ಬೆಂಗಳೂರು: ಮಲೆಯಾಳಂನ ‘ಒರು ಅಡಾರ್ ಲವ್’ ಚಿತ್ರದ ಹಾಡಿನಲ್ಲಿ ಕಣ್ಣು ಮಿಟುಕಿಸುವುದರ ಮೂಲಕ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದಿದ್ದ ನಟಿ, ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಇದೀಗ ಕನ್ನಡ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದಾರೆ.
ಕೆ. ಮಂಜು ನಿರ್ಮಾಣದ, ಮಲಯಾಳಂ ನಿರ್ದೇಶಕ ವಿ.ಕೆ ಪ್ರಕಾಶ್ ನಿರ್ದೇಶನದ ‘ವಿಷ್ಣು ಪ್ರಿಯಾ’ ಚಿತ್ರದ ಮೂಲಕ ಪ್ರಿಯಾ ವಾರಿಯರ್, ಸ್ಯಾಂಡಲ್ ವುಡ್ ನಲ್ಲಿ ಅಕೌಂಟ್ ಓಪನ್ ಮಾಡುತ್ತಿದ್ದಾರೆ.
ಸದ್ಯ ‘ವಿಷ್ಣು ಪ್ರಿಯ’ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಇದೇ ಏಪ್ರಿಲ್ 5ಕ್ಕೆ ಬಿಡುಗಡೆಯಾಗಲಿದೆ. ಇನ್ನೊಂದು ವಿಶೇಷವೆಂದರೆ, ಈ ಬಗ್ಗೆ ಪ್ರಿಯಾ ವಾರಿಯರ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಕನ್ನಡದಲ್ಲೆ ಬರೆದುಕೊಂಡು ಪೋಸ್ಟ್ ಹಾಕಿದ್ದಾರೆ.
‘ಪ್ರೀತಿಯ ಅಭಿಮಾನಿಗಳಿಗೆ ಪ್ರಿಯ ಮಾಡುವ ನಮಸ್ಕಾರಗಳು. ನನ್ನ ಮೊದಲನೇ ಕನ್ನಡದ ಸಿನಿಮಾ ‘ವಿಷ್ಣು ಪ್ರಿಯ’ದ ಫಸ್ಟ್ ಲುಕ್ ಏಪ್ರಿಲ್ 5 ಕ್ಕೆ ಬಿಡುಗಡೆ ಆಗಲಿದೆ, ಎಲ್ಲರೂ ದಯವಿಟ್ಟು ಶೇರ್ ಮಾಡಿ ಹಾಗೂ ಸಪೋರ್ಟ್ ಮಾಡಿ….ನಿಮ್ಮೆಲ್ಲರ ಪ್ರೀತಿ ಹಾಗೂ ಆಶೀರ್ವಾದ ಸದಾ ನನ್ನ ಮೇಲೆ ಮತ್ತು ನಮ್ಮ ಸಿನಿಮಾ ತಂಡದ ಮೇಲೆ ಇರಲಿ..’ ಎಂದು ಪ್ರಿಯಾ ಬರೆದುಕೊಂಡಿದ್ದಾರೆ.
ಈ ಹಿಂದೆ ‘ಪಡ್ಡೆಹುಲಿ’ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ಶ್ರೇಯಸ್ ‘ವಿಷ್ಣು ಪ್ರಿಯ’ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಒಟ್ಟಾರೆ ಕನ್ನಡ ಪ್ರೇಕ್ಷಕರ ಮುಂದೆ ಬರಲು ತಯಾರಾಗಿರುವ ಪ್ರಿಯಾಳನ್ನು ಪ್ರೇಕ್ಷಕರು ಎಷ್ಟರ ಮಟ್ಟಿಗೆ ಸ್ವೀಕರಿಸುತ್ತಾರೆ ಅನ್ನೊದು ಈ ವರ್ಷದ ಕೊನೆಗೆ ಗೊತ್ತಾಗಲಿದೆ.