Advertisement

Supreme Court ನ. 1ರಂದು ನಡೆಯಬೇಕಿದ್ದ ಗಡಿವಿವಾದ ವಿಚಾರಣೆ ಮುಂದೂಡಿಕೆ

09:05 PM Oct 30, 2023 | Team Udayavani |

ಗದಗ: ಸುಪ್ರೀಂ ಕೋರ್ಟ್ ನಲ್ಲಿ ನ. 1ರಂದು ನಡೆಯಬೇಕಿದ್ದ ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ ಪ್ರಕರಣದ ವಿಚಾರಣೆಯನ್ನು 2024ರ ಜನವರಿ ತಿಂಗಳಿಗೆ ಮುಂದೂಡಲಾಗಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಚ್.ಕೆ. ಪಾಟೀಲ ಹೇಳಿದರು.

Advertisement

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ-ಕರ್ನಾಟಕ ಗಡಿವಿವಾದ ಪ್ರಕರಣದ ವಿಚಾರಣೆಯನ್ನು ಜನವರಿ ತಿಂಗಳಿನಲ್ಲಿ ತೆಗೆದುಕೊಳ್ಳಲು ನ್ಯಾಯಾಧೀಶರು ಸೂಚನೆ ಕೊಟ್ಟಿದ್ದಾರೆ ಎಂದು ವಿವರಿಸಿದರು.

ಗಡಿ ವಿಚಾರವಾಗಿ ಶಿವರಾಜ ಪಾಟೀಲ ಅವರ ನೇತೃತ್ವದ ಸಮಿತಿ ಇದ್ದು, ನಮ್ಮ ನಿಲುವುಗಳನ್ನು ತೆಗೆದುಕೊಳ್ಳಲು, ಸ್ಪಷ್ಟಪಡಿಸಲು ಸಮಯಾವಕಾಶ ದೊರೆತಂತಾಗಿದೆ. ಕನ್ನಡಪರ ಹೋರಾಟಗಾರರು, ವಿಶೇಷ ಆಸಕ್ತಿಯುವಳ್ಳವರು ಹಾಗೂ ಜ್ಞಾನವನ್ನು ಹೊಂದಿರುವವರ ಜೊತೆಗೆ ಸಮಾಲೋಚನೆ ಮಾಡುತ್ತೇವೆ ಎಂದರು.

ಗದಗ ಜಿಲ್ಲೆಯಲ್ಲಿ ಕರ್ನಾಟಕ ಸಂಭ್ರಮ-50ನ್ನು ವಿಶೇಷವಾಗಿ ಆಚರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ನ. 1ರಂದು ಕನ್ನಡ ರಾಜ್ಯೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ನ. 2ರಂದು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನ. 3ರಂದು ಹಂಪಿಯಿAದ ಆಗಮಿಸುವ ಜ್ಯೋತಿಯನ್ನು ಬರಮಾಡಿಕೊಂಡು, ಐತಿಹಾಸಿಕ ವೀರನಾರಾಯಣ ದೇವಸ್ಥಾನದಿಂದ ಪ್ರಮುಖ ವೃತ್ತಗಳ ಮಾರ್ಗವಾಗಿ ದಿ. ಕಾಟನ್ ಸೇಲ್ ಸೊಸೈಟಿಯವರೆಗೆ ಜರುಗುವ ಬೃಹತ್ ಮೆರವಣಿಗೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಅವರು ಚಾಲನೆ ನೀಡಲಿದ್ದಾರೆ ಎಂದರು.

ಕರ್ನಾಟಕ ಸಂಭ್ರಮ-50ರ ಕಾರ್ಯಕ್ರಮವನ್ನು ಭವ್ಯವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಐದು ಗ್ಯಾರಂಟಿ ಜಾರಿಗೊಳಿಸುವ ಮೂಲಕ ಬಡವರ ಆರ್ಥಿಕತೆ ಸುಧಾರಿಸಲು ಶ್ರಮಿಸಿದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಅವರು ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿರುವುದರಿಂದ ಸಾರ್ವಜನಿಕರು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಅವರಿಗೆ ಬಲವನ್ನು ತುಂಬುವುದರ ಜೊತೆಗೆ ಕಾರ್ಯಕ್ರಮವನ್ನು ಐತಿಹಾಸಿಕವನ್ನಾಗಿಸಬೇಕು ಎಂದು ಹೇಳಿದರು.

