Advertisement
ನ್ಯಾಯಾಂಗ ನಿಂದನೆ ಪ್ರಕರಣ ಸಂಬಂಧ ನ್ಯಾಯಾಲಯದ ಮುಂದೆ ಹಾಜರಾಗುವಲ್ಲಿ ವಿಫಲವಾದ ನ್ಯಾ.ಸಿ.ಎಸ್. ಕರ್ಣನ್ ವಿರುದ್ಧ ಶನಿವಾರ ಸಿಜೆಐ ಜೆ.ಎಸ್. ಖೆಹರ್ ನೇತೃತ್ವದ ನ್ಯಾಯಪೀಠ ಬಂಧನ ವಾರಂಟ್ ಜಾರಿ ಮಾಡಿ ಅಚ್ಚರಿಯ ಆದೇಶ ಹೊರಡಿಸಿದೆ. ಮಾ.31ರೊಳಗೆ ಅವರನ್ನು ಕೋರ್ಟ್‌ಗೆ ಹಾಜರುಪಡಿಸುವಂತೆಯೂ ಪಶ್ಚಿಮ ಬಂಗಾಳ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದೆ. ಹೀಗಾಗಿ, ಬಂಧನ ವಾರಂಟ್ ಪಡೆದ ಮೊತ್ತಮೊದಲ ಹಾಲಿ ಜಡ್ಜ್ ಎಂದು ನ್ಯಾಯಾಂಗ ಇತಿಹಾಸದ ಪುಟಗಳಲ್ಲಿ ನ್ಯಾ.ಕರ್ಣನ್ ಹೆಸರು ದಾಖಲಾಗಲಿದೆ.
Related Articles
Advertisement
ಈ ಹಿನ್ನೆಲೆಯಲ್ಲಿ ಶನಿವಾರ ನಡೆದ ವಿಚಾರಣೆ ವೇಳೆ, ಸಿಜೆಐ ಜೆ.ಎಸ್.ಖೆಹರ್ ಸೇರಿದಂತೆ ಏಳು ಮಂದಿ ನ್ಯಾಯಮೂರ್ತಿಗಳ ಪೀಠವು, ನ್ಯಾ. ಕರ್ಣನ್ ವಿರುದ್ಧ ಜಾಮೀನುಸಹಿತ ಬಂಧನ ವಾರಂಟ್ ಜಾರಿ ಮಾಡಿದೆ. ಅವರನ್ನು ಹಾಜರಾಗುವಂತೆ ಮಾಡಲು ಬೇರೆ ದಾರಿ ಇರದ ಕಾರಣ, ಹೀಗೆ ಮಾಡುತ್ತಿದ್ದೇವೆ. 31ರಂದು ಅವರನ್ನು ಹಾಜರುಪಡಿಸಬೇಕು ಎಂದು ಪಶ್ಚಿಮ ಬಂಗಾಳ ಡಿಜಿಪಿಗೆ ಸೂಚಿಸಿದೆ. ಇದರ ಬೆನ್ನಲ್ಲೇ, ಕೋಲ್ಕತಾದಲ್ಲಿರುವ ತಮ್ಮ ನಿವಾಸದಲ್ಲೇ ಆದೇಶ ಹೊರಡಿಸಿರುವ ನ್ಯಾ.ಕರ್ಣನ್, “ತಮ್ಮ ವಿರುದ್ಧ ವಾರಂಟ್ ಜಾರಿ ಮಾಡಿರುವ ನ್ಯಾಯಮೂರ್ತಿಗಳನ್ನು ವಿಚಾರಣೆಗೆ ಒಳಪಡಿಸಿ’ ಎಂದು ಸಿಬಿಐಗೆ ಸೂಚಿಸಿದ್ದಾರೆ ಮತ್ತು “ಸುಪ್ರೀಂ ಕೋರ್ಟ್ ಏನೂ ನನ್ನ ಮಾಸ್ಟರ್ ಅಲ್ಲ’ ಎಂದು ಹೇಳಿದ್ದಾರೆ.
ಸುಪ್ರೀಂ ನ್ಯಾಯಪೀಠ ಹೇಳಿದ್ದು– ನ್ಯಾ. ಕರ್ಣನ್ ಅವರ ವಿರುದ್ಧ ಬಂಧನ ವಾರಂಟ್ ಜಾರಿ ಮಾಡುತ್ತಿದ್ದೇವೆ
– ಮಾ.31ರಂದು ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ವೇಳೆ ಅವರನ್ನು ಹಾಜರುಪಡಿಸಬೇಕು
– ಅವರನ್ನು ಕೋರ್ಟ್ ಮುಂದೆ ಹಾಜರಾಗುವಂತೆ ಮಾಡಲು ಬೇರೆ ಯಾವುದೇ ದಾರಿಯಿಲ್ಲ ನ್ಯಾ.ಕರ್ಣನ್ ವಾದವೇನು?
– ನನ್ನ ವಿರುದ್ಧ ಆದೇಶ ಜಾರಿ ಮಾಡಿದ ಎಲ್ಲ ನ್ಯಾಯಮೂರ್ತಿಗಳ ವಿರುದ್ಧ ತನಿಖೆ ನಡೆಸುವಂತೆ ಸಿಬಿಐಗೆ ಆದೇಶಿಸಿದ್ದೇನೆ. ಸುಪ್ರೀಂ ಕೋರ್ಟ್ ನನ್ನ ಮಾಸ್ಟರ್ ಅಲ್ಲ.
