Advertisement
ಚುನಾವಣಾ ಬಾಂಡ್ ಗಳ ವ್ಯಾಲಿಡಿಟಿಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ನ ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ಪಂಚ ಸದಸ್ಯರ ಸಾಂವಿಧಾನಿಕ ಪೀಠವು ಕಳೆದ ವರ್ಷ ನವೆಂಬರ್ 2ರಂದು ತೀರ್ಪನ್ನು ಕಾಯ್ದಿರಿಸಿತ್ತು.
Related Articles
Advertisement
ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್ ಗಳ ಮೂಲಕ ಎಷ್ಟು ದೇಣಿಗೆ ಬಂದಿದೆ ಎಂಬುದನ್ನು ಎಸ್ ಬಿಐ ಮಾಹಿತಿ ನೀಡಬೇಕೆಂದು ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ಸೂಚನೆ ನೀಡಿದೆ. ಮಾರ್ಚ್ 6ರೊಳಗೆ ಎಸ್ ಬಿಐ ಎಲ್ಲಾ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಬೇಕು. ಚುನಾವಣಾ ಆಯೋಗ ಮಾಹಿತಿಯನ್ನು 2024ರ ಮಾರ್ಚ್ 31ರೊಳಗೆ ವೆಬ್ ಸೈಟ್ ನಲ್ಲಿ ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ನಿರ್ದೇಶನ ನೀಡಿದೆ.
ಇನ್ಮುಂದೆ ಎಸ್ ಬಿಐ ಚುನಾವಣಾ ಬಾಂಡ್ ಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ಸುಪ್ರೀಂ ಪೀಠ ಹೇಳಿದೆ. ಎಲೆಕ್ಟ್ರಾಲ್ ಬಾಂದ್ ಸ್ಕೀಮ್ ಅಸಂವಿಧಾನಿಕವಾಗಿದೆ. ಅನಾಮಧೇಯ ಚುನಾವಣಾ ಬಾಂಡ್ ಗಳು ಮಾಹಿತಿ ಹಕ್ಕು ಮತ್ತು ಆರ್ಟಿಕಲ್ 19(1) ಅನ್ನು ಉಲ್ಲಂಘಿಸುತ್ತದೆ. ಬಾಂಡ್ ಗಳ ಮೂಲಕ ದೇಣಿಗೆ ನೀಡುವ ಮೂಲಕ ರಾಜಕೀಯ ಪ್ರವೇಶಕ್ಕೆ ಅವಕಾಶವಾಗಲಿದ್ದು, ಇದು ಹಣ ಮತ್ತು ಮತದಾನದ ನಡುವಿನ ನಂಟಾಗಲಿದೆ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ವಿಶ್ಲೇಷಿಸಿದೆ.
ದೇಣಿಗೆಯನ್ನು ಅನಾಮಧೇಯಗೊಳಿಸುವ ಕೇಂದ್ರ ಸರ್ಕಾರದ ಆದಾಯ ತೆರಿಗೆ ಕಾಯಿದೆ ಮತ್ತು ಜನಪ್ರತಿನಿಧಿ ಕಾಯಿದೆಗೆ ಮಾಡಿದ ತಿದ್ದುಪಡಿಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ.ಏನಿದು ಚುನಾವಣಾ ಬಾಂಡ್? 2018ರ ಜನವರಿ 29ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಚುನಾವಣಾ ಬಾಂಡ್ ಸ್ಕೀಮ್ ಅನ್ನು ಜಾರಿಗೆ ತಂದಿತ್ತು. ಚುನಾವಣಾ ಬಾಂಡ್ ಅಂದರೆ ಇದು ಪ್ರಾಮಿಸರಿ ನೋಟ್ ನಂತಿದ್ದು, ಇದನ್ನು ದೇಶದ ಯಾವುದೇ ಪ್ರಜೆ ಅಥವಾ ಕಂಪನಿಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯಾವುದೇ ಶಾಖೆಗಳಿಂದ ಖರೀದಿಸಬಹುದು. ಅಲ್ಲದೇ ಈ ಬಾಂಡ್ ಗಳನ್ನು ತಮ್ಮ ಆಯ್ಕೆ ಯಾವುದೇ ರಾಜಕೀಯ ಪಕ್ಷಗಳಿಗೆ ದೇಣಿಗೆಯಾಗಿ ನೀಡಬಹುದಾಗಿದೆ. ಚುನಾವಣಾ ಬಾಂಡ್ ಗಳ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವವರ ಹೆಸರು ಮತ್ತು ಗುರುತನ್ನು ಗೌಪ್ಯವಾಗಿಡಲಾಗುತ್ತದೆ. ದೇಶದ ಯಾವುದೇ ಪ್ರಜೆ ಅಥವಾ ಕಂಪನಿಗಳು ಬಾಂಡ್ ಗಳನ್ನು ಖರೀದಿಸಬಹುದಾಗಿದೆ. ಈ ಬಾಂಡ್ ಗಳು 1,000 ರೂಪಾಯಿಯಿಂದ ಒಂದು ಕೋಟಿ ರೂ. ಮೊತ್ತದವರೆಗೂ ಇದೆ. ಈ ದೇಣಿಗೆಗಳು ಬಡ್ಡಿ ರಹಿತವಾಗಿರುತ್ತದೆ. ಬಾಂಡ್ ಗಳ ಮೂಲಕ ರಾಜಕೀಯ ಪಕ್ಷಗಳು ಪಡೆದ ಹಣವೆಷ್ಟು? ಪಿಟಿಐ ವರದಿ ಪ್ರಕಾರ, 2022-23ನೇ ಸಾಲಿನಲ್ಲಿ ಭಾರತೀಯ ಜನತಾ ಪಕ್ಷ ಚುನಾವಣಾ ಬಾಂಡ್ ಗಳ ಮೂಲಕ ಅಂದಾಜು 1,300 ಕೋಟಿ ರೂಪಾಯಿ ದೇಣಿಗೆ ಪಡೆದಿದೆ. 2021-22ನೇ ಸಾಲಿನಲ್ಲಿ ಬಿಜೆಪಿ ಚುನಾವಣಾ ಬಾಂಡ್ ಮುಖೇನ 1,775 ಕೋಟಿ ರೂ. ದೇಣಿಗೆ ಪಡೆದಿತ್ತು. ಒಟ್ಟಾರೆಯಾಗಿ 2022-23ನೇ ಸಾಲಿನಲ್ಲಿ ಭಾರತೀಯ ಜನತಾ ಪಕ್ಷ ಪಡೆದ ಒಟ್ಟು ದೇಣಿಗೆ 2,360.8 ಕೋಟಿ ರೂಪಾಯಿ ಎಂದು ವಿವರಿಸಿದೆ. ಅದೇ ರೀತಿ ಕಾಂಗ್ರೆಸ್ ಪಕ್ಷ 2022-23ನೇ ಸಾಲಿನಲ್ಲಿ ಚುನಾವಣಾ ಬಾಂಡ್ ಗಳ ಮೂಲಕ ಪಡೆದ ಮೊತ್ತ 171 ಕೋಟಿ ರೂಪಾಯಿ. 2021-22ನೇ ಸಾಲಿನಲ್ಲಿ ಕಾಂಗ್ರೆಸ್ ಪಕ್ಷ 236 ಕೋಟಿ ರೂಪಾಯಿ ದೇಣಿಗೆ ಪಡೆದಿತ್ತು.