Advertisement

ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ನಾಮಕರಣ ಮಾಡಬೇಕು ಎಂಬ ದಿಸೆಯಲ್ಲಿ ಗದಗ ಭಾಗದವರು ವಿಶೇಷ ಪ್ರಯತ್ನ ಮಾಡಿದ್ದಾರೆ. ಕುಮಾರವ್ಯಾಸ ಅವರು ತಮ್ಮ ಕಾವ್ಯಕ್ಕೆ ಕರ್ನಾಟ ಭಾರತ ಕಥಾಮಂಜರಿ ಹೆಸರು ನೀಡಿದ್ದರೆ, ದುರ್ಗಸಿಂಹ ಹಾಗೂ ಅಲೂರು ವೆಂಕರಾಯರು ಕರ್ನಾಟಕ ಹೆಸರನ್ನು ಉಲ್ಲೇಖಿಸಿದ್ದಾರೆ. ಜಿಲ್ಲೆಯ ಪ್ರಮುಖರಾದ ಅಂದಾನಪ್ಪ ದೊಡ್ಡಮೇಟಿ, ಕೆ.ಎಚ್. ಪಾಟೀಲ, ಎಂ.ಎಂ. ಕಣವಿ, ಸೇರಿ ಹಲವರು ಕೆಲಸ ಕರ್ನಾಟಕ ಹೆಸರು ನಾಮಕರಣವಾಗಲು ಶ್ರಮಿಸಿದ್ದಾರೆ. ಅಲ್ಲದೇ, ಇಂದಿರಾ ಗಾಂಧಿ, ರಾಜೀವ ಗಾಂಧಿ ಹಾಗೂ ಸಾಯಿ ಬಾಬಾ ಅವರು ಸಾಕ್ಷಿಯಾಗಿರುವಂತಹ ಸತ್ವಯುತ ದಿ. ಕಾಟನ್ ಸೇಲ್ ಸೊಸೈಟಿ ಆವರಣದ ನೆಲದಲ್ಲಿ ಐತಿಹಾಸಿಕ ಕಾರ್ಯಕ್ರಮ ನಡೆಯುತ್ತಿದ್ದು, ಸಾರ್ವಜನಿಕರ ಸಹಭಾಗಿತ್ವ ಪ್ರಾಮುಖ್ಯತೆ ಪಡೆದಿದೆ ಎಂದರು.

ಐತಿಹಾಸಿಕ ಕಾರ್ಯಕ್ರಮ ನಡೆದಾಗ ವಿಶೇಷ ಗುರುತುಗಳನ್ನು ನಿರ್ಮಿಸಬೇಕು. ಸ್ತೂಪ ನಿರ್ಮಾಣ ಮಾಡಬೇಕು ಎನ್ನು ಕಲ್ಪನೆ ಹಿಂದಿನ ಕಾಲದಿಂದ ಇದ್ದರೂ, ಅನಾವರಣಗೊಳಿಸಲು ಸಾರ್ಧಯವಾಗಿರಲಿಲ್ಲ. ಆದ್ದರಿಂದ ಕರ್ನಾಟಕ ಸಂಭ್ರಮ-50ರ ಸಂಭ್ರಮವನ್ನು ಅಚ್ಚಳಿಯದ ಹಾಗೆ ನೆನಪಿನಲ್ಲಿಟ್ಟುಕೊಳ್ಳುವಂತಾಗಲು, ನಗರದಲ್ಲಿ ಜಿಲ್ಲಾಡಳಿತ ಆಸಕ್ತಿ ವಹಿಸಿ 31 ಅಡಿ ಎತ್ತರದ ಸ್ತೂಪ ನಿರ್ಮಿಸಲು ನಿರ್ಣಯ ಕೈಗೊಂಡಿದೆ. ನ. 3ರಂದು ಸಿಎಂ ಸಿದ್ದರಾಮಯ್ಯ ಅವರು ಅನಾವರಣಗೊಳಿಸಲಿದ್ದಾರೆ. ಸ್ತೂಪದಲ್ಲಿ 1973 ಹಾಗೂ 2023ರ ಐತಿಹಾಸಿಕ ಘಟನೆಗಳನ್ನು ಹಾಗೂ ಇತರೆ ಪ್ರಮುಖ ಮಾಹಿತಿಗಳನ್ನು ದಾಖಲಾಗಿರುತ್ತದೆ ಎಂದು ವಿವರಿಸಿದರು.

ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕ ಸಂಭ್ರಮ-50 ಕಾರ್ಯಕ್ರಮದ ನಂತರ 450 ಹಾಸಿಗೆಯುಳ್ಳ ಜಿಮ್ಸ್ ಕಟ್ಟಡ, ಅತ್ಯಾಧುನಿಕ ತಂತ್ರಜ್ಞಾನವುಳ್ಲ ಆಪರೇಷನ್ ಥಿಯೇಟರ್ ಉದ್ಘಾಟನೆ, ಆರ್‌ಡಿಪಿಆರ್ ವಿಶ್ವವಿದ್ಯಾಲಯಕ್ಕೆ ಭೇಟಿ, ನಂತರ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಸಂಜೆ 4ಕ್ಕೆ ನಿರ್ಗಮಿಸವರು ಎಂದು ಹೇಳಿದರು.

