ನವದೆಹಲಿ: ಸುಪ್ರೀಂಕೋರ್ಟ್‌ನ ತೀರ್ಪುಗಳನ್ನು ನೇರವಾಗಿ ತಳ್ಳಿಹಾಕಬಾರದು. ಶಾಸಕಾಂಗಕ್ಕೆ ನ್ಯಾಯಾಂಗದ ತೀರ್ಪು ತಪ್ಪೆನಿಸಿದರೆ, ಕೊರತೆಯನ್ನು ಸರಿಪಡಿಸುವಂತಹ ಹೊಸ ಕಾನೂನನ್ನು ತರಲು ಶಾಸಕಾಂಗಕ್ಕೆ ಅವಕಾಶವಿದ್ದೇ ಇದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದ್ದಾರೆ.
ನವದೆಹಲಿಯಲ್ಲಿ ಆಯೋಜಿಸಲಾಗಿರುವ ” ಹಿಂದೂಸ್ತಾನ್ ಟೈಮ್ಸ್” ನಾಯಕತ್ವದ ಶೃಂಗದಲ್ಲಿ ಮಾತನಾಡಿದ ಅವರು, ಸಮಾಜ ಹೇಗೆ ನೋಡುತ್ತದೆ ಎಂಬುದನ್ನು ಗಮನಿಸಿ ನ್ಯಾಯಮೂರ್ತಿಗಳು ತೀರ್ಪು ಕೊಡಬಾರದು. ನ್ಯಾಯಾಂಗ ಸರ್ಕಾರದ ಇತರೆ ಅಂಗಗಳಂತಲ್ಲ ಎಂದು ಖಚಿತವಾಗಿ ಹೇಳಿದರು.
“ನಮಗೆ ತೀರ್ಪು ಸರಿಯೆನಿಸುತ್ತಿಲ್ಲ. ಅದಕ್ಕಾಗಿ ನಾವದನ್ನು ತಿರಸ್ಕರಿಸುತ್ತಿದ್ದೇವೆ ಎಂದು ಶಾಸಕಾಂಗ ಹೇಳಬಾರದು. ಹಾಗೆ ನೇರವಾಗಿ ನ್ಯಾಯಾಲಯದ ತೀರ್ಪನ್ನು ತಳ್ಳಿಹಾಕಬಾರದು’ ಎಂದು ಆಗ್ರಹಿಸಿದ್ದಾರೆ. ದೆಹಲಿಯಲ್ಲಿ ಸರ್ಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಕೊಟ್ಟ ತೀರ್ಪನ್ನು ಕೇಂದ್ರ ಸರ್ಕಾರ ತಿರಸ್ಕರಿಸಿ ಸುಗ್ರೀವಾಜ್ಞೆ ಹೊರಡಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ನ್ಯಾಯಮೂರ್ತಿಗಳು ಸಾಂವಿಧಾನಿಕ ನೈತಿಕತೆಯಿಂದ ಮಾರ್ಗದರ್ಶನ ಪಡೆಯುತ್ತಾರೆಯೇ ಹೊರತು, ಸಾರ್ವಜನಿಕ ನೈತಿಕತೆಯಿಂದಲ್ಲ. ನ್ಯಾಯಮೂರ್ತಿಗಳು ಚುನಾಯಿತರಾಗುವುದಿಲ್ಲ ಎನ್ನುವುದು ನಮ್ಮ ಕೊರತೆಯಲ್ಲ, ಅದು ಸಾಮರ್ಥ್ಯ ಎಂದು ಪ್ರತಿಪಾದಿಸಿದರು.
ವ್ಯತ್ಯಾಸವಿದೆ: ಅಮೆರಿಕದ ಸರ್ವೋಚ್ಚ ನ್ಯಾಯಾಲಯಕ್ಕೂ ಭಾರತದ ಸರ್ವೋಚ್ಚ ನ್ಯಾಯಾಲಯಕ್ಕೂ ವ್ಯತ್ಯಾಸವಿದೆ. ಅಮೆರಿಕದ ಪೀಠ ವರ್ಷಕ್ಕೆ 80 ಪ್ರಕರಣಗಳನ್ನು ಇತ್ಯರ್ಥ ಮಾಡುತ್ತದೆ. ಇನ್ನೂ ಎರಡು ತಿಂಗಳು ಬಾಕಿಯಿರುವಂತೆ ನಾವು 72,000 ಪ್ರಕರಣಗಳನ್ನು ಇತ್ಯರ್ಥ ಮಾಡಿದ್ದೇವೆ. ನ್ಯಾಯಾಲಯದ ಮೇಲೆ ಜನ ನಂಬಿಕೆಯುಳಿಸಿಕೊಳ್ಳುವಂತೆ ನಾವು ನಡೆದುಕೊಳ್ಳಬೇಕು. ಮೇಲ್ಮನವಿ ಸಲ್ಲಿಸುವಲ್ಲಿ ಸುಪ್ರೀಂಕೋರ್ಟ್ ಅಂತಿಮ ಎಂದು ಚಂದ್ರಚೂಡ್ ಹೇಳಿದರು.