ಧಾರವಾಡ: ಪ್ರತಿ ವರ್ಷ ಹೆಸರು ಬೆಳೆಗೆ ಬೆಂಬಲ ಬೆಲೆ ಕೊಡಿ ಎಂದು ದುಂಬಾಲು ಬಿದ್ದರೂ ರೈತರಿಗೆ ಸರ್ಕಾರದಿಂದ ಸಕಾಲಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿರಲಿಲ್ಲ. ಆದರೆ ಈ ವರ್ಷ ಬೆಂಬಲ ಬೆಲೆಯಡಿ ಹೆಸರು ಕಾಳು ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಣಿ ಪ್ರಕ್ರಿಯೆ ಮುಕ್ತಾಯಗೊಂಡು ಖರೀದಿ ಪ್ರಕ್ರಿಯೆಗೆ ಚಾಲನೆ ದೊರೆತಿದ್ದರೂ, ಹೆಸರು ಬೆಳೆ ಇಲ್ಲದೇ ಇರುವುದರಿಂದ ರೈತರಿಂದ ಉತ್ತಮ ಸ್ಪಂದನೆ ದೊರೆಯದಂತಾಗಿದೆ.
ಕಳೆದ ಬಾರಿ 1.35 ಲಕ್ಷ ರೈತರು ಹೆಸರು ಬೆಳೆ ಮಾರಾಟಕ್ಕಾಗಿ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿದ್ದರು. ಆದರೆ ಈ ಸಲ ಇಡೀ ರಾಜ್ಯದಲ್ಲಿ ನೋಂದಣಿ ಮಾಡಿದ ರೈತರ ಸಂಖ್ಯೆ ಕೇವಲ 29,311. ನೆರೆ ಹೊಡೆತಕ್ಕೆ ಹೆಸರು ಕೈಗೆ ಬಾರದೇ ಹಾಳಾಗಿದ್ದು, ಅಳಿದುಳಿದ ಬೆಳೆಗೆ ಗುಣಮಟ್ಟದ ನಿಯಮಗಳ ಸಹವಾಸ ಬೇಡವೇ ಬೇಡ ಎನ್ನುತಿದ್ದಾರೆ.
ಈಗ ಹೆಸರು ಬೆಳೆ ಮಾರಾಟ ಮಾಡಿದರೆ ಬೆಳೆ ವಿಮೆ ಸಿಗದು ಎಂಬ ಲೆಕ್ಕಾಚಾರದಿಂದಲೂ ಹೆಸರು ಮಾರಾಟಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಕಳೆದ ಬಾರಿ ರಾಜ್ಯದಲ್ಲಿ 23 ಸಾವಿರ ಮೆಟ್ರಿಕ್ ಟನ್ ಹೆಸರು ಖರೀದಿಗೆ ಚಾಲನೆ ನೀಡಿ, ಜಿಲ್ಲೆಗಳ ಆಯಾ ಕೇಂದ್ರಗಳಿಗೆ ಇಂತಿಷ್ಟು ಪ್ರಮಾಣ ನಿಗದಿ ಮಾಡಿ ಅಷ್ಟೇ ಖರೀದಿ ಮಾಡುವಂತೆ ಸೂಚಿಸಲಾಗಿತ್ತು. ಆದರೆ ರೈತರಿಂದ ಖರೀದಿ ಪ್ರಮಾಣ ಹೆಚ್ಚಿಸುವಂತೆ ಒತ್ತಡ ಹೆಚ್ಚಾಗಿದ್ದರಿಂದ ರಾಜ್ಯ ಸರ್ಕಾರ ಒಟ್ಟು 27,500 ಮೆಟ್ರಿಕ್ ಟನ್ ಹೆಸರು ಖರೀದಿ ಮಾಡಿತ್ತು. ಈ ಸಲ ನೆರೆ ಹೊಡೆತಕ್ಕೆ ಹೆಸರು ಬೆಳೆ ಕೈ ಕೊಟ್ಟಿರುವುದನ್ನು ಅರಿತಿರುವ ಕೇಂದ್ರ ಸರ್ಕಾರವು ರಾಜ್ಯದಿಂದ 12 ಸಾವಿರ ಮೆಟ್ರಿಕ್ ಟನ್ ಖರೀದಿಗೆ ಅಷ್ಟೇ ಅವಕಾಶ ಮಾಡಿ ಕೊಟ್ಟಿದೆ. ಇದಲ್ಲದೇ ರಾಜ್ಯದ ಯಾವ ಖರೀದಿ ಕೇಂದ್ರಗಳಿಗೂ ಇಂತಿಷ್ಟೇ ಪ್ರಮಾಣದಲ್ಲಿ ಖರೀದಿಸುವಂತೆ ನಿಗದಿಯನ್ನೂ ಮಾಡಿಲ್ಲ.