ಸ್ಮಾರಕ ದರ್ಶನ ಹಾಗೂ ಸಂರಕ್ಷಣೆ ಪ್ರವಾಸ
ರಾಜ್ಯದಲ್ಲಿ 25 ಸಾವಿರಕ್ಕೂ ಹೆಚ್ಚು ಸ್ಮಾರಕಗಳಿದ್ದು, 500 ಸ್ಮಾರಕ ಸರಕಾರ ಈಗಾಗಲೇ ಪ್ರಕಟಿಸಿದ್ದು, ರಕ್ಷಣೆ ಜೊತೆಗೆ ನಿಗಾ ವಹಿಸಿದೆ. 200ಕ್ಕೂ ಹೆಚ್ಚು ಸ್ಮಾರಕಗಳ ರಕ್ಷಣೆ ಆಗಬೇಕಿದೆ. ಮತ್ತೆ 500 ಸ್ಮಾರಕಗಳ ಘೋಷಣೆ ಬಾಕಿಯಿದ್ದು, ನವೆಂಬರ್ ತಿಂಗಳಲ್ಲಿ 200 ಸ್ಮಾರಕಗಳ ಘೋಷಣೆಯಾಗಲಿದೆ. ತಜ್ಞರು 5000ಕ್ಕೂ ಹೆಚ್ಚು ಸ್ಮಾರಕಗಳು ವಿಶಿಷ್ಠವಾಗಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.

ಸಿಎಂ ಸಿದ್ದರಾಮಯ್ಯ ಅವರು ಕಳೆದ ಕೆಲ ದಿನಗಳ ಹಿಂದೆ ಸ್ಮಾರಕಗಳನ್ನು ದತ್ತು ಪಡೆಯುವ ಕಾರ್ಯಕ್ರಮ ಆರಂಭಿಸುವ ಮೂಲಕ ದತ್ತು ಪಡೆಯುವ ಯೋಜನೆಗೆ ಚಾಲನೆ ನೀಡಿದ್ದಾರೆ. ನ. 6ರಿಂದ ನಮ್ಮ ಸ್ಮಾರಕ ದರ್ಶನ ಹಾಗೂ ಅವುಗಳ ಸಂರಕ್ಷಣೆಗಾಗಿ ಬಸವಕಲ್ಯಾಣದಿಂದ ಪ್ರವಾಸ ಆರಂಭಿಸಲಿದ್ದೇನೆ. ಬಸವಕಲ್ಯಾಣ, ಬಾಲ್ಕಿ, ಬೀದರ, ಕಲಬುರಗಿಯ ನಾಗಾವಿಯಲ್ಲಿ 10ನೇ ಶತಮಾನದ ವಿಶ್ವವಿದ್ಯಾಲಯವಿದ್ದು, ಅಲ್ಲಿನ ಘಟಿಕೋತ್ಸವ ಸಭಾಂಗಣದ ದರ್ಶನ, ಸ್ವಚ್ಚತೆಯ ಜೊತೆಗೆ ದತ್ತು ಪಡೆಯುವ ಯೋಜನೆ ಆರಂಭವಾಗಲಿದೆ.

ಅಲ್ಲಿಂದ ಮಳಖೇಡ, ಸೇಡಂ, ಯಾದಗಿರಿಯ ಸಿರಿವಾಳ ದೇವಾಲಯಗಳ ಸಮುಚ್ಛಾಲಯಕ್ಕೆ ಭೇಟಿ ನೀಡಿ, ಶಹಪೂರ ದ್ವಾರಬಾಗಿಲ ವೀಕ್ಷಣೆ, ಮಲಗಿದ ಬುದ್ದ ವೀಕ್ಷಣೆ, ನಂತರ ಯಾದಗಿರಿಯ ಕೋಟ ವೀಕ್ಷಣೆ ಮಾಡಲಿದ್ದೇನೆ. ಸರಕಾರದ ಜೊತೆಗೆ ಸಾರ್ವಜನಿಕರು ಸ್ವಮಾರಕಗಳ ರಕ್ಷಣೆಗೆ ಕೈಜೋಡಿಸಬೇಕಿದೆ. ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸಬೇಕಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಜಿ.ಎಸ್. ಪಾಟೀಲ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಮಾಜಿ ಸಂಸದ ಐ.ಜಿ. ಸನದಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ ಮಂದಾಲಿ ಸೇರಿ ಅನೇಕರು ಇದ್ದರು.

ಕರ್ನಾಟಕ ಸಂಭ್ರಮ-50ರ ವಿಶೇಷ ಸಂದರ್ಭದಲ್ಲಿ ಜಿಲ್ಲೆಯ ನೀರಾವರಿ ಯೋಜನೆ ಪೂರ್ಣಗೊಳಿಸುವುದು, ಗಜೇಂದ್ರಗಡ ಭಾಗದಲ್ಲಿ ಸರಕಾರಿ ಇಂಜಿನಿಯರಿಂಗ್ ಕಾಲೇಜ್ ಆರಂಭಿಸುವುದು, ನರಗುಂದ ಭಾಗದಲ್ಲಿರುವ ಇಂಜಿನಿಯರಿಂಗ್ ಕಾಲೇಜನ್ನು ಮತ್ತಷ್ಟು ಉನ್ನತೀಕರಣಗೊಳಿಸುವುದು ಸೇರಿ ಹಲವಾರು ಅಭಿವೃದ್ಧಿಗಳನ್ನು ಕೈಗೊಳ್ಳುವ ಕುರಿತು ಯೋಚಿಸಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next