ರಾಮನಗರ: ನಿಖಿಲ್ ಕುಮಾರಸ್ವಾಮಿಗೆ ಎರಡು ಚುನಾವಣೆಯಲ್ಲಿ ಸೋತಿರುವ ಅನುಕಂಪವಿದ್ದು, ಈ ಚುನಾವಣೆಯಲ್ಲಿ ಗೆಲುವು ನಿಶ್ಚಿತ. ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಿಂದ ಅಲ್ಲಿಯ ಕಾರ್ಯಕರ್ತರು ರೆಬೆಲ್ ಆಗಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಕಟ್ಟಪ್ಪಣೆ ಮಾಡಿ ಸುಮ್ಮನಿರಿಸಿದ್ದಾರೆ.
ಕಾಂಗ್ರೆಸ್‌ನ ಒಂದು ಟೀಂ ನಮಗೆ (ಎನ್‌ಡಿಎ ಅಭ್ಯರ್ಥಿ) ಬೆಂಬಲಿಸುತ್ತದೆ ಎಂದು ವಿಪಕ್ಷದ ನಾಯಕ ಆರ್.ಅಶೋಕ್ ಹೇಳಿದರು.
ಇಲ್ಲಿನ ಜಾನಪದ ಲೋಕದ ಸಮೀಪ ಇರುವ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕಾರದಲ್ಲಿರುವ ಪಕ್ಷಕ್ಕೆ ಹೋಗುವುದು ಯೋಗೇಶ್ವರ್‌ಗೆ ಚಾಳಿಯಾಗಿದೆ. ಅವರು ಕಾಂಗ್ರೆಸ್ ಸೇರಿರುವುದು ಚನ್ನಪಟ್ಟಣ ಅಭಿವೃದ್ಧಿಗಾಗಿ ಅಲ್ಲ, ಸ್ವಂತ ಅಭಿವೃದ್ಧಿಗಾಗಿ. ಕಾಂಗ್ರೆಸ್ ಅವರನ್ನು ಹರಕೆಯ ಕುರಿ ಮಾಡುತ್ತಿದೆ ಎಂದರು.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಮಾತನಾಡಿ, ಚನ್ನಪಟ್ಟಣದ ಕೆರೆಗಳನ್ನು ತುಂಬಿಸುವ ನೀರಾವರಿ ಯೋಜನೆಗೆ 150 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದು ನಾನು. ಭಗೀರಥ ಎಂಬ ಕ್ರೆಡಿಟ್ ನನಗೆ ಹಾಗೂ ಬಿಜೆಪಿ ಪಕ್ಷಕ್ಕೆ ಬರಬೇಕು. ಯೋಗೇಶ್ವರ್ ಅವರ ಪಾತ್ರ ಇದರಲ್ಲಿ ಏನೂ ಇಲ್ಲ ಎಂದರು. ಮಾಜಿ ಡಿಸಿಎಂ ಡಾ| ಅಶ್ವತ್ಥ್ ನಾರಾಯಣ್ ಮಾತನಾಡಿದರು.
ನಿಖಿಲ್ ಪರ ದಿಲ್ಲಿ ನಾಯಕರ ಪ್ರಚಾರ ಇಲ್ಲ
ಬೆಂಗಳೂರು: ಬಿಜೆಪಿ ಹೈಕಮಾಂಡ್ ನಾಯಕರು ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳ ಚುನಾವಣೆಯಲ್ಲಿ ವ್ಯಸ್ತರಾಗಿರುವುದರಿಂದ ಚನ್ನಪಟ್ಟಣಕ್ಕೆ ಬಂದು ಪ್ರಚಾರ ಮಾಡುವ ಸಾಧ್ಯತೆಯಿಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.