ನವದೆಹಲಿ:ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಆದೇಶ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ(ಅಕ್ಟೋಬರ್ 16, 2020) ವಜಾಗೊಳಿಸಿದೆ. ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ವಜಾಗೊಳಿಸಿ, ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕು ಎಂದು ದೆಹಲಿಯ ಮೂವರು ನಿವಾಸಿಗಳು ಸುಪ್ರೀಂ ಮೆಟ್ಟಿಲೇರಿದ್ದರು.
“ಅರ್ಜಿಯನ್ನು ವಜಾಗೊಳಿಸಿರುವ ಸುಪ್ರೀಂಕೋರ್ಟ್ ಸಿಜೆಐ ಎಸ್ ಎ ಬೋಬ್ಡೆ, ನೀವು ರಾಷ್ಟ್ರಪತಿಯವರಲ್ಲಿಯೇ ಈ ಬಗ್ಗೆ ಕೇಳಿ ಎಂದು ಸೂಚಿಸಿದರು. ಮಹಾರಾಷ್ಟ್ರ ಎಷ್ಟು ವಿಸ್ತಾರ ಹೊಂದಿದೆ ಎಂಬುದು ನಿಮಗೆ ಗೊತ್ತಿದೆಯೇ ಎಂದು ಸಿಜೆಐ ಅರ್ಜಿದಾರರನ್ನು ಪ್ರಶ್ನಿಸಿದ್ದರು.
ವಕೀಲರಾದ ರಿಷಬ್ ಜೈನ್, ಗೌತಮ್ ಶರ್ಮಾ ಮತ್ತು ಸಾಮಾಜಿಕ ಕಾರ್ಯಕರ್ತ ವಿಕ್ರಮ್ ಗೆಹ್ಲೋಟ್, ಮಹಾರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಾಗಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ದೂರಿದ್ದರು. ಈ ಮೂವರು ಸಲ್ಲಿಸಿದ್ದ ಅರ್ಜಿಯಲ್ಲಿ, ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ, ಕಂಗನಾ ರನೌತ್ ಬಂಗಲೆ ಧ್ವಂಸ ಪ್ರಕರಣ ಮತ್ತು ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಮದನ್ ಲಾಲ್ ಮೇಲಿನ ಹಲ್ಲೆ ಪ್ರಕರಣವನ್ನು ಉಲ್ಲೇಖಿಸಿದ್ದರು ಎಂದು ವರದಿ ಹೇಳಿದೆ.
ಇದನ್ನೂ ಓದಿ:ನಾಯಕತ್ವ ತ್ಯಜಿಸಿದ ದಿನೇಶ್ ಕಾರ್ತಿಕ್! ಕೋಲ್ಕತ್ತಾ ನೈಟ್ ರೈಡರ್ಸ್ ಗೆ ಹೊಸ ನಾಯಕ
ಈ ಘಟನೆಗಳನ್ನೆಲ್ಲಾ ಗಮನಿಸಿದಾಗ ರಾಜ್ಯದ ಆಡಳಿತ ಯಂತ್ರ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾಗಿದ್ದು, ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕಾದ ಅಗತ್ಯವಿದೆ ಎಂದು ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದೆ.
“ಒಂದು ವೇಳೆ ಇಡೀ ರಾಜ್ಯದ ಮೇಲೆ ರಾಷ್ಟ್ರಪತಿ ಆಡಳಿತ ಹೇರಲು ಸಾಧ್ಯವಾಗದಿದ್ದರೂ, ಕೊನೆಯ ಪಕ್ಷ ಮುಂಬೈ ಮತ್ತು ಅದರ ಸುತ್ತ ಮುತ್ತ ಜಿಲ್ಲೆಗಳಲ್ಲಿಯಾದರೂ ರಾಷ್ಟ್ರಪತಿ ಆಡಳಿತ ಹೇರಬೇಕು ಎಂದು ಅರ್ಜಿದಾರರು ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿಯೇ ನಿಮಗೆ ಮಹಾರಾಷ್ಟ್ರದ ವಿಸ್ತಾರದ ಬಗ್ಗೆ ಅರಿವಿದೆಯೇ ಎಂದು ಸಿಜೆಐ ಪ್ರಶ್ನಿಸಿದ್ದರು.