ನವದೆಹಲಿ: ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ, ಮೈಸೂರು ಮೂಲದ ಎಸ್.ರವೀಂದ್ರ ಭಟ್ ಅವರು ಶುಕ್ರವಾರ ನಿವೃತ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಸುಪ್ರೀಂಕೋರ್ಟ್ ಬಾರ್ ಎಸೋಸಿಯೇಷನ್ ವತಿಯಿಂದ ಶುಭ ಕೋರುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯಮೂರ್ತಿ ಸಂಜಯ ಕಿಶನ್ ಕೌಲ್ “ನ್ಯಾಯಾಂಗ ಕ್ಷೇತ್ರಕ್ಕೆ ನ್ಯಾ.ಎಸ್.ರವೀಂದ್ರ ಭಟ್ ಅವರ ಕೊಡುಗೆ ಅಪಾರವಾದದ್ದು. ಅವರು ನೀಡುವ ತೀರ್ಪುಗಳು ಸಂಕ್ಷಿಪ್ತವಾಗಿ ಮತ್ತು ಖಚಿತವಾಗಿ ಹೇಳಬೇಕಾಗಿರುವ ಅಂಶಗಳನ್ನು ಉಲ್ಲೇಖೀಸುತ್ತಿದ್ದರು. ಸಾಂವಿಧಾನಿಕ ಪ್ರಕರಣಗಳಲ್ಲಿ ಅವರು ನೀಡಿದ ತೀರ್ಪುಗಳು ಗಮನಾರ್ಹ’ ಎಂದರು. 1979ರಿಂದ ತಾವು ನ್ಯಾ.ಎಸ್.ರವೀಂದ್ರ ಭಟ್ ಜತೆಗೆ ಕೆಲಸ ಮಾಡುತ್ತಿರುವುದಾಗಿಯೂ ನ್ಯಾ.ಕೌಲ್ ನೆನಪಿಸಿಕೊಂಡರು.
ಸನ್ಮಾನಕ್ಕೆ ಉತ್ತರವಾಗಿ ಮಾತನಾಡಿದ ನ್ಯಾ.ರವೀಂದ್ರ ಭಟ್, ನ್ಯಾಯವಾದಿಯಾಗಿ, ನಂತರ ನ್ಯಾಯಾಧೀಶರಾಗಿ, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗಳಲ್ಲಿ ಕೆಲಸ ಮಾಡಿದ ದಿನಗಳನ್ನು ನೆನಪಿಸಿಕೊಂಡು, ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.
ಕೆಲ ದಿನಗಳ ಹಿಂದಷ್ಟೇ ಅವರು ಸಲಿಂಗ ವಿವಾಹ ನಿಷೇಧಿಸುವ ಐವರು ಸದಸ್ಯರು ಇರುವ ಸಾಂವಿಧಾನಿಕ ಪೀಠದಲ್ಲಿ ನ್ಯಾ.ರವೀಂದ್ರ ಭಟ್ ಇದ್ದರು. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೀಡಿದ್ದ ತೀರ್ಪಿನ ಕೆಲವು ಅಂಶಗಳ ಬಗ್ಗೆ ಅವರು ಒಪ್ಪಿರಲಿಲ್ಲ. 2019ರಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲು ನೀಡಿದ್ದನ್ನು ಸಮರ್ಥಿಸುವ ತೀರ್ಪು ನೀಡಿದ್ದ ನ್ಯಾಯಪೀಠದಲ್ಲೂ ಅವರು ಇದ್ದರು.
1958 ಅ.21ರಂದು ಜನಿಸಿದ ರವೀಂದ್ರ ಭಟ್ ಅವರು ಬೆಂಗಳೂರು ಮತ್ತು ಗ್ವಾಲಿಯರ್‌ನಲ್ಲಿ ಶಿಕ್ಷಣ ಪಡೆದಿದ್ದಾರೆ. ದೆಹಲಿ ವಿವಿಯಿಂದ 1982ರಲ್ಲಿ ಕಾನೂನು ಪದವಿ ಪಡೆದರು. 2004 ಜು.16ರಿಂದ 2019 ಮೇ 4ರ ವರೆಗೆ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದರು. 2019 ಮೇ 5ರಿಂದ 2019 ಸೆ.22ರ ವರೆಗೆ ರಾಜಸ್ಥಾನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದರು. 2019 ಸೆ.23ರಿಂದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ.