ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪಿನಲ್ಲಿ ಚುನಾವಣ ಬಾಂಡ್‌ಗಳ ಯೋಜನೆಯನ್ನು ಅಮಾನ್ಯಗೊಳಿಸಿ ಇದು “ಅಸಂವಿಧಾನಿಕ” ಎಂದು ಬಣ್ಣಿಸುವ ಕೇಂದ್ರ ಸರಕಾರಕ್ಕೆ ಶಾಕ್ ನೀಡಿದೆ.
ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಈ ತೀರ್ಪನ್ನು ಐವರು ನ್ಯಾಯಾಧೀಶರ ಸಂವಿಧಾನ ಪೀಠವು ನೀಡಿದ್ದು, ಪ್ರಾರಂಭದಿಂದಲೂ ಪರಿಶೀಲನೆಗೆ ಒಳಪಟ್ಟಿರುವ ವಿವಾದಾತ್ಮಕ ರಾಜಕೀಯ ನಿಧಿಯ ವಿಧಾನವನ್ನು ಕೊನೆಗೊಳಿಸಿದೆ.
ತತ್ ಕ್ಷಣವೇ ಜಾರಿಗೆ ಬರುವಂತೆ ಚುನಾವಣ ಬಾಂಡ್‌ಗಳನ್ನು ನೀಡುವುದನ್ನು ನಿಲ್ಲಿಸುವಂತೆ ವಿತರಕ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಎಲೆಕ್ಟೋರಲ್ ಬಾಂಡ್‌ಗಳ ಯೋಜನೆಯು ಆರ್ಟಿಕಲ್ 19(1)(ಎ) ಅನ್ನು ಉಲ್ಲಂಘಿಸುತ್ತದೆ ಮತ್ತು ಅಸಂವಿಧಾನಿಕವಾಗಿದೆ. ಕಂಪನಿಗಳ ಕಾಯಿದೆಗೆ ತಿದ್ದುಪಡಿ ಅಸಂವಿಧಾನಿಕ. ವಿತರಿಸುವ ಬ್ಯಾಂಕ್ ಚುನಾವಣ ಬಾಂಡ್‌ಗಳ ವಿತರಣೆಯನ್ನು ತತ್ಕ್ಷಣವೇ ನಿಲ್ಲಿಸಲಿದೆ ”ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ತೀರ್ಪಿನಲ್ಲಿ ಹೇಳಿದ್ದಾರೆ.
2018 ರಲ್ಲಿ ಪರಿಚಯಿಸಲಾದ ಎಲೆಕ್ಟೋರಲ್ ಬಾಂಡ್ ಯೋಜನೆ ರಾಜಕೀಯ ಪಕ್ಷಗಳ ದೇಣಿಗೆಗಳಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿತ್ತು.