ಆರಂಭಗೊಳ್ಳದ ಖರೀದಿ: ಅ.2ರಿಂದ ಹೆಸರು ನೋಂದಣಿ ಆರಂಭಗೊಂಡು 9ರೊಳಗೆ ಮುಕ್ತಾಯಗೊಳ್ಳಬೇಕಿತ್ತು. ಆದರೆ ಹೆಸರು ನೋಂದಣಿ ಮಾಡಬೇಕಾದ ಸಾಫ್ಟ್‌ವೇರ್ ತಡವಾಗಿ ಬಂದಿದ್ದರಿಂದ ಅ.8ರಿಂದ ನೋಂದಣಿ ಪ್ರಕ್ರಿಯೆ ಆರಂಭಗೊಂಡಿತ್ತು. ಹೀಗಾಗಿ ಅ.19ರವರೆಗೆ ನೋಂದಣಿಗೆ ಅವಕಾಶ ಮಾಡಿಕೊಡಲಾಗಿತ್ತು. ಅದರಂತೆ ಈಗ ನೋಂದಣಿ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಅ.20ರಿಂದಲೇ ಖರೀದಿ ಆರಂಭ ಮಾಡುವಂತೆ ಎಲ್ಲ ಕೇಂದ್ರಗಳಿಗೆ ಸೂಚನೆ ನೀಡಲಾಗಿದೆ. ಅ.20 ರವಿವಾರ ರಜೆ ಹಿನ್ನೆಲೆಯಲ್ಲಿ ಸೋಮವಾರದಿಂದ ಖರೀದಿ ಪ್ರಕ್ರಿಯೆ ಆರಂಭಗೊಂಡಿದ್ದರೂ ರೈತರಿಂದ ಸ್ಪಂದನೆ ಲಭಿಸಿದಂತಾಗಿದೆ.
ರೈತರು ಮಾರಾಟ ಮಾಡಿದ ಹೆಸರನ್ನು ತುಂಬಿ ಇಡಲು ಖಾಲಿ ಚೀಲಗಳು ಕೇಂದ್ರಗಳಿಗೆ ಬಂದಿದ್ದು, ಆದರೆ ಹೆಸರು ಮಾರಾಟಕ್ಕೆ ಕೇಂದ್ರಗಳತ್ತ ಹೆಜ್ಜೆ ಹಾಕಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಇದಲ್ಲದೇ ಖರೀದಿ ಕೇಂದ್ರಗಳಲ್ಲಿ ಗ್ರೇಡಿಂಗ್ ಕಾರ್ಯ ಮಾಡಲು ನೇಮಕಗೊಂಡ ಕೃಷಿ ಇಲಾಖೆ ಸಿಬ್ಬಂದಿಯೂ ಕೇಂದ್ರಗಳತ್ತ ಮುಖ ಮಾಡಿಲ್ಲ. ಹೀಗಾಗಿ ಖರೀದಿ ಕೇಂದ್ರಗಳಿಗೆ ಬರುವ ರೈತರಿಂದ ಮಾದರಿ ಕಾಳನ್ನು ತೆಗೆದುಕೊಂಡು, ಅವರ ಮಾಹಿತಿ ಪಡೆದು ಸಂಗ್ರಹಿಸಿ ಇಟ್ಟಿಕೊಳ್ಳುವ ಕೆಲಸವಷ್ಟೇ ಕೇಂದ್ರದ ಸಿಬ್ಬಂದಿ ಮಾಡುತ್ತಿದ್ದಾರೆ. ಗ್ರೇಡಿಂಗ್ ಕಾರ್ಯ ಮುಗಿದ ಬಳಿಕವೇ ಗುಣಮಟ್ಟದ ಹೆಸರು ಕಾಳಿನ ಖರೀದಿ ಆರಂಭಗೊಳ್ಳಲಿದ್ದು, ಸಂಬಂಧಪಟ್ಟವರು ಇತ್ತ ಲಕ್ಷ್ಯ ವಹಿಸಬೇಕಿದೆ.
ಗುಣಮಟ್ಟದ ಕೊರತೆ : ಎಫ್‌ಎಕ್ಯೂ ಗುಣಮಟ್ಟದ ಕಾಳು ಖರೀದಿಸುವ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿದ ರೈತರು ತಂದ ಕಾಳಿನಲ್ಲಿ ಅತಿಯಾದ ಮಳೆ ಹಿನ್ನೆಲೆಯಲ್ಲಿ ತೇವಾಂಶ ಹೆಚ್ಚಾಗಿದೆ. ಇದೇ ಕಾರಣವೊಡ್ಡಿ ಕಾಳು ತಿರಸ್ಕರಿಸುತ್ತಿರುವುದು ರೈತರ ಕೆಂಗಣ್ಣಿಗೆ ಗುರಿ ಆಗಿದೆ. ಹುಬ್ಬಳ್ಳಿಯ ಅಮರಗೋಳದ ಖರೀದಿ ಕೇಂದ್ರದಲ್ಲಿ ಮಂಗಳವಾರ ಈ ಕಾರಣದಿಂದಲೇ ರೈತರು ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ. ಈ ರೀತಿಯ ಗಲಾಟೆಗಳು ಬಹುತೇಕ ಎಲ್ಲ ಕೇಂದ್ರಗಳಲ್ಲಿ ನಡೆಯುತ್ತಿವೆ