ಹೊಸದಿಲ್ಲಿ : ದೇಶವನ್ನು ಕಾನೂನು ಬಾಹಿರವಾಗಿ ಪ್ರವೇಶಿಸಿದ ರೊಹಿಂಗ್ಯಾ ಮುಸ್ಲಿಮರನ್ನು ಗಡೀಪಾರು ಮಾಡುವ ಕೇಂದ್ರ ಸರಕಾರದ ಯೋಜನೆಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳಲಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇಂದಿಲ್ಲಿ ಹೇಳಿದ್ದಾರೆ.
“ಸುಪ್ರೀಂ ಕೋರ್ಟ್ ನಲ್ಲಿ ಈ ಸಂಬಂಧ ಅಫಿದಾವಿತ್ ಸಲ್ಲಿಸಲಾಗಿದೆ. ರೊಹಿಂಗ್ಯಾ ಮುಸ್ಲಿಮರ ಗಡೀಪಾರಿನ ಕುರಿತಾದ ಯಾವುದೇ ನಿರ್ಧಾರವನ್ನು ಸುಪ್ರೀಂ ಕೋರ್ಟ್ ತೆಗೆದುಕೊಳ್ಳಲಿದೆ’ ಎಂದು ರಾಜನಾಥ್ ಸಿಂಗ್ ಅವರ ಇಂದಿಲ್ಲಿ ಕಾರ್ಯಕ್ರಮವೊಂದರಲ್ಲಿ ಪಾರ್ಶ್ವದಲ್ಲಿ ಸುದ್ದಿಗಾರರಿಗೆ ಹೇಳಿದರು.
“ರೊಹಿಂಗ್ಯಾ ಮುಸ್ಲಿಮರು ದೇಶವನ್ನು ಅಕ್ರಮವಾಗಿ ಮತ್ತು ಕಾನೂನು ಬಾಹಿರವಾಗಿ ಪ್ರವೇಶಿಸಿದವರಾಗಿದ್ದಾರೆ. ದೇಶದಲ್ಲಿನ ಅವರ ಉಪಸ್ಥಿತಿಯು ದೇಶದ ಭದ್ರತೆಗೆ ಗಂಭೀರ ಬೆದರಿಕೆಯಾಗಿದೆ ಎಂಬುದನ್ನು ಸುಪ್ರೀಂ ಕೋರ್ಟಿಗೆ ತಿಳಿಸಲಾಗಿದೆ’ ಎಂದು ರಾಜನಾಥ್ ಸಿಂಗ್ ಹೇಳಿದರು.
ದೇಶದ ಕಾನೂನುಬದ್ಧ ಪ್ರಜೆಗಳಿಗೆ ಮಾತ್ರವೇ ದೇಶದಲ್ಲಿ ತಾವು ಇಷ್ಟಪಟ್ಟಲ್ಲಿ ವಾಸಿಸುವ ಹಕ್ಕಿದೆ. ಆದರೆ ದೇಶವನ್ನು ಅಕ್ರಮವಾಗಿ, ಕಾನೂನುಬಾಹಿರವಾಗಿ ಪ್ರವೇಶಿಸಿರುವ ನಿರಾಶ್ರಿತರಿಗೆ ಇಲ್ಲಿ ನೆಲೆಸುವ ಹಕ್ಕಿಗಾಗಿ ಸುಪ್ರೀಂ ಕೋರ್ಟ್ ಕಾನೂನು ವ್ಯಾಪ್ತಿಯನ್ನು ಬಳಸಿಕೊಳ್ಳುವ ಅವಕಾಶ ಇರುವುದಿಲ್ಲ ಎಂಬುದನ್ನು ಸುಪ್ರೀಂ ಕೋರ್ಟಿಗೆ ಕೇಂದ್ರ ಸರಕಾರ ಈಗಾಗಲೇ ಸಲ್ಲಿಸಿರುವ ಅಫಿದಾವಿತ್‌ನಲ್ಲಿ ತಿಳಿಸಿದೆ’ ಎಂದು ರಾಜನಾಥ್ ಸಿಂಗ್ ಹೇಳಿದರು.
ಕಳೆದ ಆಗಸ್ಟ್ 9ರಂದು ಸಂಸತ್ತಿಗೆ ನೀಡಿದ ಹೇಳಿಕೆಯಲ್ಲಿ ಸರಕಾರವು “ದೇಶದಲ್ಲಿ 14,000ಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮರು ಯುಎನ್‌ಎಚ್‌ಸಿಆರ್ ಜತೆಗೆ ನೋಂದಾಯಿಸಿಕೊಂಡು ನೆಲೆಸಿದ್ದಾರೆ’ ಎಂದು ತಿಳಿಸಿತ್ತು. ಆದರೆ ಅನಧಿಕೃತ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಸುಮಾರು 40,000 ರೊಹಿಂಗ್ಯಾ ಮುಸ್ಲಿಮರು, ಜಮ್ಮು, ಹೈದರಾಬಾದ್, ಹರಿಯಾಣ, ಉತ್ತರ ಪ್ರದೇಶ, ದಿಲ್ಲಿ ಎನ್‌ಸಿಆರ್ ಮತ್ತು ರಾಜಸ್ಥಾನ ಪ್ರಾಂತ್ಯಗಳಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ.