Advertisement

“ಕಂಬಲ ನನ ದುಂಬುಲ…”: ಜನಪದ ಕ್ರೀಡೆಗೆ ಬಿಗ್ ರಿಲೀಫ್; ಆದರೆ ಷರತ್ತುಗಳು ಅನ್ವಯ

01:24 PM May 18, 2023 | Team Udayavani |

ಮಣಿಪಾಲ: ತಮಿಳುನಾಡು ರಾಜ್ಯದ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಗೆ (ಪಿಸಿಎ) ಮಾಡಿರುವ ತಿದ್ದುಪಡಿಗಳ ಸಿಂಧುತ್ವವನ್ನು ಸುಪ್ರೀಂ ಕೋರ್ಟ್‌ ನ ಸಾಂವಿಧಾನಿಕ ಪೀಠ ಗುರುವಾರ ಎತ್ತಿಹಿಡಿದಿದೆ. ಆ ಮೂಲಕ ಜಾನಪದ ಕ್ರೀಡೆ ಜಲ್ಲಿಕಟ್ಟುಗೆ ಅನುಮತಿ ನೀಡಿದೆ.

Advertisement

ಇದೇ ವೇಳೆ ಸುಪ್ರೀಂ ಕೋರ್ಟ್ ನ ಪಂಚ ಸದಸ್ಯ ಸಾಂವಿಧಾನಿಕ ಪೀಠವು ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಕಂಬಳ ಮತ್ತು ಎತ್ತಿಮ ಬಂಡಿ ಓಟವನ್ನು ಅನುಮತಿಸುವ ಕಾನೂನನ್ನು ಎತ್ತಿಹಿಡಿದಿದೆ. ಈ ಮೂಲಕ ಕರಾವಳಿ ಕರ್ನಾಟಕದ ಕ್ರೀಡೆ ಕಂಬಳ ಆಯೋಜನೆಗೆ ಇದ್ದ ಆತಂಕ ದೂರವಾಗಿದೆ.

“ಎಲ್ಲಾ ಮೂರು ತಿದ್ದುಪಡಿ ಕಾಯಿದೆಗಳು ಮಾನ್ಯವಾದ ಶಾಸನಗಳಾಗಿವೆ. ಎಲ್ಲಾ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಸಕ್ಷಮ ಅಧಿಕಾರಿಗಳು ತಿದ್ದುಪಡಿ ಮಾಡಿದ ಕಾನೂನಿನ ಕಟ್ಟುನಿಟ್ಟಾದ ಅನುಷ್ಠಾನಕ್ಕೆ ಜವಾಬ್ದಾರರಾಗಿರುತ್ತಾರೆ” ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.

ತಮಿಳುನಾಡಿನಲ್ಲಿ ಜನಪ್ರಿಯವಾಗಿರುವ ಜಲ್ಲಿಕಟ್ಟುವಿನಲ್ಲಿ ಪ್ರಾಣಿಗಳ ಹಕ್ಕುಗಳು ಹಾಗೂ ಕ್ರೌರ್ಯ ತಡೆ (ಪಿಸಿಎ) ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು 2014ರ ಮೇನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಇದಾದ ಬಳಿಕ ಕಂಬಳಕ್ಕೂ ತೊಡಕು ಉಂಟಾಗಿತ್ತು. ಬಳಿಕ ಕಾನೂನು ಸಮರಗಳು ನಡೆದಿದ್ದವು. ಕಂಬಳ ಆಚರಣೆಗೆ ಸರ್ಕಾರ ಸುಗ್ರಿವಾಜ್ಞೆ ತಂದು ಅದಕ್ಕೆ ರಾಷ್ಟ್ರಪತಿಯವರು ಅಂಕಿತ ಹಾಕಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

ಬಳಿಕ ಹಲವು ನಿಯಮಗಳಡಿಯಲ್ಲಿ ಕಂಬಳ ಕ್ರೀಡೆ ನಡೆಯುತ್ತಿದೆ. 24 ಗಂಟೆಯೊಳಗೆ ಕಂಬಳ ಮುಗಿಯಬೇಕು, ಓಟ ಸಮಯ ಹೊರತಾಗಿ ಬೇರೆ ಸಂದರ್ಭದಲ್ಲಿ ಕೋಣಗಳಿಗೆ ಹೊಡೆಯವಂತಿಲ್ಲ ಇತ್ಯಾದಿ ನಿಯಮಗಳನ್ನು ರೂಪಿಸಲಾಗಿದೆ. ಸದ್ಯ ಸುಪ್ರೀಂ ಕೋರ್ಟ್ ಜಿಲ್ಲಾಧಿಕಾರಿಗಳಿಗೆ ನಿಯಮ ಪಾಲನೆ ಅನುಷ್ಠಾನದ ಜವಾಬ್ದಾರಿ ನೀಡಿದ ಕಾರಣ ಕಂಬಳ ಆಯೋಜಕರು ಮತ್ತಷ್ಟು ಎಚ್ಚರಿಕೆಯಿಂದ ಇರಬೇಕಾಗುತ್ತದೆ.

