ಮಂಡ್ಯ: ಜಿಲ್ಲಾ ಮಟ್ಟದ ಇಲಾಖೆಗಳಿಂದ ಕಾರಾಗೃಹದ ಅಭಿವೃದ್ಧಿಗೆ ಸಿಗುವ ಸೌಲಭ್ಯ ಗಳನ್ನು ಒದಗಿಸಿ ಕಾರಾಗೃಹದ ಅಭಿವೃದ್ಧಿಗೆ ಅಧಿಕಾರಿಗಳು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ತಿಳಿಸಿದರು.
ನಗರದ ಜಿಲ್ಲಾ ಕಾರಾಗೃಹದಲ್ಲಿ ಕಾರಾಗೃಹ ಅಭಿವೃದ್ಧಿ ಹಾಗೂ ಸುಗಮ ಆಡಳಿತಕ್ಕೆ ಸಂಬಂಧಿಸಿದಂತೆ ಏರ್ಪಡಿಸಲಾಗಿದ್ದ ಜಿಲ್ಲಾ ಕಾರಾಗೃಹ ಸಂದರ್ಶಕರ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿದರು.
ಕಾರಾಗೃಹದ ಹೊರಗೋಡೆ, ಕಚೇರಿ ಹಾಗೂ ಇನ್ನಿತರ ಪ್ರದೇಶಗಳ ರಿಪೇರಿ, ಕಾರಾಗೃಹ ಆವರಣದಲ್ಲಿರುವ ಬೋರ್ ವೆಲ್‌ಗಳ ರೀಚಾರ್ಜ್, ಹೈಮಾಸ್ಕ್ ಲೈಟ್ ಅಳವಡಿಕೆ ಕಾರಾಗೃಹದ ಸುತ್ತ ಇರುವ ಭೂಮಿಯಲ್ಲಿ ಕೃಷಿ ಚಟುವಟಿಕೆ ಕುರಿತಂತೆ ಚರ್ಚೆ ನಡೆಸಿದರು.
ಜಿಲ್ಲಾಧಿಕಾರಿಗಳು ಅಡುಗೆ ಮನೆ, ಅನಕ್ಷರಸ್ಥ ಬಂದಿಗಳ ಕಲಿಕಾ ಕೇಂದ್ರ, ಬಂದಿಗಳ ವೃತ್ತಿಪರ ತರಬೇತಿ ಕೇಂದ್ರ, ಗ್ರಂಥಾಲಯ, ಆಸ್ಪತ್ರೆ, ಬಂದಿಗಳ ಸೆಲ್ ಮತ್ತು ಬ್ಯಾಂಕುಗಳಿಗೆ ಭೇಟಿ ನೀಡಿ ಭದ್ರತೆ ಹಾಗೂ ಸ್ವತ್ಛತೆಯನ್ನು ಪರಿಶೀಲಿಸಿ, ಆಡಳಿತ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ವರಿಷ್ಠಾಧಿಕಾರಿ ಎನ್.ಯತೀಶ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಂ.ನಳಿನಿ ಕುಮಾರಿ, ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಕೆ. ಲೋಕೇಶ್ ಸೇರಿದಂತೆ ಮತ್ತಿತರರಿದ್ದರು.