Advertisement

ಭಡ್ತಿ ಮೀಸಲಾತಿಗೆ ಸುಪ್ರೀಂ ಅಸ್ತು

02:45 AM May 11, 2019 | Sriram |

ಹೊಸದಿಲ್ಲಿ: ಕಳೆದ ವರ್ಷ ಕರ್ನಾಟಕ ಸರಕಾರ ರೂಪಿಸಿದ್ದ ಎಸ್‌ಸಿ-ಎಸ್ಟಿ ನೌಕರರಿಗೆ ಮೀಸಲಾತಿ ಆಧಾರದಲ್ಲಿ ಭಡ್ತಿ ನೀಡುವ ಕಾಯ್ದೆಗೆ ಸುಪ್ರೀಂ ಕೋರ್ಟ್‌ ಸಾಂವಿಧಾನಿಕ ಮಾನ್ಯತೆ ನೀಡಿದೆ.

Advertisement

2018ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೂಪಿಸಲಾಗಿದ್ದ ಕಾಯ್ದೆಗೆ (ಮೀಸಲಾತಿ ಪದ್ಧತಿಯಡಿ ಕರ್ನಾಟಕ ನೌಕರರಿಗೆ ನೀಡಲಾಗುವ ಭಡ್ತಿ ಮೀಸಲಾತಿ ವಿಸ್ತರಣೆ ಕಾಯ್ದೆ 2017) ಕಳೆದ ವರ್ಷ ರಾಷ್ಟ್ರಪತಿಯವರ ಒಪ್ಪಿಗೆ ಸಿಕ್ಕಿತ್ತು. ಬಿ.ಕೆ. ಪವಿತ್ರ ಸಹಿತ ಕೆಲವರು ರಾಜ್ಯ ಸರಕಾರದ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಶುಕ್ರವಾರ ಈ ಕುರಿತಂತೆ ಮಹತ್ವದ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್‌ನ ನ್ಯಾ| ಯು.ಯು. ಲಲಿತ್‌ ಮತ್ತು ಡಿ. ವೈ. ಚಂದ್ರಚೂಡ್‌ ಅವರನ್ನೊಳಗೊಂಡ ನ್ಯಾಯಪೀಠ, ಕರ್ನಾಟಕ ರಾಜ್ಯ ಸರಕಾರದ ಕಾಯ್ದೆಯನ್ನು ಎತ್ತಿ ಹಿಡಿದಿದೆ. ಈ ಮೂಲಕ 2017ರ ತೀರ್ಪಿನಂತೆ ಹಿಂಭಡ್ತಿ ಪಡೆಯುವ ಆತಂಕದಲ್ಲಿದ್ದ 8,000 ಮಂದಿ ಸರಕಾರಿ ನೌಕರರು ನಿಟ್ಟುಸಿರು ಬಿಡುವಂತಾಗಿದೆ.

ಕರ್ನಾಟಕದಲ್ಲಿ ಹಲವು ದಶಕಗಳಿಂದ ಜಾರಿಯಲ್ಲಿದ್ದ ಎಸ್ಸಿ, ಎಸ್ಟಿ ನೌಕರರ ಭಡ್ತಿ ಮೀಸಲಾತಿ ಪದ್ಧತಿ ವಿರುದ್ಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಉದ್ಯೋಗಿ ಬಿ.ಕೆ. ಪವಿತ್ರ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಹಾಗಾಗಿ 2017ರ ಫೆ. 10ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌, ರಾಜ್ಯ ಸರಕಾರಕ್ಕೆ ಆ ಪದ್ಧತಿಯನ್ನು ಕೈಬಿಡುವಂತೆ ಸೂಚಿಸಿತ್ತು.

