Advertisement

ಅಕ್ರಮ ಮರಳು ಸಾಗಾಣಿಕೆಯಲ್ಲಿ ಶಾಮೀಲು : ಡಿವೈಎಸ್‌ಪಿ ಮೋಹನ್ ಅಮಾನತು

06:58 PM Sep 03, 2020 | sudhir |

ಚಾಮರಾಜನಗರ: ಅಕ್ರಮ ಮರಳು ಸಾಗಾಣಿಕೆದಾರರೊಂದಿಗೆ ಶಾಮೀಲಾಗಿ, ಅಕ್ರಮ ಮರಳು ಸಾಗಾಣಿಕೆಗೆ ಅನುವು ಮಾಡಿಕೊಟ್ಟು, ಅಕ್ರಮ ಮರಳಿನ ಟಿಪ್ಪರ್ ಅಪಘಾತಕ್ಕೀಡಾದರೂ ಮೇಲಧಿಕಾರಿಗಳಿಗೆ ಮಾಹಿತಿ ನೀಡದ ಕಾರಣ ಚಾಮರಾಜನಗರ ಡಿವೈಎಸ್‌ಪಿ ಜೆ. ಮೋಹನ್ ಅವರನ್ನು ಸರ್ಕಾರ ಅಮಾನತುಗೊಳಿಸಿದೆ.

Advertisement

ಕಳೆದ ಮೇ 15ರ ಮಧ್ಯರಾತ್ರಿ, ನಗರದ ಸಂತೆಮರಹಳ್ಳಿ ರಸ್ತೆಯಲ್ಲಿ ಮರಳು ಸಾಗಿಸುತ್ತಿದ್ದ ಟಿಪ್ಪರ್‌ಗೆ ಲಾರಿ ಡಿಕ್ಕಿಯಾಗಿ ಕ್ಲೀನರ್ ಮೃತಪಟ್ಟಿದ್ದ. ಚಾಮರಾಜನಗರ ಡಿವೈಎಸ್ಪಿ ಜೆ. ಮೋಹನ್, ಗ್ರಾಮಾಂತರ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಎಂ. ಮಂಜು ಹಾಗೂ ಪೂರ್ವ ಠಾಣೆ ಎಸ್‌ಐ ಸುನೀಲ್ ಅಕ್ರಮ ಮರಳು ಸಾಗಾಣಿಕೆಗೆ ಅವಕಾಶ ಮಾಡಿಕೊಟ್ಟಿದ್ದರು. ಅಪಘಾತದ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತಂದರೆ ಅಕ್ರಮ ಮರಳು ದಂಧೆಗೆ ಸಹಕರಿಸುತ್ತಿರುವ ವಿಷಯ ತಿಳಿಯುತ್ತದೆಂದು, ಅಲ್ಲಿದ್ದ ಮರಳನ್ನು ಬೇರೆಡೆಗೆ ಸಾಗಿಸಲಾಗಿತ್ತು. ಆ ಟಿಪ್ಪರ್‌ಗೆ ಎಂ ಸ್ಯಾಂಡ್ ತುಂಬಿ ಪ್ರಕರಣವನ್ನು ತಿರುಚಲು ಪ್ರಯತ್ನಿಸಲಾಗಿತ್ತು.
ದಕ್ಷಿಣ ವಲಯ ಐಜಿಪಿ ಅವರು ಈ ಪ್ರಕರಣದ ತನಿಖೆಗೆ ಆದೇಶಿಸಿದ್ದರು. ಎಎಸ್‌ಪಿಯವರ ತನಿಖಾ ವರದಿಯಲ್ಲಿ ಪ್ರಕರಣ ನಡೆದಿರುವುದು ದೃಢಪಟ್ಟು, ಕರ್ತವ್ಯ ಲೋಪ ಎಸಗಿದ ಕಾರಣ ಡಿವೈಎಸ್‌ಪಿ ಅವರನ್ನು ಅಮಾನತುಪಡಿಸಲಾಗಿದೆ.
ಡಿವೈಎಸ್‌ಪಿ ಜೆ. ಮೋಹನ್ ಅವರನ್ನು ಮೈಸೂರಿನ ದಕ್ಷಿಣ ವಲಯ ಐಜಿಪಿ ಕಚೇರಿಗೆ ಬುಧವಾರ ವರ್ಗಾವಣೆ ಮಾಡಲಾಗಿತ್ತು. ಅವರು ರಿಲೀವ್ ಆಗುವ ಮುನ್ನವೇ ಅಮಾನತು ಆದೇಶ ಬಂದಿದೆ.

ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಸಿಪಿಐ ಮಂಜು, ಪಿಎಸ್‌ಐ ಸುನೀಲ್ ಹಾಗೂ ಎಚ್‌ಸಿ ನಾಗನಾಯ್ಕ ಅವರನ್ನು ಈಗಾಗಲೇ ಅಮಾನತು ಮಾಡಲಾಗಿತ್ತು.

ಪ್ರಿಯದರ್ಶಿನಿ ನೂತನ ಡಿವೈಎಸ್ಪಿ: ಚಾಮರಾಜನಗರ ಉಪ ವಿಭಾಗದ ನೂತನ ಡಿವೈಎಸ್‌ಪಿ ಆಗಿ, ಲೋಕಾಯುಕ್ತದಲ್ಲಿ ಪ್ರೊಬೆಷನರಿ ಡಿವೈಎಸ್ಪಿ ಆಗಿದ್ದ ಪ್ರಿಯದರ್ಶಿನಿ ಸಾಣಿಕೊಪ್ಪ ಅವರನ್ನು ನೇಮಕ ಮಾಡಲಾಗಿದೆ.

ಕೊಳ್ಳೇಗಾಲ ಡಿವೈಎಸ್‌ಪಿ ಎನ್. ನವೀನ್‌ಕುಮಾರ್ ಅವರನ್ನು ಮೈಸೂರಿನ ಪೊಲೀಸ್ ಅಕಾಡೆಮಿಗೆ ವರ್ಗಾಯಿಸಲಾಗಿದೆ. ಅವರ ಜಾಗಕ್ಕೆ ಬೆಂಗಳೂರಿನ ಸಿಐಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿ. ನಾಗರಾಜು ಅವರನ್ನು ನಿಯೋಜಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next