Advertisement

“ಕೋವಿಡ್’ವೈದ್ಯರಿಗೆ ರಜೆ ನೀಡಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಸಲಹೆ

08:59 PM Dec 15, 2020 | mahesh |

ಹೊಸದಿಲ್ಲಿ: ಏಳೆಂಟು ತಿಂಗಳಿಂದ ವಿರಮಿಸದೆ ಕೆಲಸ ಮಾಡುತ್ತಿರುವ ವೈದ್ಯರಿಗೆ ಒಂದಷ್ಟು ವಿಶ್ರಾಂತಿ ನೀಡಿ. ಇಲ್ಲದಿದ್ದರೆ ಅವರ ಮಾನಸಿಕ ಆರೋಗ್ಯದ ಮೇಲೆ ಅಡ್ಡಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಸುಪ್ರೀಂ ಕೋರ್ಟ್‌ ಸರಕಾರಕ್ಕೆ ಸೂಚಿಸಿದೆ.

Advertisement

ದೇಶದಲ್ಲಿ ಮಾರ್ಚ್‌ನಲ್ಲಿ ಕೊರೊನಾ ಕಾಣಿಸಿಕೊಂಡು, ಅನಂತರ ಬಹಳಷ್ಟು ಏರಿಕೆಯಾಗಿದೆ. ಅಂದಿನಿಂದ ಇಂದಿನ ವರೆಗೂ ಜನರ ಜೀವ ಉಳಿಸುವಲ್ಲಿ ವೈದ್ಯರ ಪರಿಶ್ರಮ ಕಡಿಮೆಯೇನಲ್ಲ. ಆದರೆ ಅವರಿಗೇ ವಿಶ್ರಾಂತಿ ನೀಡದಿದ್ದರೆ ಕಷ್ಟ. ಈ ಬಗ್ಗೆ ನಮಗೆ ನೋವುಂಟಾಗಿದೆ. ಹೀಗಾಗಿ ಅವರಿಗೆ ವಿರಾಮ ನೀಡುವ ಬಗ್ಗೆ ಕೇಂದ್ರ ಸರಕಾರ ನಿರ್ಧರಿಸಬೇಕು ಎಂದು ಅಡಿಶನಲ್‌ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ಕೋರ್ಟ್‌ ಸೂಚಿಸಿತು.

ಕೊರೊನಾ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು ಮತ್ತು ಕೊರೊನಾದಿಂದ ಮೃತಪಟ್ಟವರಿಗೆ ಗೌರವಯುತ ಅಂತ್ಯಸಂಸ್ಕಾರ ಒದಗಿಸಬೇಕು ಎಂಬ ಮನವಿ ಕುರಿತು ಸ್ವಯಂಪ್ರೇರಿತವಾಗಿ ಅರ್ಜಿ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ಸರ್ವೋಚ್ಚ ನ್ಯಾಯಾಲಯವು, ಕೇಂದ್ರ ಸರಕಾರ ಮತ್ತು ಗುಜರಾತ್‌ ಸರಕಾರಗಳ ವಿರುದ್ಧ ಕಿಡಿಕಾರಿತು. ಗುಜರಾತ್‌ನಲ್ಲಿ ಮಾಸ್ಕ್ ಧರಿಸದಿರುವ ವ್ಯಕ್ತಿಗಳಿಂದ 90 ಕೋ.ರೂ. ದಂಡ ಸಂಗ್ರಹಿಸಿರುವ ಬಗ್ಗೆಯೂ ಕಿಡಿಕಾರಿತು.

ಹಿಂದೆಯೂ ವೈದ್ಯರ ಪರ ನಿಂತಿದ್ದ ಕೋರ್ಟ್‌
ಸುಪ್ರೀಂ ಕೋರ್ಟ್‌ ಕೊರೊನಾ ಆರಂಭವಾದ ಮೇಲೆ ಹಲವಾರು ಬಾರಿ ವೈದ್ಯರ ಪರವಾಗಿ ನಿಂತಿದೆ. ಜನರಿಗೆ ಅನ್ವಯವಾಗುವಂಥ ಕ್ವಾರಂಟೈನ್‌ ನಿಯಮ ವೈದ್ಯರಿಗೆ ಅನ್ವಯವಾಗುವುದಿಲ್ಲ. ವೈದ್ಯರಿಗೆ ಸರಿಯಾದ ಸಮಯಕ್ಕೆ ವೇತನ ನೀಡಬೇಕು. ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಬೆದರಿಕೆ ಹಾಕಬಾರದು ಎಂಬಿತ್ಯಾದಿ ಮಹತ್ವದ ಆದೇಶಗಳನ್ನು ಅದು ಹೊರಡಿಸಿತ್ತು.

ಚೀಟಿ ಕೊಡಿ, ಜಾಹೀರಾತು ಬೇಡ
ಆಯುರ್ವೇದ ವೈದ್ಯರ ಬಗ್ಗೆಯೂ ಸುಪ್ರೀಂ ಕೋರ್ಟ್‌ ಮಹತ್ವದ ಆದೇಶಹೊರಡಿಸಿದೆ. ಆಯುಷ್‌ ವೈದ್ಯರು ಕೊರೊನಾ ರೋಗಿಗಳಿಗೆ ಸರಕಾರ ಒಪ್ಪಿರುವಂಥ ಟ್ಯಾಬ್ಲೆಟ್‌ಗಳು, ರೋಗನಿರೋಧಕ ಶಕ್ತಿ ಹೆಚ್ಚಿಸುವಂಥ ಮಾತ್ರೆಗಳನ್ನು ನೀಡಬಹುದು ಎಂದು ಹೇಳಿದೆ. ಆದರೆ ಈ ಮಾತ್ರೆಗಳಿಂದಲೇ ಕೊರೊನಾ ಗುಣಮುಖವಾಗುತ್ತದೆ ಎಂಬ ಜಾಹೀರಾತು ನೀಡುವಂತಿಲ್ಲ ಎಂದು ಸೂಚಿಸಿದೆ.
ಕೇರಳ ಹೈಕೋರ್ಟ್‌ ಆ. 21ರಂದು ಆಯುರ್ವೇದ ವೈದ್ಯರು ಕೊರೊನಾಕ್ಕೆ ಔಷಧಿ ಬರೆದುಕೊಡುವಂತಿಲ್ಲ ಎಂಬ ತೀರ್ಪು ನೀಡಿತ್ತು. ಈ ತೀರ್ಪಿನ ಕೆಲವು ಅಂಶ ಸುಪ್ರೀಂ ಕೋರ್ಟ್‌ ಬದಲಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next