ಆದರೆ ತೀರ್ಪನ್ನು ಜಾರಿಗೊಳಿಸುವಲ್ಲಿ ಕೆಲವಾರು ಆಡಳಿತಾತ್ಮಕ ಅಡೆತಡೆಗಳನ್ನು ಗಮನಿಸಿದ್ದ ರಾಜ್ಯ ಸರಕಾರ, ತೀರ್ಪು ಜಾರಿಯಿಂದಾಗಿ ಸರಕಾರಿ ಸೇವಾ ವಲಯದಲ್ಲಿ ಆಗಬಹುದಾದ ಪರಿಶಿಷ್ಟ ವರ್ಗಗಳ ‘ಅಸಮರ್ಪಕ ಪ್ರಾತಿನಿಧ್ಯ’, ‘ಸರಕಾರಿ ನಾಗರಿಕ ಸೇವಾ ವಲಯದಲ್ಲಿ ಪರಿಶಿಷ್ಟ ವರ್ಗಗಳ ಹಿಂದುಳಿಯುವಿಕೆ’ ಹಾಗೂ ತೀರ್ಪಿನ ಅನುಷ್ಠಾನದಿಂದ ಸರಕಾರದ ಒಟ್ಟಾರೆ ಆಡಳಿತ ದಕ್ಷತೆಯ ಮೇಲಾಗುವ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಿ, 2017ರಲ್ಲಿ ಆಗಿನ ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿಯಾಗಿದ್ದ ರತ್ನಪ್ರಭಾ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಆ ಸಮಿತಿ ನೀಡಿರುವ ವರದಿ ಹಿನ್ನೆಲೆಯಲ್ಲಿ ಪರಿಶಿಷ್ಟ ನೌಕರರ ಭಡ್ತಿ ಮೀಸಲಾತಿ ಕಾಯ್ದೆಯನ್ನು ಸಿದ್ದರಾಮಯ್ಯ ಸರಕಾರ ರೂಪಿಸಿತ್ತು. ಕಳೆದ ವರ್ಷ ಕಾಯ್ದೆಗೆ ರಾಷ್ಟ್ರಪತಿಯವರ ಅಂಕಿತವೂ ಸಿಕ್ಕಿತ್ತು. ಅನಂತರ 2018 ಜೂ. 23ರ ಕರ್ನಾಟಕ ರಾಜ್ಯ ಸರಕಾರದ ಗೆಜೆಟ್‌ನಲ್ಲಿ ಇದನ್ನು ಉಲ್ಲೇಖೀಸಲಾಗಿತ್ತು.

ನ್ಯಾಯಪೀಠ ಹೇಳಿದ್ದೇನು?
ರಾಜ್ಯ ಸರಕಾರದ ಮೀಸಲಾತಿ ನಿಯಮಗಳ ವಿರುದ್ಧ ಬಿ.ಕೆ. ಪವಿತ್ರ ಪ್ರಕರಣದಲ್ಲಿ ನೀಡಲಾಗಿದ್ದ ತೀರ್ಪಿನಲ್ಲಿದ್ದ ದೋಷಗಳನ್ನು ತಿದ್ದುವಲ್ಲಿ ಕರ್ನಾಟಕ ಸರಕಾರದ ಮೀಸಲಾತಿ ಕಾಯ್ದೆಯು ಸಹಕಾರಿಯಾಗಿದ್ದು, ಇದು ನ್ಯಾಯಾಲಯದ ಆದೇಶದ ಮೇಲೆ ಆಕ್ರಮಣ ಮಾಡಿದಂತಲ್ಲ. ಜತೆಗೆ ಸಂವಿಧಾನದ 16 (4ಎ) ಕಲಂನ ಅಡಿಯಲ್ಲಿ ಕರ್ನಾಟಕ ಸರಕಾರದ ಮೀಸಲಾತಿ ಕಾಯ್ದೆಯು ಔಚಿತ್ಯಪೂರ್ಣವಾಗಿದೆ ಎಂದು ನ್ಯಾಯಪೀಠ 135 ಪುಟಗಳ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ.

