ಹೊಸದಿಲ್ಲಿ: ದ್ವಿತೀಯ ಪಿಯುಸಿ ಅಥವಾ 12ನೇ ತರಗತಿಯ ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನ ಫಲಿತಾಂಶವನ್ನು ಜುಲೈ 31ರೊಳಗಾಗಿ ಪ್ರಕಟಿಸಬೇಕು. ಹತ್ತು ದಿನಗಳೊಳಗಾಗಿ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳ ಉತ್ತೀರ್ಣ ಸೂತ್ರವನ್ನು ಅಂತಿಮಗೊಳಿಸಬೇಕು ಎಂದು ರಾಜ್ಯ ಶಿಕ್ಷಣ ಮಂಡಳಿಗಳಿಗೆ ಸುಪ್ರೀಂ ಕೋರ್ಟ್ ಗುರುವಾರ ತಾಕೀತು ಮಾಡಿದೆ.
ಬಹುತೇಕ ರಾಜ್ಯಗಳು ಕೊರೊನಾ ಹಿನ್ನೆಲೆಯಲ್ಲಿ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಿವೆ. ಹೀಗಾಗಿ ವಿದ್ಯಾರ್ಥಿಗಳ ಮೌಲ್ಯಮಾಪನವನ್ನು ಹೇಗೆ ಮಾಡಲಾಗುತ್ತದೆ ಎಂಬ ಸೂತ್ರವನ್ನು ತನ್ನ ಅವಗಾಹನೆಗೆ ತನ್ನಿ ಎಂದೂ ಮಂಡಳಿಗಳಿಗೆ ಸುಪ್ರೀಂ ಕೋರ್ಟ್ ನ್ಯಾ| ಎ.ಎಂ. ಖಾನ್ವಿಳ್ಕರ್ ಮತ್ತು ನ್ಯಾ| ದಿನೇಶ್ ಮಾಹೇಶ್ವರಿ ಅವರನ್ನು ಒಳಗೊಂಡ ಪೀಠ ಸೂಚಿಸಿದೆ.
ರಾಜ್ಯ ಶಿಕ್ಷಣ ಮಂಡಳಿಗಳು ನಡೆಸಲಿರುವ ಎಲ್ಲ ಪರೀಕ್ಷೆಗಳನ್ನು ರದ್ದು ಮಾಡಬೇಕು ಮತ್ತು ದೇಶವ್ಯಾಪಿ ಏಕರೂಪದ ಮೌಲ್ಯಮಾಪನ ನೀತಿಯನ್ನು ಜಾರಿಗೊಳಿಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ಈ ನಿರ್ದೇಶನ ನೀಡಿದೆ.
ಏಕರೂಪ ನೀತಿಗೆ ನಕಾರ:
ಇದೇ ವೇಳೆ, ಮೌಲ್ಯಮಾಪನಕ್ಕೆ ಏಕರೂಪದ ನೀತಿ ಜಾರಿ ಮಾಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಪ್ರತೀ ರಾಜ್ಯ ಶಿಕ್ಷಣ ಮಂಡಳಿಯೂ ತನ್ನದೇ ಆದ ಮೌಲ್ಯಮಾಪನ ವಿಧಾನವನ್ನು ರಚಿಸುವಂಥ ಸ್ವಾಯತ್ತೆ ಹೊಂದಿದೆ. ಹೀಗಾಗಿ ಏಕರೂಪದ ನೀತಿಯ ಅಗತ್ಯವಿಲ್ಲ, ಈ ಕುರಿತು ನಾವು ಯಾವುದೇ ನಿರ್ದೇಶನ ನೀಡುವುದಿಲ್ಲ. ಆದರೆ ಆಯಾ ಶಿಕ್ಷಣ ಮಂಡಳಿಗಳು ಗುರುವಾರದಿಂದ ಮುಂದಿನ 10 ದಿನಗಳ ಒಳಗಾಗಿ ಮೌಲ್ಯಮಾಪನ ವಿಧಾನವನ್ನು ಅಂತಿಮಗೊಳಿಸಿ ನಮಗೆ ವಿವರ ಸಲ್ಲಿಸಬೇಕು ಎಂದು ನ್ಯಾಯಪೀಠ ಹೇಳಿದೆ.