ಹಾಸನ: ನಗರದ ಹುಣಸಿನಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡಬೇಕು. ಕೆರೆ ಪರಿಸರವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಶಾಸಕ ಪ್ರಿಂತಂ ಜೆ.ಗೌಡ ಅವರು ಸರ್ಕಾರದ ಮೇಲೆ ಒತ್ತಡ ತಂದು ಅನುದಾನ ಮಂಜೂರು ಮಾಡಿಸಬೇಕು ಎಂದು ಹಸಿರುಭೂಮಿ ಪ್ರತಿಷ್ಠಾನ ಒತ್ತಾಯಿಸಿದೆ.
ಹುಣಸಿನಕೆರೆ ಏರಿ ಮೇಲೆ ಹಸಿರುಭೂಮಿ ಪ್ರತಿಷ್ಠಾನದಿಂದ ಕೆರೆ ಪುನಶ್ಚೇತನ ಸಂಬಂಧ ಭಾನುವಾರ ಏರ್ಪಡಿಸಿದ್ದ ಚಿಂತನಾ ಸಭೆಯಲ್ಲಿ ಅಹವಾಲು ಮಂಡಿಸಿದ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷ ಆರ್.ಪಿ. ವೆಂಕಟೇಶ್‌ಮೂರ್ತಿ, ಪ್ರತಿಷ್ಠಾನವು ಜನರಿಂದ ಆರ್ಥಿಕ ನೆರವು ಸಂಗ್ರಹಿಸಿ ಕೆಲವು ಕೆರೆಗಳನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಾ ಬಂದಿದೆ ಎಂದರು.
ಸುಮಾರು 200 ಎಕರೆ ವಿಸ್ತೀರ್ಣದ ಹುಣಸಿನಕೆರೆ ಅಭಿವೃದ್ಧಿಗೆ ಕೋಟ್ಯಂತರ ರೂ. ಅಗತ್ಯವಿದ್ದು, ಸರ್ಕಾರ ಅನುದಾನದಿಂದ ಮಾತ್ರ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಸಾಧ್ಯ. ಶಾಸಕರು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು. ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಮಾದರಿ ನಗರವನ್ನಾಗಿ ಮಾಡಿ: ಹಸಿರುಭೂಮಿ ಪ್ರತಿಷ್ಠಾನದ ಎಸ್.ಎಸ್.ಪಾಷಾ ಮಾತನಾಡಿ, ಹುಣಸಿನ ಕೆರೆಯಂತಹ ದೊಡ್ಡ ಆಸ್ತಿ ಹಾಸನ ನಗರದ ಜನರಿಗೆ ಸಿಕ್ಕಿದೆ. ಹಾಸನವನ್ನು ಮಾದರಿ ನಗರವನ್ನಾಗಿ ಅಭಿವೃದ್ಧಿಪಡಿಸಲು ಜನಪ್ರತಿನಿಧಿಗಳೂ ಸೇರಿದಂತೆಎಲ್ಲರೂ ಕೈ ಜೋಡಿಸುವಂತೆ ಮನವಿಮಾಡಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್ ಮಾತನಾಡಿ, ಹುಣಸಿನಕೆರೆ ಅಭಿವೃದ್ಧಿಗೆ 20 ಕೋಟಿಗಿಂತ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವುದರಿಂದ ಶಾಸಕರು ಸರ್ಕಾರದಿಂದ ಅನುದಾನ ಕೊಡಿಸಬೇಕು ಎಂದು ಆಗ್ರಹಪಡಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಅಧ್ಯಕ್ಷ ಎಚ್.ಪಿ.ಮೋಹನ್ ಮಾತನಾಡಿ, ಪಕ್ಷ ಭೇದ ಮರೆತು ಶಾಸಕರ ಮತ್ತು ಮುಖಂಡರ ಜೊತೆ ಚರ್ಚಿಸಿ ಸರ್ಕಾರದಿಂದ ಅನುದಾನ ತರುವ ಪ್ರಯತ್ನ ಮಾಡಬೇಕು. ಇದುವರೆಗೂ ಕೆರೆ ಅಭಿವೃದ್ಧಿಗೆ ನಡೆದ ಪ್ರಯತ್ನವನ್ನು ಪ್ರಶಂಸಿದರು.
ಹಸಿರುಭೂಮಿ ಪ್ರತಿಷ್ಠಾನದ ಅಹವಾಲು ಆಲಿಸಿದ ಶಾಸಕ ಪ್ರೀತಂ ಜೆ.ಗೌಡ ಅವರು, ಚನ್ನಪಟ್ಟಣ ಕೆರೆ ಅಭಿವೃದ್ಧಿ ಮಾದರಿಯಲ್ಲಿಯೇ ಹುಣಸಿನಕೆರೆಯ ಅಭಿವೃದ್ಧಿಯೂ ಆಗಬೇಕಾಗಿದೆ. ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ 144 ಕೋಟಿ ರೂ. ಮಂಜೂರಾಗಿದೆ. ಅಷ್ಟು ಮೊತ್ತ ಆ ಕೆರೆ ಅಭಿವೃದ್ಧಿಗೆ ಅಗತ್ಯವಿಲ್ಲ ಎಂದೂ ಅಭಿಪ್ರಾಯಪಟ್ಟರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್. ಮುದ್ದೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ವೈದ್ಯರ ಸಂಘದ ಅಧ್ಯಕ್ಷ ಡಾ.ಶಿವಪ್ರಸಾದ್, ಲಯನ್ಸ್ ಸೇವಾ ಸಂಸ್ಥೆ ಅಧ್ಯಕ್ಷ ಎಚ್.ಆರ್. ಚಂದ್ರೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣೇಗೌಡ, ವಕೀಲರ ಸಂಘದ ಅಧ್ಯಕ್ಷ ಜೆ.ಪಿ.ಶೇಖರ್, ಸಂಜೀವಿನಿ ಸಹಕಾರಿ ಅಸ್ಪತ್ರೆ ಅಧ್ಯಕ್ಷ ಗಿರೀಗೌಡ, ಡಾ.ಸಾವಿತ್ರಿ, ಡಾ. ಸೌಭಾಗ್ಯ, ಸಾಹಿತಿ ಗಳಾದ ಬಾನು ಮುಷ್ತಾಕ್, ರೂಪಾ ಹಾಸನ ಮತ್ತಿತರರು ಉಪಸ್ಥಿತರಿದ್ದರು