ಹೊಸದಿಲ್ಲಿ: ನ್ಯಾಯಮೂರ್ತಿಗಳಿಗೆ ಪ್ರಕರಣಗಳ ಹಂಚಿಕೆಯಲ್ಲಿ ಹಿರಿಯ ನ್ಯಾಯಮೂರ್ತಿಗಳನ್ನು ಅವಗಣಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ತಿರುಗಿ ಬಿದ್ದ ಬೆನ್ನಲ್ಲೇ ನ್ಯಾಯಮೂರ್ತಿಗಳಿಗೆ ಪ್ರಕರಣಗಳ ಹಂಚಿಕೆಯಲ್ಲಿ ಪಾಳಿಪಟ್ಟಿ ವ್ಯವಸ್ಥೆ (ರೋಸ್ಟರ್ ಪದ್ಧತಿ) ಜಾರಿಗೆ ತರಲಾಗಿದೆ.
ಸು. ಕೋರ್ಟ್‌ನ ಮುಖ್ಯ ನ್ಯಾಯಾಧೀಶ ನ್ಯಾ| ದೀಪಕ್ ಮಿಶ್ರಾ ಅವರು ಬುಧವಾರ ಈ ಕುರಿತು ಅಧಿಸೂಚನೆ ಹೊರಡಿಸಿದ್ದು ಅದನ್ನು ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿಗಳು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.
ಮುಖ್ಯ ನ್ಯಾಯಮೂರ್ತಿಗಳು ಪ್ರಕ ಟಿಸಿರುವ 13 ಪುಟಗಳ ಅಧಿಸೂಚನೆಯಲ್ಲಿ ನ್ಯಾಯಾಲಯದಲ್ಲಿ ದಾಖಲಾಗುವ ಹೊಸ ಪ್ರಕರಣಗಳನ್ನು ಪಾಳಿಪಟ್ಟಿಯನ್ವಯ ನ್ಯಾಯಮೂರ್ತಿಗಳಿಗೆ ಹಂಚಿಕೆ ಮಾಡಲಾ ಗುವುದು. ಫೆ. 5ರಿಂದ ಇದು ಜಾರಿಗೆ ಬರಲಿದ್ದು, ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ ಎಂದು ಹೇಳಲಾಗಿದೆ.
ಅಧಿಸೂಚನೆಯನ್ವಯ ಪ್ರಕರಣಗಳನ್ನು ಮುಖ್ಯ ನ್ಯಾ|ದೀಪಕ್ ಮಿಶ್ರಾ ನೇತೃತ್ವದ ಪೀಠ ಸೇರಿದಂತೆ ನ್ಯಾ| ಚಲಮೇಶ್ವರ್, ನ್ಯಾ| ರಂಜನ್ ಗೊಗೋಯಿ, ನ್ಯಾ| ಎಂ.ಬಿ. ಲೋಕುರ್, ನ್ಯಾ| ಕುರಿಯನ್ ಜೋಸೆಫ್, ನ್ಯಾ|ಎ.ಕೆ.ಸಿಕ್ರಿ, ನ್ಯಾ| ಎಸ್.ಎ. ಬೋಬೆx, ನ್ಯಾ| ಆರ್.ಕೆ.ಅಗರವಾಲ್, ನ್ಯಾ| ಎನ್.ವಿ. ರಮಣ, ನ್ಯಾ| ಅರುಣ್ ಮಿಶ್ರಾ, ನ್ಯಾ| ಎ.ಕೆ.ಗೋಯೆಲ್ ಮತ್ತು ನ್ಯಾ| ಆರ್.ಎಫ್. ನಾರಿಮನ್ ನೇತೃತ್ವದ ಪೀಠಗಳಿಗೆ ಪಾಳಿಪಟ್ಟಿ ಪ್ರಕಾರ ಹಂಚಿಕೆ ಮಾಡಲಾಗುತ್ತದೆ.
ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣಗಳ ಹಂಚಿಕೆ ಸಹಿತ ಹಲವು ಸಮಸ್ಯೆಗಳ ಕುರಿತು ಹಿರಿಯ ನ್ಯಾ| ಚಲಮೇಶ್ವರ್ ನಿವಾಸದಲ್ಲಿ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಮಾಧ್ಯಮ ಗೋಷ್ಠಿ ನಡೆಸಿ ಬಹಿರಂಗ ಹೇಳಿಕೆ ನೀಡಿದ್ದರು. ಅಲ್ಲದೆ ಈ ಕುರಿತು ಹಿಂದೆ ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದಿದ್ದ ಪತ್ರವನ್ನೂ ಬಹಿರಂಗಪಡಿಸಿ ಈ ಪತ್ರಕ್ಕೆ ಮುಖ್ಯ ನ್ಯಾಯಮೂರ್ತಿಗಳು ಸ್ಪಂದಿಸಿಲ್ಲ ಎಂದು ಹೇಳಿದ್ದರು. ಇದರಿಂದಾಗಿ ಉನ್ನತ ನ್ಯಾಯಾಂಗದಲ್ಲಿ ನ್ಯಾಯಮೂರ್ತಿಗಳ ಮಧ್ಯೆಯೇ ಸಂಘರ್ಷದ ಸ್ಥಿತಿ ಉದ್ಭವವಾಗಿತ್ತು.
ಇದು ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದು, ರಾಜಕೀಯ ಮಧ್ಯ ಪ್ರವೇಶವಾಗಿರುವ ಬಗ್ಗೆಯೂ ಆರೋಪ ಗಳು ಕೇಳಿಬಂದವು. ಈ ಮಧ್ಯೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್, ಪ್ರಕರಣಗಳ ಹಂಚಿಕೆ ಕುರಿತು ಪಾಳಿಪಟ್ಟಿ ಬಗ್ಗೆ ಪ್ರಸ್ತಾವಿಸಿತ್ತು. ಇದಾದ ಬಳಿಕ ನ್ಯಾಯ ಮೂರ್ತಿಗಳ ನಡುವೆ ಹಲವು ಸುತ್ತಿನ ಸಭೆಗಳು ನಡೆದು ಪರಿಸ್ಥಿತಿ ತಿಳಿಯಾಗಿತ್ತು.