ನವದೆಹಲಿ: ಪಂಚರಾಜ್ಯಗಳ ಚುನಾವಣೆಯ ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಿಗೆ ದೇಣಿಗೆ ಬರುವ ಮಾರ್ಗವಾದ ಚುನಾವಣಾ ಬಾಂಡ್‌ಗಳ ಮಾರಾಟವನ್ನು ನಿಲ್ಲಿಸಬೇಕೆಂದು ಆಗ್ರಹಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು (ಪಿಐಎಲ್) ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ನೇತೃತ್ವದ ನ್ಯಾಯಪೀಠ ಈ ಆದೇಶ ನೀಡಿದೆ. ಎನ್‌ಜಿಒ ಒಂದು ಈ ಬಗ್ಗೆ ಅರ್ಜಿ ಸಲ್ಲಿಸಿತ್ತು.
ವಾದವೇನು?
ವಿಧಾನಸಭೆ ಚುನಾವಣೆ ನಡೆಯಲಿರುವ ತಮಿಳುನಾಡು, ಅಸ್ಸಾಂ, ಕೇರಳ, ಪುದುಚ್ಚೇರಿ ಹಾಗೂ ಪಶ್ಚಿಮ ಬಂಗಾಳದ ರಾಜಕೀಯ ಪಕ್ಷಗಳಿಗೆ ದೇಣಿಗೆಗೆ ಅವಕಾಶ ಕಲ್ಪಿಸುವ ಸಲುವಾಗಿ ಏ. 1ರಿಂದ 10ರವರೆಗೆ ಚುನಾವಣಾ ಬಾಂಡ್‌ಗಳ ಮಾರಾಟಕ್ಕೆ ಕೇಂದ್ರ ಸರ್ಕಾರ ಅನುವು ಮಾಡಿಕೊಟ್ಟಿದೆ. ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ನಕಲಿ ಸಂಸ್ಥೆಗಳ ಮೂಲಕ ಅಕ್ರಮ ಹಣ ಹರಿದುಬರುವುದನ್ನು ಈಗಾಗಲೇ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹಾಗೂ ಕೇಂದ್ರ ಚುನಾವಣಾ ಆಯೋಗಗಳು ಸ್ಪಷ್ಟಪಡಿಸಿವೆ. ಹಾಗಾಗಿ, ಬಾಂಡ್‌ಗಳ ಮಾರಾಟಕ್ಕೆ ತಡೆ ನೀಡಬೇಕು” ಎಂದು ಸಂಸ್ಥೆ ಕೋರಿತ್ತು.
ಇದನ್ನೂ ಓದಿ :ನಾಸಾದ “ಜೆಪಿಎಲ್’ ಮಾದರಿ ಇಸ್ರೋ ಅಳವಡಿಕೆ : ಕೇರಳದ ಐಐಎಸ್‌ಟಿ ಜತೆಗೂಡಿ ಸಂಶೋಧನಾ ಚಟುವಟಿಕೆ
ಇದಕ್ಕೆ ಉತ್ತರಿಸಿದ ಸುಪ್ರೀಂ ಕೋರ್ಟ್, “”2018, 2019ರಲ್ಲೇ ಈ ಬಾಂಡ್‌ಗಳು ಮಾರಾಟವಾಗಿವೆ. ಅಲ್ಲದೆ, ಅಕ್ರಮ ಹಣ ಹರಿದುಬರುವುದಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಹಾಗಾಗಿ, ಬಾಂಡ್ ಮಾರಾಟಕ್ಕೆ ತಡೆ ನೀಡುವ ಯಾವ ಗುರುತರ ಅಂಶ ಕಾಣುತ್ತಿಲ್ಲ” ಎಂದು ಹೇಳಿತು.