Advertisement
ನೀಟ್-ಪಿಜಿ ಪ್ರವೇಶದ ವೇಳೆ ಇತರೆ ಹಿಂದುಳಿದ ವರ್ಗಗಳಿಗೆ(ಒಬಿಸಿ) ಶೇ.27 ಮೀಸಲಾತಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗ(ಇಡಬ್ಲ್ಯುಎಸ್)ಗಳಿಗೆ ಶೇ.10 ಮೀಸಲಾತಿ ನೀಡುವ ಸರ್ಕಾರದ ನಿಯಮಕ್ಕೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಹಾಗೂ ಎ.ಎಸ್.ಬೋಪಣ್ಣ ಅವರನ್ನೊಳಗೊಂಡ ನ್ಯಾಯಪೀಠ ಅನುಮೋದನೆ ನೀಡಿದೆ. ಈಗಾಗಲೇ ನಿರ್ಧರಿಸಿರುವ ಮಾನದಂಡದ ಅನ್ವಯ, 2021-22ನೇ ಶೈಕ್ಷಣಿಕ ವರ್ಷದ ನೀಟ್-ಪಿಜಿ ಕೌನ್ಸೆಲಿಂಗ್ ನಡೆಸುವಂತೆ ಸೂಚಿಸಿದೆ.
ಕಳೆದ ವರ್ಷದ ಜುಲೈನಲ್ಲಿ ಕೇಂದ್ರ ಸರ್ಕಾರ ಪರಿಚಯಿಸಿದ್ದ ಮೀಸಲಾತಿಯನ್ನು ವಿರೋಧಿಸಿ ಸುಪ್ರೀಂಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಸರ್ಕಾರವು ಮೀಸಲಾತಿಗೆ ಅನುಸರಿಸಿರುವ ಮಾನದಂಡವನ್ನು ಸೂಕ್ತ ಅಧ್ಯಯನ ನಡೆಸದೇ ನಿಗದಿಪಡಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದರು. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಲು ಇರುವ 8 ಲಕ್ಷ ರೂ.ಗಳ ವಾರ್ಷಿಕ ಆದಾಯದ ಮಿತಿಯನ್ನು 2.5 ಲಕ್ಷ ರೂ.ಗಳಿಗೆ ಇಳಿಸಬೇಕು ಮತ್ತು ವೈದ್ಯ ಸ್ನಾತಕೋತ್ತರ ಪ್ರವೇಶವು ಯಾವತ್ತೂ ಮೆರಿಟ್ ಆಧರಿತವಾಗಿದ್ದು, ಕನಿಷ್ಠ ಮೀಸಲಾತಿ ಅನುಸರಿಸಬೇಕು ಎಂದು ಅರ್ಜಿದಾರರು ಕೋರಿದ್ದರು.