ಹೊಸದಿಲ್ಲಿ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ಅವಕಾಶ ನೀಡುವ ಬಗ್ಗೆ ಹಲವು ವರ್ಷಗಳಿಂದ ನಡೆಯುತ್ತಿರುವ ವಾದ ಈಗ ಇನ್ನೊಂದು ಹಂತ ತಲುಪಿದೆ. ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ವಿಧಿಸಲು ತಿರುವಾಂಕೂರು ದೇವಸ್ವಂ ಮಂಡಳಿಯಂಥ ಶಾಸನಾತ್ಮಕ ಮಂಡಳಿಗೆ ಅವಕಾಶವಿದೆಯೇ ಹಾಗೂ ಧಾರ್ಮಿಕ ಹಕ್ಕುಗಳನ್ನು ರಕ್ಷಿಸುವ ಸಾಂವಿಧಾನದ 25, 26ನೇ ಪರಿಚ್ಛೇದವನ್ನು ಇದು ಉಲ್ಲಂ ಸುತ್ತದೆಯೇ ಎಂಬ ಅಂಶಗಳನ್ನು ಸಾಂವಿಧಾನಿಕ ಪೀಠ ಚರ್ಚಿಸಲಿದೆ. ಸದ್ಯ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠವು ಈಗ ವಿಚಾರಣೆಯನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಿದೆ.
ಸಾಂವಿಧಾನಿಕ ಪರಿಚ್ಛೇದಗಳ ಪ್ರಕರಣದ ವಿಚಾ ರಣೆಯನ್ನು ಐವರು ಸದಸ್ಯರ ಪೀಠವೇ ಮಾಡಬೇಕಿದೆ. ಹೀಗಾಗಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದಿದೆ ನ್ಯಾಯಪೀಠ. ಶಬರಿಮಲೆ ದೇಗುಲಕ್ಕೆ ಮಹಿಳೆಯರಿಗೆ ಅವಕಾಶ ನೀಡಬೇಕು ಎಂಬುದು ಹಲವು ದಶಕಗಳ ವಾದವಾಗಿದ್ದು, ಹಿಂದೆ ಕೇರಳ ಹೈಕೋರ್ಟ್ ಈ ನಿರ್ಬಂಧವನ್ನು ಎತ್ತಿಹಿಡಿದಿದ್ದರಿಂದ ಇದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.
ಸಾಂವಿಧಾನಿಕ ದ್ವಂದ್ವ: ಸಂವಿಧಾನ ಪೀಠವು ತನ್ನ ವಿಚಾರಣೆಯಲ್ಲಿ ಪರಿಗಣಿಸಬೇಕಾದ ಆರು ಅಂಶಗಳನ್ನು ತ್ರಿಸದಸ್ಯ ಪೀಠ ಸೂಚಿಸಿದೆ. ಪ್ರಸ್ತುತ ನಿರ್ಬಂಧವು ಮಹಿಳೆಯರ ವಿರುದ್ಧ ಲಿಂಗ ತಾರತಮ್ಯ ಉಂಟುಮಾಡುತ್ತದೆಯೇ, ಸಮಾನತೆ ಹಕ್ಕನ್ನು ಉಲ್ಲಂಘಿಸುತ್ತದೆಯೇ ಅಥವಾ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆಯೇ ಎಂಬುದನ್ನು ಪರಿಶೀಲಿಸಲಿದೆ. ಅಲ್ಲದೆ ಸಂವಿಧಾನದ ಪರಿಚ್ಛೇದ 25ರ ಅಡಿಯಲ್ಲಿ ಅಯ್ಯಪ್ಪ ಭಕ್ತರ ಹಕ್ಕುಗಳನ್ನು ರಕ್ಷಿಸಬೇಕೆ ಎಂಬುದನ್ನೂ ಇದು ಪರಿಗಣಿಸಲಿದೆ.
ಪುರಾತನ ವಿವಾದ: ಪ್ರಸ್ತುತ 10 ರಿಂದ 50 ವರ್ಷ ವರೆಗಿನ ಮಹಿಳೆಯರನ್ನು ಶಬರಿಮಲೆ ದೇಗುಲ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ಅಯ್ಯಪ್ಪ ಬ್ರಹ್ಮಚಾರಿಯಾಗಿದ್ದು, ಋತುಸ್ರಾವವಾದ ಮಹಿಳೆಯರು ಗರ್ಭಗುಡಿ ಪ್ರವೇಶಿಸಬಾರದು ಎಂಬ ನಿರ್ಬಂಧವನ್ನು ತಿರುವಾಂಕೂರು ದೇವಸ್ವಂ ಮಂಡಳಿ ಅನುಸರಿಸುತ್ತಿದೆ. ಈ ನಿರ್ಬಂಧ ತುಂಬಾ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಆದರೆ ಇದು ಲಿಂಗ ತಾರತಮ್ಯದ ಪ್ರಕರಣವಲ್ಲ. ಬದಲಿಗೆ ವಯೋ ತಾರತಮ್ಯ ಎಂದು ದೇವಸ್ವಂ ಮಂಡಳಿ ಹೇಳಿದ್ದು, ಸಂವಿಧಾನದ 26ನೇ ಪರಿಚ್ಛೇದದ ಅಡಿಯಲ್ಲಿ ಧಾರ್ಮಿಕ ನಂಬಿಕೆಗಳನ್ನು ಪೋಷಿಸಲಾಗುತ್ತಿದೆ ಎಂದು ವಾದಿಸಿದೆ. ಆದರೆ ಕೇರಳದಲ್ಲಿ ಸರಕಾರ ಬದಲಾದಂತೆ ನಿಲುವೂ ಬದಲಾಗಿದೆ. ಈ ಹಿಂದೆ ಯುಡಿಎಫ್ ಸರಕಾರವಿದ್ದಾಗ ಶಬರಿಮಲೆ ಆಡಳಿತ ಮಂಡಳಿಯ ನಿರ್ಬಂಧವನ್ನು ಬೆಂಬಲಿಸಿತ್ತು. ಆದರೆ ಎಲ್‌ಡಿಎಫ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ನಿಲುವು ಬದಲಾಗಿದ್ದು, ಎಲ್ಲ ವಯಸ್ಸಿನ ಮಹಿಳೆಯರಿಗೂ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ವಾದಿಸಿದೆ.