ಕಾಠ್ಮಂಡು: ನೇಪಾಳ ಸಂಸತ್ ಅನ್ನು ವಿಸರ್ಜಿಸಿರುವುದನ್ನು ಸಮರ್ಥಿಸಿಕೊಂಡು 18 ಅಂಶಗಳನ್ನೊಳಗೊಂಡ ಪತ್ರವನ್ನು ನೇಪಾಳದ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಗುರುವಾರ (ಜೂನ್ 17) ಸುಪ್ರೀಂಕೋರ್ಟ್ ಗೆ ಬರೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ: ಅರಣ್ಯ ಅಧಿಕಾರಿಗಳ ಭರ್ಜರಿ ಭೇಟೆ : 25 ಲಕ್ಷ ಮೌಲ್ಯದ ಶ್ರೀಗಂಧ ವಶ
ಎರಡನೇ ಬಾರಿಗೆ ಸಂಸತ್ ಅನ್ನು ವಿಸರ್ಜಿಸಿರುವ ಕ್ರಮವನ್ನು ಸಮರ್ಥಿಸಿಕೊಂಡಿರುವ ಕೆಪಿ ಒಲಿ ಅವರು, ತನ್ನ ಹಾಗೂ ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ಡಿಯುಬಾ ಅವರ ಮನವಿಯನ್ನು ಅಧ್ಯಕ್ಷರು ತಿರಸ್ಕರಿಸಿದ ನಂತರ ಪರ್ಯಾಯ ಸರ್ಕಾರ ರಚಿಸುವ ಯಾವುದೇ ಸಾಧ್ಯತೆ ಇಲ್ಲ ಎಂದು ತಿಳಿಸಿದ್ದಾರೆ.
ಸರ್ಕಾರ ರಚಿಸುವುದು ರಾಜಕೀಯದ ಪ್ರಕ್ರಿಯೆಯಾಗಿದೆ ಮತ್ತು ಅದನ್ನು ಸುಪ್ರೀಂಕೋರ್ಟ್ ನಿರ್ಧರಿಸಲು ಸಾಧ್ಯವಿಲ್ಲ. ಸಂವಿಧಾನದ ಕಲಂ 76(5)ರ ಪ್ರಕಾರ, ಪಕ್ಷದ ಬೆಂಬಲದ ಆಧಾರದ ಮೇಲೆ ಮಾತ್ರ ಪ್ರಧಾನಿಯನ್ನು ಆಯ್ಕೆ ಮಾಡಬಹುದಾಗಿದೆ. ಆದರೆ ಯಾವ ಪಕ್ಷಕ್ಕೆ ಬಹುಮತ ಇದೆ ಎಂದು ಪರೀಕ್ಷಿಸಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಒಲಿ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ವರದಿ ವಿವರಿಸಿದೆ.
ಪಕ್ಷದ ಆಧಾರದ ಮೇಲೆ ಸರ್ಕಾರವನ್ನು ರಚಿಸುವುದು ಸಂಸದೀಯ ವ್ಯವಸ್ಥೆಯಲ್ಲಿನ ಅತ್ಯಂತ ಮೂಲಭೂತ ವ್ಯವಸ್ಥೆಯಾಗಿದೆ ಎಂದು ಪ್ರಧಾನಿ ಒಲಿ ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.