Advertisement

ಇದನ್ನೂ ಓದಿ:Cabinet ಸರ್ಜರಿ ಮಾಡಿದ ಮೋದಿ: Kiren Rijiju ಬದಲು ಕಾನೂನು ಸಚಿವರಾಗಿ ಅರ್ಜುನ್ ರಾಮ್

ಈ ಬಗ್ಗೆ ‘ಉದಯವಾಣಿ’ ಜೊತೆಗೆ ಮಾತನಾಡಿದ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ, “ಖುಷಿಯಾಗಿದೆ. ಸುಪ್ರೀಂ ಕೋರ್ಟ್ ನ ಐತಿಹಾಸಿಕ ತೀರ್ಪನ್ನು ಸ್ವಾಗತಿಸುತ್ತೇವೆ. ಜನಪದ ಕ್ರೀಡೆಗೆ, ತುಳುನಾಡಿಗೆ ಹೆಮ್ಮೆ ತರುವ ವಿಚಾರವಿದು. ಯಾವುದೇ ಲಾಭದ ಉದ್ದೇಶವಿಲ್ಲದೆ ಆಚರಿಸುವ ಈ ಸಾಂಸ್ಕೃತಿಕ ಕ್ರೀಡೆಗೆ ಈ ತೀರ್ಪು ಶಕ್ತಿ ನೀಡಿದೆ. ಕಂಬಳ ದೈವಾರಾಧನೆಯೊಂದಿಗೆ ನಡೆಯುವುದು, ದೈವ ದೇವರ ಶಕ್ತಿಯಿಂದಲೇ ಈ ತೀರ್ಪು ಬಂದಿದೆ. ನಮಗೆ ಸಹಕಾರ ನೀಡಿದ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೂ ನಾವು ಅಭಾರಿ. ಎಲ್ಲಾ ಪಕ್ಷಗಳೂ ನಮಗೆ ಬೆಂಬಲ ನೀಡಿದೆ. ಎಲ್ಲರಿಗೂ ಧನ್ಯವಾದಗಳು. ಇನ್ನೂ ಅಚ್ಚುಕಟ್ಟಾಗಿ ನಿಯಮ ಪಾಲನೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಜತೆ ಚರ್ಚೆ ಮಾಡುತ್ತೇವೆ” ಎಂದರು.

“ಇದೊಂದು ಅತ್ಯುತ್ತಮ ಆದೇಶ. ಕಂಬಳವೊಂದು ಧಾರ್ಮಿಕ ಆಚರಣೆ, ಕೃಷಿಕರ ಜಾನಪದ ಕ್ರೀಡೆ. ಕರ್ನಾಟಕ ಸರ್ಕಾರ ಮಾಡಿದ್ದ ಪ್ರಾಣಿ ಹಿಂಸಾ ಕಾಯ್ದೆಗೆ ತಿದ್ದುಪಡಿ ಮಾಡಿದ್ದನ್ನು ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠ ಎತ್ತಿ ಹಿಡಿದಿದ್ದು, ಪೇಟಾ ಮತ್ತು ಪ್ರಾಣಿ ದಯಾ ಸಂಘಗಳು ಹಾಕಿ ರಿಟ್ ಅರ್ಜಿ ವಜಾ ಮಾಡಿದೆ. ಇದು ಕಂಬಳ ಸರಾಗವಾಗಿ ನಡೆಯಲು ಅನುಕೂಲವಾಗಿದ್ದು, ಕಂಬಳ ಪ್ರೇಮಿಗಳಿಗೆ ಸಂತಸ ಉಂಟುಮಾಡಿದೆ. ಆದರೂ ಕರ್ನಾಟಕ ಸರ್ಕಾರ ಮಾಡಿದ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಲು ಅದೇಶ ನೀಡಲಾಗಿದ್ದು, ಇವುಗಳನ್ನು ಮುಂದಿನ ಕಂಬಳಗಳಲ್ಲಿ ಪಾಲಿಸಲಾಗುವುದು ಎಂದು ಜಿಲ್ಲಾ ಕಂಬಳ ಸಮಿತಿ ಕಾರ್ಯದರ್ಶಿ ರಕ್ಷಿತ್ ಜೈನ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next