Advertisement

ಮುಷ್ಕರಕ್ಕೆ ಬೆಂಬಲಿಸಿದ ಬ್ಯಾಂಕ್‌ಗಳು ಬಂದ್‌

12:28 PM Mar 01, 2017 | Team Udayavani |

ಬೆಂಗಳೂರು: ಎಸ್‌ಬಿಐ ಜತೆಗೆ ಸಹವರ್ತಿ ಬ್ಯಾಂಕ್‌ಗಳ ವಿಲೀನ ವಿರೋಧಿಸಿ ಹಾಗೂ ವಿವಿಧ 30 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖೀಲ ಭಾರತ ಬ್ಯಾಂಕ್‌ ನೌಕರರು ಮಂಗಳವಾರ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ಬ್ಯಾಂಕ್‌ ಸಂಘಟನೆಗಳ ಸಂಯುಕ್ತ ವೇದಿಕೆ (ಯುಎಫ್ಬಿಯು) ದೇಶಾದ್ಯಂತ ಕರೆ ನೀಡಿದ್ದ ಒಂದು ದಿನದ ಮುಷ್ಕರಕ್ಕೆ ರಾಜ್ಯದಲ್ಲೂ ಬೆಂಬಲ ವ್ಯಕ್ತವಾಗಿ ಬಹುತೇಕ ಬ್ಯಾಂಕುಗಳು ಕಾರ್ಯನಿರ್ವಹಿಸಲಿಲ್ಲ. ಆದರೆ, ಸಾರ್ವಜನಿಕರ ಹಿತಕ್ಕಾಗಿ ಎಟಿಎಂ ಮತ್ತು ಆನ್‌ಲೈನ್‌ ಬ್ಯಾಂಕಿಂಗ್‌ ಸೇವೆ ಎಂದಿನಂತೆ ಕಾರ್ಯನಿರ್ವಹಿಸಿತು. 

ಮುಷ್ಕರದ ಅಂಗವಾಗಿ ಬ್ಯಾಂಕ್‌ ನೌಕರರರು ಸಾಂಕೇತಿಕ ಮೆರವಣಿಗೆ ಮತ್ತು ಪುರಭವನ ಸಮೀಪದ ಕೆನರಾ ಬ್ಯಾಂಕ್‌ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ವಸೂಲಾಗದ ಸಾಲ (ಎನ್‌ಪಿಎ) ಹೆಚ್ಚಳಕ್ಕೆ ಬ್ಯಾಂಕ್‌ ಅಧಿಕಾರಿಗಳನ್ನು ಹೊಣೆ ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರಿ ನೌಕರರಿಗೆ ಗ್ರಾಚ್ಯುಟಿ ನೀಡಿರುವಂತೆ ಬ್ಯಾಂಕ್‌ ನೌಕರರಿಗೂ 2016ರ ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಗ್ರಾಚ್ಯುಟಿ ಜಾರಿ ಮಾಡಬೇಕು.

ಬ್ಯಾಂಕ್‌ ನೌಕರರ ಪಿಂಚಣಿ ಸೌಲಭ್ಯದ ಮರುಪರಿಶೀಲನೆ ಆಗಬೇಕು ಎಂದು ಒತ್ತಾಯಿಸಿದರು. ಒಕ್ಕೂಟದ ಮುಖಂಡ ಎಂ.ಕೆ.ನರಸಿಂಹ ಮೂರ್ತಿ ಮಾತನಾಡಿ, ವಸೂಲಾಗದ ಸಾಲ ಶೇ.9ರಿಂದ 10ಕ್ಕೆ ಏರಿಕೆಯಾಗಿದೆ. ಎನ್‌ಪಿಎ ಹೆಚ್ಚಾದಂತೆ ಬ್ಯಾಂಕ್‌ ಠೇವಣಿ ಪ್ರಮಾಣ ಕಡಿಮೆಯಾಗುತ್ತದೆ. ಇದು ಬ್ಯಾಂಕಿಂಗ್‌ ವ್ಯವ ಸ್ಥೆಗೆ ಮಾರಕವಾಗಲಿದೆ. ಸಾಲ ವಸೂಲಾತಿಗೆ ಸರ್ಕಾರ ಕಠಿಣ ಕ್ರಮಕೈಗೊಳ್ಳದೆ ಇರುವುದು ಎನ್‌ಪಿಎ ಹೆಚ್ಚಳಕ್ಕೆ ಕಾರಣ ಎಂದು ದೂರಿದರು.

ಸರ್ಕಾರ ಸಾಲ ವಸೂಲಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. ಬ್ಯಾಂಕ್‌ ಆಡಳಿತ ಮಂಡಳಿಯಲ್ಲಿ ಕಾರ್ಮಿಕ ವರ್ಗ ಮತ್ತು ಅಧಿಕಾರಿ ವರ್ಗದವರಿಗೆ ನಿರ್ದೇಶಕ ಸ್ಥಾನಗಳಲ್ಲಿ ಪ್ರಾತಿನಿಧ್ಯ ಕಲ್ಪಿಸುವಲ್ಲಿ ಕೇಂದ್ರ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಕೂಡಲೇ ಈ ಬಗ್ಗೆ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಎಸ್‌ಬಿಐ ಜತೆಗೆ ಸಹವರ್ತಿ ಬ್ಯಾಂಕುಗಳ ವಿಲೀನ ಮಾಡಬಾರದು ಎಂದು ಒಕ್ಕೂಟ ಆಗ್ರಹಿಸಿದರು.

Advertisement

ಯುಎಫ್ಬಿಯು ವ್ಯಾಪ್ತಿಯ ಒಂಬತ್ತು ಒಕ್ಕೂಟಗಳು ಮುಷ್ಕರದಲ್ಲಿ ಭಾಗವಹಿಸಿದ್ದವು. ಗ್ರಾಮೀಣ ಬ್ಯಾಂಕ್‌ಗಳು ಮತ್ತು ಕೆಲವು ಸಹಕಾರಿ ಬ್ಯಾಂಕುಗಳು ಬೆಂಬಲ ನೀಡಿದ್ದವು. ಆದರೆ, ಭಾರತೀಯ ಮಜ್ದೂರ್‌ ಸಂಘಟನೆ ಜತೆಗೆ ಗುರುತಿಸಿಕೊಂಡಿರುವ ಬ್ಯಾಂಕ್‌ ನೌಕರರ ರಾಷ್ಟ್ರೀಯ ಸಂಘಟನೆ ಹಾಗೂ ಬ್ಯಾಂಕ್‌ ಅಧಿಕಾರಿಗಳ ರಾಷ್ಟ್ರೀಯ ಸಂಘಟನೆ ಮುಷ್ಕರದಲ್ಲಿ ಭಾಗವಹಿಸಿರಲಿಲ್ಲ. ಖಾಸಗಿ ಬ್ಯಾಂಕುಗಳಾದ ಆ್ಯಕ್ಸಿಸ್‌, ಕೋಟಕ್‌ ಮಹೀಂದ್ರ, ಎಚ್‌ಡಿಎಫ್ಸಿ ಬ್ಯಾಂಕುಗಳ ವಹಿವಾಟು ಎಂದಿನಂತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next