ನವದೆಹಲಿ: ವಿವಾಹಿತ ಪುರುಷ ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದುವುದು ಕ್ರಿಮಿನಲ್ ಅಪರಾಧ ಎಂಬ 19ನೇ ಶತಮಾನದ ಐಪಿಸಿ ಸೆಕ್ಷನ್ 497ನ್ನು ಸುಪ್ರೀಂಕೋರ್ಟ್ ಐವರು ನ್ಯಾಯಾಧೀಶರುಗಳ ಪೀಠ ರದ್ದುಗೊಳಿಸಿ, ಪತ್ನಿಗೆ ಪತಿಯೇ ಮಾಲೀಕನಲ್ಲ, ಇದು ಅಸಂವಿಧಾನಿಕ ಎಂದು ಮಹತ್ವದ ತೀರ್ಪು ನೀಡಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 497ರ ಪ್ರಕಾರ ವಿವಾಹಿತ ಪುರುಷ ಅನೈತಿಕ ಸಂಬಂಧ ಹೊಂದಿದ್ದರೆ ಅದು ಕ್ರಿಮಿನಲ್ ಅಪರಾಧ ಎಂದು ಹೇಳಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಖ್ಯನ್ಯಾಯಾಧೀಶ ದೀಪಕ್ ಮಿಶ್ರಾ ಹಾಗೂ ಜಸ್ಟೀಸ್ ಗಳಾದ ಆರ್ ಎಫ್ ನಾರಿಮನ್, ಎಎಂ ಖಾನ್ವಿಲ್ಕರ್, ಡಿವೈ ಚಂದ್ರಚೂಡ್ ಹಾಗೂ ಇಂದು ಮಲೋತ್ರಾ ಅವರನ್ನೊಳಗೊಂಡ ಪೀಠ, ಸೆಕ್ಷನ್ 497 ಅಸಾಂವಿಧಾನಿಕ ಎಂದು ಒಮ್ಮತದ ತೀರ್ಪು ನೀಡಿದೆ.
ಸಂವಿಧಾನದ 14ನೇ ವಿಧಿಯ ನೆಲೆಯಲ್ಲಿ (ಕಾನೂನಿನ ಮುಂದೆ ಎಲ್ಲರೂ ಸಮಾನರು) ಐಪಿಸಿಯ ಸೆಕ್ಷನ್ 497 ಕ್ರಿಮಿನಲ್ ಅಪರಾಧವಾಗಿ ಉಳಿಯಲು ಸಾಧ್ಯವಿಲ್ಲ. ಗಂಡು ಹೆಣ್ಣು ಎಂಬ ಬೇಧವಿಲ್ಲ. ಎಲ್ಲರೂ ಸಂವಿಧಾನದ ಮುಂದೆ ಸಮಾನರು ಎಂದು ಹೇಳಿದೆ.
ಏನಿದು ಪ್ರಕರಣ:
ಐಪಿಸಿ 497ರ ಕಾಯ್ದೆ ಪ್ರಕಾರ ಮದುವೆ ಬಳಿಕ ಪತಿಯಾದವನು ಮತ್ತೊಬ್ಬ ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ರೆ ಆತನಿಗೆ ಶಿಕ್ಷೆ ವಿಧಿಸಬಹುದಾಗಿತ್ತು. ಆ ಶಿಕ್ಷೆ ಪುರುಷನಿಗೆ ಮಾತ್ರ, ವಿವಾಹಿತ ಮಹಿಳೆಗೆ ಅಲ್ಲ. ಹೀಗಾಗಿ ವ್ಯಭಿಚಾರಕ್ಕೆ ಶಿಕ್ಷೆ ವಿಧಿಸುವ ಐಪಿಸಿ ಸೆಕ್ಷನ್ 497 ಸರಿಯೇ ಎಂದು ಪ್ರಶ್ನಿಸಿ ಜೋಸೆಫ್ ಶೈನ್ ಎಂಬವರು ಸಾರ್ವಜನಿಕಾ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ವಿವಾಹಿತ ಪರ ಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಹೊಂದುವ ಪುರುಷರನ್ನು ಮಾತ್ರವೇ ಶಿಕ್ಷಿಸುವ ಈ ಸೆಕ್ಷನ್ ಅನ್ನು ರದ್ದು ಪಡಿಸಬೇಕೆಂದು ಅವರು ಅರ್ಜಿಯಲ್ಲಿ ಮನವಿ ಮಾಡಿದ್ದರು.
ಪುರುಷನ ಮೇಲಿನ ಈ ಆರೋಪ ಸಾಬೀತಾದರೆ ಗರಿಷ್ಟ 5 ವರ್ಷ ಜೈಲು ಶಿಕ್ಷೆ ಅಥವಾ ದಂಡವನ್ನು ವಿಧಿಸಲಾಗುತಿತ್ತು. ಕೆಲವೊಮ್ಮೆ ಜೈಲು ಶಿಕ್ಷೆಯ ಜೊತೆ ದಂಡವನ್ನು ಪಾವತಿಸಬೇಕಿತ್ತು.