Advertisement

ರಾಷ್ಟ್ರಪತಿ ಸಮ್ಮತಿ ಪ್ರಶ್ನಿಸುವಂತಿಲ್ಲ
ಜತೆಗೆ, ಕರ್ನಾಟಕದ ಮೀಸಲಾತಿ ಕಾಯ್ದೆಗೆ ರಾಷ್ಟ್ರಪತಿ ಒಪ್ಪಿಗೆ ಸೂಚಿಸಿದ್ದರ ವಿರುದ್ಧ ಫಿರ್ಯಾದುದಾರರೊಬ್ಬರು ಸಲ್ಲಿಸಿರುವ ಮೇಲ್ಮನವಿಗೆ ಉತ್ತರಿಸಿದ ನ್ಯಾಯಪೀಠ, ರಾಜ್ಯಪಾಲರಿಂದ ತಮಗೆ ರವಾನೆಯಾದ ಕಾಯ್ದೆಯನ್ನು ಒಪ್ಪುವುದು ಅಥವಾ ತಿರಸ್ಕರಿಸುವುದು ರಾಷ್ಟ್ರಪತಿಯವರಿಗೆ ಬಿಟ್ಟ ವಿಚಾರ. ಈ ಕಾಯ್ದೆಗೆ ರಾಷ್ಟ್ರಪತಿಯವರು ಒಪ್ಪಿಗೆ ಸೂಚಿಸಿರುವುದು ಸಂವಿಧಾನದ 201ನೇ ಕಲಂ ಪ್ರಕಾರ ಒಪ್ಪುವಂಥದ್ದಾಗಿದೆ. ಹಾಗಾಗಿ ರಾಷ್ಟ್ರಪತಿಯವರ ಈ ಸಮ್ಮತಿಯನ್ನು ಕಾನೂನಿನ ಚೌಕಟ್ಟಿನಲ್ಲಿ ಪ್ರಶ್ನಿಸುವ ಹಾಗಿಲ್ಲ ಎಂದು ನ್ಯಾಯಪೀಠ ಹೇಳಿದೆ.

ರತ್ನಪ್ರಭಾ ಸಮಿತಿ ವರದಿಯಲ್ಲಿ ಲೋಪಗಳಿಲ್ಲ
2018ರ ಮೀಸಲಾತಿ ಕಾಯ್ದೆ ರೂಪಿಸುವುದಕ್ಕೆ ಪೂರ್ವಭಾವಿಯಾಗಿ ರತ್ನಪ್ರಭಾ ಸಮಿತಿ ನೀಡಿರುವ ವರದಿಯಲ್ಲಿ ಸಮಾಜ ವಿಜ್ಞಾನದ ಸಂಶೋಧನಾ ವಿಧಾನಗಳನ್ನೇ ಅನುಸರಿಸಲಾಗಿರುವುದರಿಂದ ವರದಿ ತಯಾರಿಕೆಯಲ್ಲಿ ಯಾವುದೇ ದೋಷವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ವರದಿ ತಯಾರಿಕೆಗೂ ಮುನ್ನ ಸರಕಾರದ 31 ಪ್ರಮುಖ ಇಲಾಖೆಗಳಿಂದ ಸಮಿತಿಯು ಪಡೆದಿರುವ ದತ್ತಾಂಶಗಳು ಔಚಿತ್ಯಪೂರ್ಣವಾಗಿದೆ ಅಲ್ಲದೆ ಈ ಕಾಯ್ದೆಯಲ್ಲಿ ಕೆನೆ ಪದರ ಪರಿಕಲ್ಪನೆಯನ್ನು ಅಳವಡಿಸಿಲ್ಲವಾದ್ದರಿಂದ ಈ ಕಾಯ್ದೆಯನ್ನು ನಿರಂಕುಶ ಅಥವಾ ಅಸಾಂವಿಧಾನಿಕ ಎಂದು ಕರೆಯಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಸುಪ್ರೀಂ ತೀರ್ಪು ಅನುಷ್ಠಾನಕ್ಕೆ ಸೂಚನೆ
ಬೆಂಗಳೂರು:
ಭಡ್ತಿ ಮೀಸಲಾತಿ ಕುರಿತ ತೀರ್ಪಿನಿಂದಾಗಿ ರಾಜ್ಯ ಸರಕಾರ ನಿರಾಳವಾಗಿದೆ. ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಸಹಿತ ಪ್ರಮುಖ ನಾಯಕರೆಲ್ಲರೂ ತೀರ್ಪನ್ನು ಸ್ವಾಗತಿಸಿದ್ದಾರೆ.

