ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನೀರಿನ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶ ದೆಹಲಿಗೆ ಹೆಚ್ಚುವರಿ ನೀರನ್ನು ಸರಬರಾಜು ಮಾಡುವಂತೆ ಸುಪ್ರೀಂಕೋರ್ಟ್ ಗುರುವಾರ (ಜೂನ್ 06) ಮಹತ್ವದ ಆದೇಶ ನೀಡುವ ಮೂಲಕ ನೀರಿನ ಸಮಸ್ಯೆ ಬಗೆಹರಿದಂತಾಗಿದೆ.
ಇದನ್ನೂ ಓದಿ:Ramanagara; ಬೀಗದಿಂದ ಹೊಡೆದು ಭಕ್ತರ ತಲೆ ಬುರುಡೆ ಬಿಚ್ಚಿದ ಸೆಕ್ಯೂರಿಟಿ ಗಾರ್ಡ್
ಹಿಮಾಚಲ್ ಪ್ರದೇಶದಲ್ಲಿ ಹೆಚ್ಚುವರಿಯಾಗಿರುವ 137 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಅಲ್ಲದೇ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ದೆಹಲಿಗೆ ಹೆಚ್ಚುವರಿ ನೀರನ್ನು ಹತ್ನಿಕುಂಡ್, ವಝಿರಾಬಾದ್ ಮೂಲಕ ನಿರಂತರವಾಗಿ ಹರಿಸಬೇಕು ಎಂದು ಹರ್ಯಾಣಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ನೀರು ಹರಿಸುವ ಮುನ್ನ ಹರ್ಯಾಣ ರಾಜ್ಯಕ್ಕೆ ಮುಂಚಿತವಾಗಿ ಮಾಹಿತಿ ನೀಡಿ, ಜೂನ್ 7ರಿಂದ ಹಿಮಾಚಲ್ ಪ್ರದೇಶ ದೆಹಲಿಗೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಹೇಳಿದೆ.
ಹತ್ನಿಕುಂಡ್ ನಿಂದ ಹಿಮಾಚಲ್ ಪ್ರದೇಶ ಬಿಡುಗಡೆ ಮಾಡುವ ನೀರಿನ ಪ್ರಮಾಣವನ್ನು ಅಪ್ಪರ್ ಯಮುನಾ ನದಿ ಮಂಡಳಿ ಅಳೆಯುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ದೆಹಲಿ ಸರ್ಕಾರ ಯಾವುದೇ ಕಾರಣಕ್ಕೂ ನೀರನ್ನು ಪೋಲು ಮಾಡಬಾರದು, ಈ ಬಗ್ಗೆ ಜೂನ್ 10ರೊಳಗೆ ವರದಿ ನೀಡುವಂತೆ ಸುಪ್ರೀಂಕೋರ್ಟ್ ತಿಳಿಸಿದೆ.