ನವದೆಹಲಿ: ಅಕ್ರಮ ಹಣಕಾಸು ವರ್ಗಾವಣೆ ಕಾಯ್ದೆ ಅಡಿ ಜಾರಿ ನಿರ್ದೇಶಾನಲಯ (ಇ.ಡಿ)ಕ್ಕೆ ತನಿಖೆ ನಡೆಸುವ, ಆಸ್ತಿ ಮುಟ್ಟುಗೋಲು, ಬಂಧನ, ಶೋಧ ಕಾರ್ಯಾಚರಣೆ ನಡೆಸಲು ಅಧಿಕಾರ ಇದೆ.
ಹೀಗೆಂದು ಸುಪ್ರೀಂಕೋರ್ಟ್‌ನ ನ್ಯಾ.ಎ.ಎಂ.ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠ ಬುಧವಾರ ಅಭಿಪ್ರಾಯಪಟ್ಟಿದೆ.
ಈ ಮೂಲಕ ಇ.ಡಿ. ನಡೆಸುವ ದಾಳಿ, ಬಂಧನ ಕ್ರಮ ಪ್ರಶ್ನಿಸಿದ್ದ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ, ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ, ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶ್‌ಮುಖ್ ಸೇರಿದಂತೆ 240ಕ್ಕೂ ಹೆಚ್ಚು ಮಂದಿಯ ಅರ್ಜಿಯನ್ನು ನ್ಯಾಯಪೀಠ ತಿರಸ್ಕರಿಸಿದೆ. ಇದರಿಂದಾಗಿ ಕೇಂದ್ರ ಸರ್ಕಾರಕ್ಕೂ ನಿರಾಳವಾಗಿದೆ.
ಕಾಂಗ್ರೆಸ್ ಮುಖಂಡರಾಗಿರುವ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವಿಚಾರಣೆ ನಡೆಸಿರುವಂತೆಯೇ ಸುಪ್ರೀಂಕೋರ್ಟ್‌ನ ಈ ಆದೇಶ ಪ್ರಕಟವಾಗಿದೆ.
ಜಗತ್ತಿನಾದ್ಯಂತ ಅಕ್ರಮ ಹಣ ವರ್ಗಾವಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬರುವ ಪ್ರಕರಣಗಳು ವಿತ್ತೀಯ ವ್ಯವಸ್ಥೆಗೆ ಬೆದರಿಕೆಯೇ ಆಗಿದೆ ಎಂದು ನ್ಯಾಯಪೀಠ ಆತಂಕ ವ್ಯಕ್ತಪಡಿಸಿದೆ. ಜಾರಿ ನಿರ್ದೇಶನಾಲಯದ ಪ್ರಕರಣ ಮಾಹಿತಿ ವರದಿ (ಇಸಿಐಆರ್)ಯನ್ನು ಪೊಲೀಸರು ದಾಖಲಿಸುವ ಎಫ್ಐಆರ್‌ಗೆ ಹೋಲಿಕೆ ಮಾಡಲಾಗದು. ಅದನ್ನು ಪ್ರತಿ ಪ್ರಕರಣದಲ್ಲಿಯೂ ಆರೋಪಕ್ಕೆ ಗುರಿಯಾಗಿರುವ ವ್ಯಕ್ತಿಗಳ ಜತೆಗೆ ಹಂಚಿಕೊಳ್ಳಬೇಕು ಎಂಬ ಕಡ್ಡಾಯ ನಿಯಮ ಇಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ತನಿಖಾ ಸಂಸ್ಥೆಗೆ ಇರುವ ಅಧಿಕಾರಗಳೆಲ್ಲವೂ ಸಂವಿಧಾನಬದ್ಧವಾಗಿಯೇ ಇದೆಯೇ ಹೊರತು ನಿರಂಕುಶ ವ್ಯವಸ್ಥೆಯದ್ದಲ್ಲ ಎಂದಿದೆ.
ಏಕಪಕ್ಷೀಯ ಅಲ್ಲ:
2002ರಲ್ಲಿ ಜಾರಿಯಾಗಿರುವ ಅಕ್ರಮ ಹಣ ವರ್ಗಾವಣೆ ಕಾಯ್ದೆ (ಪಿಎಂಎಲ್‌ಎ)ಯ ಅನ್ವಯ ಬಂಧಿತ ವ್ಯಕ್ತಿಗೆ ಜಾಮೀನು ನೀಡಲು ಕಠಿಣ ಷರತ್ತುಗಳನ್ನು ವಿಧಿಸಲು ಅವಕಾಶ ಇದೆ. ಇಂಥ ಕ್ರಮ ಏಕಪಕ್ಷೀಯವಾದದ್ದು ಮತ್ತು ಕಾನೂನಿಗೆ ವಿರೋಧವಾಗಿರುವ ಅಂಶ ಅಲ್ಲ ಎಂದಿತು. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಯಾವ ಕಾರಣಕ್ಕಾಗಿ ನಿಗದಿತ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂಬ ಬಗ್ಗೆ ತಿಳಿಸಬೇಕಾಗಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಅಧಿಕಾರ ಇದೆ:
ಪಿಎಂಎಲ್‌ಎ ಕಾಯ್ದೆಯ ಅನ್ವಯ ಜಾರಿ ನಿರ್ದೇಶನಾಲಯಕ್ಕೆ ವ್ಯಕ್ತಿಗಳನ್ನು ಬಂಧಿಸಲು, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು, ನಿಗದಿತ ಸ್ಥಳದಲ್ಲಿ ಶೋಧ ಕಾರ್ಯ ನಡೆಸಲು ಅಧಿಕಾರ ಇದೆ ಎಂದೂ ನ್ಯಾಯಪೀಠ ಹೇಳಿದೆ.