2017ರ ಸುಪ್ರೀಂಕೋರ್ಟ್‌ ತೀರ್ಪಿನ ಅನ್ವಯ ಹಿಂಭಡ್ತಿ ಪಡೆಯಲಿದ್ದವರ ರಕ್ಷಣೆಗಾಗಿ ಕಳೆದ ವರ್ಷವಷ್ಟೇ ಸಿದ್ದರಾಮಯ್ಯ ಸರಕಾರ ಹೊಸ ಕಾಯ್ದೆಯನ್ನೇ ಜಾರಿ ಮಾಡಿತ್ತು. ಆದರೆ ಕಾಯ್ದೆಯ ಸಿಂಧುತ್ವವನ್ನೇ ಪ್ರಶ್ನಿಸಿದ್ದರಿಂದ ಮತ್ತು ಅನುಷ್ಠಾನಕ್ಕೆ ತಡೆಯಾಜ್ಞೆ ನೀಡಿದ್ದರಿಂದ ಸೇವಾ ಜೇಷ್ಠತೆ ಅನುಷ್ಠಾನ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಈಗ ಮತ್ತೆ ಅನುಷ್ಠಾನ ಪ್ರಕ್ರಿಯೆಯನ್ನು ಆರಂಭಿಸಲು ಸೂಚನೆ ನೀಡಲಾಗಿದೆ. ತೀರ್ಪು ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅವರ ಜತೆ ಚರ್ಚಿಸಿದ ಮುಖ್ಯಮಂತ್ರಿಯವರು, ಮುಂದಿನ ಪ್ರಕ್ರಿಯೆಗಳಿಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ. ಜತೆಗೆ ಅಡ್ವೋಕೇಟ್ ಜನರಲ್, ಡಿಸಿಎಂ ಡಾ| ಜಿ. ಪರಮೇಶ್ವರ್‌ ಸೇರಿ ಸಂಪುಟ ಸಹೋದ್ಯೋಗಿಗಳ ಜತೆಯೂ ಸಿಎಂ ಸಮಾಲೋಚನೆ ನಡೆಸಿದ್ದಾರೆ.

ರಾಜ್ಯದ ಮೀಸಲಾತಿ ಅಧಿನಿಯಮ 2018 ಅನ್ನು ಎತ್ತಿ ಹಿಡಿಯುವ ಸುಪ್ರೀಂ ಕೋರ್ಟ್‌ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ನಮ್ಮ ಸರಕಾರವು ಸಂವಿಧಾನಿಕ ಚೌಕಟ್ಟಿನಲ್ಲಿ ಸರಕಾರಿ ನೌಕರರ ಹಿತರಕ್ಷಣೆಗೆ ಬದ್ಧವಾಗಿದೆ. ಎಲ್ಲರಿಗೂ ಅವಕಾಶ ಒದಗಿಸುವ ಸರಕಾರದ ಸದುದ್ದೇಶವನ್ನು ಈ ತೀರ್ಪು ಬೆಂಬಲಿಸಿದೆ.
– ಎಚ್.ಡಿ. ಕುಮಾರಸ್ವಾಮಿ
ಸರಕಾರಿ ನೌಕರರಿಗೆ ಅನ್ಯಾಯವಾಗಬಾರದು ಎಂದು ನಾನು ಸಿಎಂ ಆಗಿದ್ದಾಗ ಎಸ್‌ಸಿ- ಎಸ್ಟಿ ಮೀಸಲಾತಿ ಕಾಯ್ದೆ ಜಾರಿಗೆ ತಂದಿದ್ದೆ. ಇದರ ವಿರುದ್ಧ ಒಬ್ಬರು ಸುಪ್ರೀಂಗೆ ಹೋಗಿದ್ದರು. ಆದರೆ ಇವತ್ತು ನಮ್ಮ ಕ್ರಮಕ್ಕೆ ಮಾನ್ಯತೆ ಸಿಕ್ಕಿದೆ.
– ಸಿದ್ದರಾಮಯ್ಯ
Advertisement

Udayavani is now on Telegram. Click here to join our channel and stay updated with the latest news.

Next