ಬೆಂಗಳೂರು: ಚುನಾವಣೆ ಎಂದರೆ ಪ್ರಜಾತಂತ್ರದ ಹಬ್ಬ, ಗೆದ್ದ ಅಭ್ಯರ್ಥಿಗಳಿಗಿಂತ ಅವರ ಬೆಂಬಲಿಗರೇ ಹೆಚ್ಚು ಸಂಭ್ರಮಿಸುತ್ತಾರೆ. ಮಂಗಳವಾರ ಮತ ಎಣೆಕೆ ಕೇಂದ್ರಗಳ ಹೊರಭಾಗದಲ್ಲೂ ಇದೇ ವಾತಾವರಣ ಇತ್ತು. ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜಿನ ಮತ ಎಣೆಕೆ ಕೇಂದ್ರ ಹೊರ ಭಾಗದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಗೆದ್ದ ಅಭ್ಯರ್ಥಿಗಳ ಬೆಂಬಲಿಗರು ಪಕ್ಷ ಹಾಗೂ ಅಭ್ಯರ್ಥಿಗಳ ಪರ ಘೋಷಣೆ ಕೂಗಿ ಸಂಭ್ರಮಿಸಿದರು.
ಕಾಲೇಜಿನಿಂದ ಸುಮಾರು 50 ಮೀಟರ್ ಒಳಗೆ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಹೀಗಾಗಿ ಮೂರು ಪಕ್ಷದ ಅಭ್ಯರ್ಥಿಗಳ ಬೆಂಬಲಿಗರು ರಸ್ತೆಯ ಬದಿಯಲ್ಲೇ ಘೋಷಣೆ ಕೂಗಿ, ಪಕ್ಷದ ಧ್ವಜ ಹಾರಿಸಿ, ಖುಷಿಪಟ್ಟರು. ಮತ ಎಣಿಕೆ ಆರಂಭಕ್ಕೂ ಮೊದಲೇ ಮೂರೂ ಪಕ್ಷಗಳ ಅಭ್ಯರ್ಥಿಗಳ ಬೆಂಬಲಿಗರು ಅಪಾರ ಸಂಖ್ಯೆಯಲ್ಲಿ ಕೇಂದ್ರ ಹೊರ ಭಾಗದಲ್ಲಿ ಸೇರಿದ್ದರು.
ತಮ್ಮ ಪಕ್ಷದ ಭಾವುಟಗಳನ್ನು ಕೈಯಲ್ಲಿ ಹಿಡಿದು ಅಭ್ಯರ್ಥಿಯ ಗೆಲುವಿಗಾಗಿ ಕಾತರಿಸುತ್ತಿದ್ದರು. ಮಹಾಲಕ್ಷ್ಮೀ ಲೇಔಟ್, ಸರ್ವಜ್ಞನಗರ, ಹೆಬ್ಟಾಳ, ಕೆ.ಆರ್.ಪುರ, ಸಿ.ವಿ.ರಾಮನ್, ಪುಲಿಕೇಶಿನಗರ, ಶಿವಾಜಿನಗರ ಮೊದಲಾದ ಕ್ಷೇತ್ರಗಳ ಮತ ಎಣಿಕೆ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಇದ್ದವು.
ಅಭ್ಯರ್ಥಿ ಮುನ್ನಡೆ ಹಾಗೂ ಹಿನ್ನಡೆ ಕುರಿತಂತೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ಹೆಚ್ಚು ಮತ ಗಳಿಸಿರುವ ಪಕ್ಷದ ಅಭ್ಯರ್ಥಿಗಳ ಪರ ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದರು. ಹಿನ್ನಡೆಯಾದ ಪಕ್ಷದ ಕಾರ್ಯಕರ್ತರು ಮೌನಕ್ಕೆ ಶರಣಾಗುತ್ತಿದ್ದರು. ಕಾಲೇಜಿನ ಮುಂಭಾಗದ ವಸಂತ ನಗರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಸಾವಿರಾರು ಕಾರ್ಯಕರ್ತರು ನೆರೆದಿದ್ದರು.
ಅಲ್ಲದೆ, ರಸ್ತೆಯ ಎರಡೂ ಬದಿ ವಾಹನಗಳನ್ನು ನಿಲ್ಲಿಸಿಕೊಂಡು ಬೃಹತ್ ಸಂಖ್ಯೆಯಲ್ಲಿ ಸೇರಿದ್ದರು. ಮೂರೂ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಬಾರದು, ಯಾವುದೇ ಗೊಂದಲ ಸೃಷ್ಟಿಯಾಗಬಾರದು ಎಂಬ ಉದ್ದೇಶದಿಂದ ಕೇಂದ್ರೀಯ ಮೀಸಲು ಪಡೆಯ ಭದ್ರತಾ ಸಿಬ್ಬಂದಿ, ಕಾರ್ಯಕರ್ತರನ್ನು ರಸ್ತೆ ಬದಿಯಲ್ಲೇ ತಡೆದು ನಿಲ್ಲಿಸಿದರು.
ಕೇಂದ್ರದ ಸುತ್ತ ಪೊಲೀಸರ ಬಿಗಿ ಭದ್ರತೆ ಅವಳಡಿಸಲಾಗಿತ್ತು. ಗೇಟ್‌ನ ಮುಂಭಾಗದಲ್ಲಿ ಬ್ಯಾರಿಕೇಟ್ ನಿರ್ಮಿಸಿದ್ದು, ಚುನಾವಣಾ ಆಯೋಗದಿಂದ ಪಾಸ್ ಹೊಂದಿದವರನ್ನು ಮಾತ್ರ ಒಳಗೆ ಬಿಡುತ್ತಿದ್ದರು. ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿತ್ತು.