ಹೊಸದಿಲ್ಲಿ : ಪಾಕ್ ರಾಜಕೀಯ ಪಕ್ಷವೊಂದರ ಧ್ವಜವನ್ನು ಹೋಲುವ, ಅರ್ಧ ಚಂದ್ರ ಮತ್ತು ನಕ್ಷತ್ರವನ್ನು ಒಳಗೊಂಡ, ಹಸಿರು ಧ್ವಜವನ್ನು ಭಾರತದ ಆದ್ಯಂತ ಹಲವಾರು ಕಟ್ಟಡಗಳು ಮತ್ತು ಧಾರ್ಮಿಕ ಸ್ಥಳಗಳಲ್ಲಿ ಹಾರಿಸುವುದನ್ನು ನಿಷೇಧಿಸುವಂತೆ ಕೋರಿ ಶಿಯಾ ವಕ್‌ಫ್ ಮಂಡಳಿ ಅಧ್ಯಕ್ಷರು ಸಲ್ಲಿಸಿರುವ ಅರ್ಜಿಗೆ ಉತ್ತರಿಸುವಂತೆ ಸರ್ವೋಚ್ಚ ನ್ಯಾಯಾಲಯ ಕೇಂದ್ರ ಸರಕಾರಕ್ಕೆ ನೊಟೀಸ್ ಜಾರಿ ಮಾಡಿದೆ.
ಶಿಯಾ ವಕ್‌ಫ್ ಮಂಡಳಿ ಅಧ್ಯಕ್ಷ ಸೈಯದ್ ವಸೀಂ ರಿಜ್ವಿ ಅವರ ವಕೀಲರಿಗೆ ಜಸ್ಟಿಸ್ ಎ ಕೆ ಸಿಕ್ರಿ ಮತ್ತು ಅಶೋಕ್ ಭೂಷಣ್ ಅವರನ್ನು ಒಳಗೊಂಡ ಪೀಠವು, “ರಿಜ್ವಿ ಅವರ ಅರ್ಜಿಯ ಪ್ರತಿಯೊಂದನ್ನು ಅಡಿಶನಲ್ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ನೀಡಿ ಕೇಂದ್ರದ ಪರವಾಗಿ ಉತ್ತರ ಸಲ್ಲಿಸುವುದಕ್ಕೆ ಅವಕಾಶ ಮಾಡಿಕೊಡಿ’ ಎಂದು ಸೂಚಿಸಿತು.
ಅರ್ಧ ಚಂದ್ರ ಮತ್ತು ನಕ್ಷತ್ರವನ್ನು ಒಳಗೊಂಡ ಹಸಿರುವ ಧ್ವಜವು ಪಾಕಿಸ್ಥಾನದ ರಾಜಕೀಯ ಪಕ್ಷವೊಂದರ ಧ್ವಜವನ್ನು ಹೋಲುವುದರಿಂದ ಅದನ್ನು ಹಾರಿಸುವುದು ಇಸ್ಲಾಮ್ ವಿರೋಧಿ ಕೃತ್ಯ ಆಗುವುದೆಂದು ರಿಜ್ವಿ ಅವರು ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ.
“ನಾನು ಮುಂಬಯಿ ಮತ್ತು ಇತರ ಅನೇಕ ಕಡೆಗಳಿಗೆ ಹೋಗಿದ್ದಾಗ ಅಲ್ಲಿನ ಅನೇಕ ಕಟ್ಟಡಗಳು ಮತ್ತು ಧಾರ್ಮಿಕ ಕಟ್ಟಡಗಳ ಮೇಲೆ ಈ ರೀತಿಯ ಹಸಿರು ಧ್ವಜ ಹಾರಿಸಲಾಗಿರುವುದನ್ನು ಕಂಡಿದ್ದೇನೆ. ಇದು ಪಾಕಿಸ್ಥಾನದ ಮುಸ್ಲಿಂ ಲೀಗ್ ಪಕ್ಷದ ಧ್ವಜವನ್ನು ಹೋಲುತ್ತದೆ ಮತ್ತು ಅದು ನಮ್ಮ ಶತ್ರು ದೇಶಕ್ಕೆ ಸೇರಿದುದಾದಾಗಿದೆ’ ಎಂದು ರಿಜ್ವಿ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.
“1906ರಲ್ಲಿ ಮೊಹಮ್ಮದ್ ಆಲಿ ಜಿನ್ನಾ ಮತ್ತು ನವಾಜ್ ವಕಾರ್ ಉಲ್ ಮಲಿಕ್ ಅವರು ಜತೆಗೂಡಿ ಸ್ಥಾಪಿಸಿದ್ದ ಮುಸ್ಲಿಂ ಪಕ್ಷದ ಧ್ವಜವನ್ನೇ ಭಾರತೀಯ ಮುಸಲ್ಮಾನರು ಇಸ್ಲಾಮಿಕ್ ಧ್ವಜವೆಂದು ಪರಿಗಣಿಸುತ್ತಿದ್ದಾರೆ’ ಎಂದು ರಿಜ್ವಿ ಹೇಳಿದ್ದಾರೆ.