– ನನ್ನ ವಿರುದ್ಧ ಸುಪ್ರೀಂ ಕೋರ್ಟ್ ಬಂಧನ ವಾರಂಟ್ ಜಾರಿ ಮಾಡಿದೆ. ಹೌದು. ಇಂಥದ್ದೊಂದು ಘಟನೆ ಈವರೆಗೆ ನಡೆದೇ ಇಲ್ಲ. ಹಾಲಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಇದೆಲ್ಲ ಶುರುವಾಗಿದ್ದು. ಕೆಳವರ್ಗದವರನ್ನು ಮತ್ತಷ್ಟು ತುಳಿಯಲು ಆರಂಭಿಸಿದ್ದು.
– ಸುಪ್ರೀಂನ 9 ನಿವೃತ್ತ ನ್ಯಾಯಮೂರ್ತಿಗಳ ಭ್ರಷ್ಟಾಚಾರದ ಕುರಿತು ಹಿರಿಯ ನ್ಯಾಯವಾದಿ ಶಾಂತಿಭೂಷಣ್ ಫೆ.8ರಂದು ಅಫಿಡವಿಟ್ ಸಲ್ಲಿಸಿದ್ದರು. ಆದರೆ, ಇನ್ನೂ ಅದರ ವಿಚಾರಣೆ ನಡೆದಿಲ್ಲ. ಆ ನ್ಯಾಯಮೂರ್ತಿಗಳ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ಆರೋಪ ಹೊರಿಸುತ್ತಿಲ್ಲ? ಅವರು ಮೇಲ್ವರ್ಗದವರು ಎಂಬ ಕಾರಣಕ್ಕಾಗಿಯೇ?
– ಜಯಲಲಿತಾ ಪರ ತೀರ್ಪು ನೀಡಲು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯೊಬ್ಬರಿಗೆ 200 ಕೋಟಿ ರೂ. ಲಂಚ ನೀಡಲಾಗಿತ್ತು ಎಂದು ವಕೀಲರ ಸಂಘವೇ ಆರೋಪಿಸಿದೆ. ಆದರೆ, ಆ ನ್ಯಾಯಮೂರ್ತಿ ವಿರುದ್ಧವೇಕೆ ನ್ಯಾಯಾಂಗ ನಿಂದನೆ ಆದೇಶ ಹೊರಡಿಸಿಲ್ಲ?
– ಇದು ಜಾತಿಗೆ ಸಂಬಂಧಿಸಿದ ವಿಷಯ. ಒಬ್ಬ ದಲಿತ ಜಡ್ಜ್ಗೆ ಕೆಲಸ ಮಾಡಲು ಬಿಡುತ್ತಿಲ್ಲ. ಅದು ದಲಿತ ದೌರ್ಜನ್ಯ ಪ್ರಕರಣ.
– ನಾನು ನನ್ನ ನ್ಯಾಯಾಂಗ ಅಧಿಕಾರವನ್ನು ಬಳಸಿಕೊಳ್ಳುತ್ತಿದ್ದೇನೆ. ಎಲ್ಲ 7 ನ್ಯಾಯಮೂರ್ತಿಗಳು ರಾಜೀನಾಮೆ ನೀಡಿ, ವಿಚಾರಣೆ ಎದುರಿಸಬೇಕು.
– ನನ್ನ ವಿರುದ್ಧದ ಬಂಧನ ವಾರಂಟ್ ರದ್ದು ಮಾಡಬೇಕೆಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಕೇಳಿಕೊಳ್ಳುತ್ತೇನೆ ನ್ಯಾ. ಕರ್ಣನ್‌ರನ್ನು ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲೇಬಾರದಿತ್ತು. ಅವರನ್ನು ವಾಗ್ಧಂಡನೆಗೆ ಒಳಪಡಿಸಬೇಕು. ಅವರ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಮಾತ್ರವಲ್ಲ, ಬಂಧನ ವಾರಂಟ್ ಕೂಡ ಜಾರಿಯಾಗಿದೆ.
– ಪಿ.ಪಿ. ರಾವ್, ಸಂವಿಧಾನ ತಜ್ಞ ನ್ಯಾ. ಕರ್ಣನ್ ವಿರುದ್ಧ ಬಂಧನದ ವಾರಂಟ್ ಹೊರಡಿಸುವ ಕಾನೂನು ಅಧಿಕಾರ ಸುಪ್ರೀಂಕೋರ್ಟ್‌ಗೆ ಇದೆ. ಏಕೆಂದರೆ, ಅವರ ಮೇಲೆ ನ್ಯಾಯಾಂಗ ನಿಂದನೆಯ ಪ್ರಕರಣ ಇತ್ತು. ಹಾಜರಾಗುವಂತೆ ಸುಪ್ರೀಂಕೋರ್ಟ್ ನೋಟಿಸ್ ಕೊಟ್ಟಿತ್ತು. ಗೈರು ಹಾಜರಾಗಿದ್ದಕ್ಕೆ ಬಂಧನದ ವಾರಂಟ್ ಹೊರಡಿಸಲಾಗಿದೆ. ಆದರೆ, ಏಳು ನ್ಯಾಯಮೂರ್ತಿಗಳ ವಿರುದ್ಧ ನ್ಯಾ. ಕರ್ಣನ್ ಸಿಬಿಐ ತನಿಖೆಗೆ ಆದೇಶ ಮಾಡಿರುವುದು ಮೂರ್ಖತನ. ಆ ರೀತಿ ಆದೇಶ ಮಾಡಲಿಕ್ಕೆ ಬರುವುದೇ ಇಲ್ಲ. ಅಷ್ಟಕ್ಕೂ ಅವರು ನ್ಯಾಯಿಕ ಆದೇಶ ಹೊರಡಿಸಿಲ್ಲ, ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರಷ್ಟೇ.
– ಅಶೋಕ್ ಹಾರನಹಳ್ಳಿ, ಮಾಜಿ ಅಡ್ವೋಕೇಟ್ ಜನರಲ್.