ್ಟೀಸ್‌ ಪರ್ಡಿವಾಲಾ ತೀರ್ಪಿನಲ್ಲಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next