ನವದೆಹಲಿ: ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ಪಿಎಂ ಕೇರ್ ಫಂಡ್ ಹೆಸರಿನಲ್ಲಿ ಸಂಗ್ರಹವಾಗಿರುವ ಹಣವನ್ನು ಎನ್ ಡಿಆರ್ ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣ ಫಂಡ್) ಗೆ ವರ್ಗಾಯಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮಂಗಳವಾರ (ಆಗಸ್ಟ್ 18, 2020) ಆದೇಶ ನೀಡಿದೆ. ಪಿಎಂ ಕೇರ್ ಹೆಸರಿನಲ್ಲಿ ಸಂಗ್ರಹಿಸಿರುವ ಹಣ ಸಂಪೂರ್ಣವಾಗಿ ಭಿನ್ನವಾಗಿದ್ದು, ಇದು ಚಾರಿಟೇಬಲ್ ಟ್ರಸ್ಟ್ ನ ನಿಧಿಯಾಗಿದೆ ಎಂದು ತಿಳಿಸಿದೆ.
ಸೆಂಟರ್ ಫಾರ್ ಪಬ್ಲಿಕ್ ಇನ್ ಟ್ರೆಸ್ಟ್ ಲಿಟಿಗೇಶನ್ (ಸಿಪಿಐಎಲ್) ಹೆಸರಿನ ಎನ್ ಜಿಒ ಸುಪ್ರೀಂಕೋರ್ಟ್ ಕಟಕಟೆ ಏರಿದ್ದು, ಕೇಂದ್ರ ಸರ್ಕಾರ ಪಿಎಂ ಕೇರ್ ನಿಧಿಯನ್ನು ಎನ್ ಡಿಆರ್ ಎಫ್ ಗೆ ವರ್ಗಾಯಿಸಲು ನಿರ್ದೇಶನ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು. ಜೂನ್ 17ರಂದು ಈ ಬಗ್ಗೆ ಉತ್ತರ ನೀಡುವಂತೆ ಸುಪ್ರೀಂಕೋರ್ಟ್ ಕೇಂದ್ರಕ್ಕೆ ಸೂಚಿಸಿತ್ತು.
ರಾಷ್ಟ್ರೀಯ ವಿಪತ್ತು ನಿರ್ವಹಣೆಗೆ ಹೊಸ ಯೋಜನೆಯ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ತ್ರಿಸದಸ್ಯ ಪೀಠ ವಿಡಿಯೋ ಕಾನ್ಫೆರೆನ್ಸಿಂಗ್ ಮೂಲಕ ಈ ತೀರ್ಪನ್ನು ನೀಡಿತ್ತು.
ಪಿಎಂ ಕೇರ್ ಫಂಡ್ ನ ವ್ಯಾಲಿಟಿಡಿಯನ್ನು ಕೂಡಾ ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಅಲ್ಲದೇ ಪಿಎಂ ಕೇರ್ ಹಣವನ್ನು ಎನ್ ಡಿಆರ್ ಎಫ್ ಗೆ ವರ್ಗಾಯಿಸಲು ಕೇಂದ್ರಕ್ಕೆ ಸೂಚನೆ ನೀಡಲು ಸುಪ್ರೀಂ ನಿರಾಕರಿಸಿದೆ.
ಈ ತೀರ್ಪು ಹೊರಬೀಳುತ್ತಿದ್ದಂತೆಯೇ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಟ್ವೀಟ್ ಮಾಡಿದ್ದು, ಸ್ಪಷ್ಟವಾದ ಸಂದೇಶವನ್ನು ರವಾನಿಸಿದಂತಾಗಿದೆ ಎಂದು ತಿಳಿಸಿದ್ದಾರೆ.