ಬೆಂಗಳೂರು: ಹೊಸ ಶಾಸಕರ ಬೆಂಬಲಿ ಗರಿಗೆ ಕ್ಷೇತ್ರವ್ಯಾಪ್ತಿಯಲ್ಲಿ ಪಕ್ಷದ ಪ್ರಮುಖ ಜವಾಬ್ದಾರಿ ವಹಿಸಲು ಬಿಜೆಪಿ ಗಂಭೀರ ಚಿಂತನೆ ನಡೆಸಿದೆ. ಉಪಚುನಾವಣೆ ಕಾರ್ಯ ಪೂರ್ಣಗೊಂಡಿದ್ದು, ಸರ್ಕಾರ ಸುಭದ್ರವಾಗಿದೆ. ಈಗ ಪಕ್ಷ ಸಂಘಟನೆಗೆ ಇನ್ನಷ್ಟು ಒತ್ತು ನೀಡಲು ಬಿಜೆಪಿ ನಿರ್ಧರಿಸಿದೆ. ಜಿಲ್ಲಾಮಟ್ಟದಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗಳು ನಡೆಯುತ್ತಿವೆ. ತಾಲೂಕು ಹಾಗೂ ಮಂಡಲ ಅಧ್ಯಕ್ಷರ ಆಯ್ಕೆಗೂ ಸಿದ್ಧತೆ ಆರಂಭವಾಗಿದೆ.
ಕೆಲವೊಂದು ಕ್ಷೇತ್ರದಲ್ಲಿ ಮಂಡಳ ಹಾಗೂ ತಾಲೂಕು ಮಟ್ಟದ ಆಯ್ಕೆ ಪ್ರಕ್ರಿಯೆ ಪೂರ್ಣ ಗೊಂಡಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ 17 ಶಾಸಕರಲ್ಲಿ 16 ಮಂದಿ ಬಿಜೆಪಿಗೆ ಸೇರಿದ್ದಾರೆ (ರೋಷನ್‌ಬೇಗ್ ಹೊರತುಪಡಿಸಿ). 15 ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಶಿವಾಜಿನಗರ ಹಾಗೂ ರಾಣಿಬೆನ್ನೂರು ಕ್ಷೇತ್ರವನ್ನು ಹೊರತುಪಡಿಸಿ ಉಳಿದ 13 ಕ್ಷೇತ್ರ ದಲ್ಲೂ ಪಕ್ಷಕ್ಕೆ ಹೊಸದಾಗಿ ಸೇರ್ಪ ಡೆಯಾದ ಮಾಜಿ ಶಾಸಕರಿಗೆ ಟಿಕೆಟ್ ನೀಡಲಾಗಿತ್ತು. ಈ ಹದಿಮೂರು ಅಭ್ಯರ್ಥಿಗಳಲ್ಲಿ 11 ಅಭ್ಯರ್ಥಿ ಗಳು ಗೆದ್ದು ವಿಧಾನಸಭೆ ಪ್ರವೇಶ ಮಾಡಿದ್ದಾರೆ. ಹುಣಸೂರು ಕ್ಷೇತ್ರದಲ್ಲಿ ಎಚ್.ವಿಶ್ವನಾಥ್ ಹಾಗೂ ಹೊಸಕೋಟೆ ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್ ಪರಾಭವ ಗೊಂಡಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ 16 ಮಂದಿ ತಮ್ಮ ಅಪಾರ ಬೆಂಬಲಿಗ ರೊಂದಿಗೆ ಬಿಜೆಪಿಗೆ ಸೇರಿದ್ದರು. ಚುನಾ ವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳ ಬೆಂಬಲಿಗರು ಒಟ್ಟಾಗಿ ಕೆಲಸ ಮಾಡಿದ್ದಾರೆ. ಶಾಸಕರ ಬೆಂ ಬಲಿಗರನ್ನು ಪಕ್ಷದಲ್ಲಿ ಗಟ್ಟಿಯಾಗಿ ಉಳಿಸಿ ಕೊಳ್ಳುವ ಹಿನ್ನೆಲೆಯಲ್ಲಿ ತಾಲೂಕು ಹಾಗೂ ಮಂಡಳ ದಲ್ಲಿ ಪದಾಧಿಕಾರಿ ಆಯ್ಕೆ ಸಂದರ್ಭದಲ್ಲಿ ಇವರಲ್ಲಿ ಅನೇಕರಿಗೆ ಪಕ್ಷದ ಪ್ರಮುಖ ಹುದ್ದೆ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಮೂಲ ಬಿಜೆಪಿಗರಲ್ಲಿ ಒಬ್ಬರನ್ನು ಅಧ್ಯಕ್ಷ ರನ್ನಾಗಿ ನೇಮಿಸಿದರೆ, ಶಾಸಕರ ಬೆಂಬಲಿಗರಲ್ಲಿ ಒಬ್ಬರಿಗೆ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷ ಅಥವಾ ಇನ್ನಾವುದಾದರೂ ಪ್ರಮುಖ ಹುದ್ದೆ ನೀಡಲಿದ್ದೇವೆ ಎಂದು ಪಕ್ಷದ ಹಿರಿಯರೊಬ್ಬರು ತಿಳಿಸಿದರು. ಶಾಸಕರ ಬೆಂಬಲಿಗರಿಗೆ ಪಕ್ಷದಲ್ಲಿ ಜವಾಬ್ದಾರಿ ನೀಡುವ ಮೂಲಕ ಪಕ್ಷವನ್ನು ಹಳೇ ಮೈಸೂರು ಭಾಗದಲ್ಲಿ ಇನ್ನಷ್ಟು ಗಟ್ಟಿ ಮಾಡಿಕೊಳ್ಳಲು ಸಾಧ್ಯವಿದೆ. ಮಂಡ್ಯ, ಕೋಲಾರ, ಬೆಂಗಳೂರು ನಗರದ ಕೆಲ ವೊಂದು ಕ್ಷೇತ್ರ ಹಾಗೂ ಉತ್ತರ ಕರ್ನಾಟಕ ಭಾಗದ ಕೆಲವು ಕ್ಷೇತ್ರದಲ್ಲಿ ಬಿಜೆಪಿ ಮತ ಬ್ಯಾಂಕ್ ಇನ್ನಷ್ಟು ಪ್ರಬಲವಾಗಲಿದೆ. ಹೀಗಾಗಿ, ಶಾಸಕರ ಬೆಂಬಲಿಗರಿಗೆ ಪಕ್ಷದಲ್ಲಿ ಉನ್ನತ ಹುದ್ದೆ ನೀಡುವ ಬಗ್ಗೆ ಎಲ್ಲ ರೀತಿಯ ಸಿದ್ಧತೆ ಹಾಗೂ ಚಿಂತನೆ ನಡೆದಿದೆ.
ಹೊಸ ಶಾಸಕರಿಗೆ ಅದ್ಧೂರಿ ಅಭಿನಂದನೆಗೆ ಸಿದ್ಧತೆ: ಉಪಚುನಾವಣೆಯಲ್ಲಿ ಜಯ ಸಾಧಿಸಿರುವ 12 ಶಾಸಕರಿಗೆ ಬಿಜೆಪಿಯಿಂದ ಅದ್ದೂರಿ ಅಭಿನಂದನೆ ನೀಡಲು ಬೃಹತ್ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ ಆರಂಭವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಎರಡೂ¾ರು ದಿನದಲ್ಲಿ ಬೆಂಗಳೂರಿಗೆ ಬರಲಿದ್ದಾರೆ. ಈ ವೇಳೆ, ಅಭಿನಂದನಾ ಕಾರ್ಯಕ್ರಮದ ದಿನಾಂಕ ನಿಗದಿಯಾಗಲಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಕೇಂದ್ರದ ಪ್ರಮುಖ ನಾಯಕರು ಬರುವ ಸಾಧ್ಯತೆ ಇದೆ ಎಂದು ಬಿಜೆಪಿಯ ಮೂಲಗಳು ಖಚಿತಪಡಿಸಿವೆ.
ಬಿಜೆಪಿಗೆ ಅಪಾರ ಬೆಂಬಲಿಗರೊಂದಿಗೆ ಸೇರಿದ ಎಲ್ಲರೂ ಬಿಜೆಪಿಗರೇ ಆಗಿದ್ದಾರೆ. ಹೀಗಾಗಿ, ಪಕ್ಷ ಸಂಘಟನೆಯ ದೃಷ್ಟಿಯಿಂದ ಹೊಸದಾಗಿ ಬಿಜೆಪಿಗೆ ಸೇರ್ಪಡೆಗೊಂಡಿರುವವರಲ್ಲಿ ಕೆಲವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಿದ್ದೇವೆ. ತಾಲೂಕು, ಮಂಡಳಗಳಲ್ಲಿ ಹಾಗೂ ವಿವಿಧ ಮೋರ್ಚಾದಲ್ಲಿ ಪದಾಧಿಕಾರಿ ನೇಮಕ ಸಂದರ್ಭದಲ್ಲಿ ಶಾಸಕರ ಬೆಂಬಲಿಗರಿಗೆ ಅವಕಾಶ ನೀಡುತ್ತೇವೆ.
-ಎನ್.ರವಿಕುಮಾರ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ
ಹೊಸದಾಗಿ ಪಕ್ಷಕ್ಕೆ ಸೇರಿದವರಲ್ಲಿ ಕೆಲವರಿಗಾದರೂ ಜವಾಬ್ದಾರಿ ನೀಡಬೇಕಾಗುತ್ತದೆ. ಪಕ್ಷ ಸಂಘಟನೆಯಲ್ಲಿ ಇದು ಮುಖ್ಯವಾಗುತ್ತದೆ. ದೇಶದೆಲ್ಲೆಡೆ ಬಿಜೆಪಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗೆಯೇ ಕರ್ನಾಟಕದಲ್ಲೂ ಆಗುತ್ತಿದೆ. ಬಂದವರಿಗೆ ಪಕ್ಷದಲ್ಲಿ ಜವಾಬ್ದಾರಿ ನೀಡಲಾಗುತ್ತದೆ.
-ಸಿ.ಟಿ.ರವಿ, ಪ್ರವಾಸೋದ್ಯಮ ಸಚಿವ
* ರಾಜು ಖಾರ್ವಿ ಕೊಡೇರಿ