ದೊಡ್ಡಬಳ್ಳಾಪುರ: ನಗರದ ಪ್ರವಾಸಿ ಮಂದಿರ ಎದುರು ನಾಡಪ್ರಭು ಕೆಂಪೇಗೌಡ ಮತ್ತು ರಾಷ್ಟ್ರಕವಿ ಕುವೆಂಪು ಪುತ್ಥಳಿ ನಿರ್ಮಿಸುವ ಕುರಿತು ಕೆಂಪೇಗೌಡ ಜಯಂತ್ಯುತ್ಸವ ಆಚರಣೆ ಸಮಿತಿಯಿಂದ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಎರಡು ವರ್ಷಗಳ ಹಿಂದೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಇಲ್ಲಿನ ಪ್ರವಾಸಿ ಮಂದಿರದ ಎದುರು ಬಲಕ್ಕೆ ಕೆಂಪೇಗೌಡ ಮತ್ತು ಎಡಕ್ಕೆ ಕುವೆಂಪು ಪ್ರತಿಮೆ ಸ್ಥಾಪನೆಗೆ ಅನುಮೋದನೆ ಸಿಕ್ಕಿತ್ತು. ತಾಲೂಕಿನ ಜನತೆ ಪುತ್ಥಳಿ ಸ್ಥಾಪನೆಗೆ ಜ್ಯಾತ್ಯಾತೀತವಾಗಿ ಆರ್ಥಿಕ ಹಾಗೂ ಅಗತ್ಯ ಸಹಕಾರ ನೀಡಬೇಕು ಎಂದು ಕೆಂಪೇಗೌಡ ಜಯಂತ್ಯುತ್ಸವ ಆಚರಣೆ ಸಮಿತಿ ಅಧ್ಯಕ್ಷ ಎನ್.ಹನುಮಂತೇಗೌಡ ಮನವಿ ಮಾಡಿದರು.
ವಿರೋಧ ಬೇಡ: ಕೆಂಪೇಗೌಡ ಪುತ್ಥಳಿ ನಿರ್ಮಾಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಪ್ರವಾಸಿ ಮಂದಿರದ ವೃತ್ತಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡಿದ್ದರೂ ಕೆಂಪೇಗೌಡ ಪುತ್ಥಳಿ ನಿರ್ಮಿಸುತ್ತಿರುವುದು ಸರಿಯಲ್ಲ ಎಂಬ ಆರೋಪಗಳಲ್ಲಿ ಹುರುಳಿಲ್ಲ. ಆ ವೃತ್ತದಲ್ಲಿ ಪುತ್ಥಳಿ ನಿರ್ಮಾಣ ಮಾಡುತ್ತಿಲ್ಲ.
ಹೀಗಾಗಿ ಗೊಂದಲ ಸೃಷ್ಟಿಸುವುದು ಬೇಡ ಎಂದರು. ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಇಬ್ಬರು ಮಹನೀಯರ ಪುತ್ಥಳಿ ನಿರ್ಮಾಣ ಸ್ವಾಗತಾರ್ಹವಾಗಿದೆ ಎಂದರು. ರಾಜ್ಯ ಒಕ್ಕಲಿಗ ಸಂಘದ ನಿರ್ದೆಶಕ ಬಿ.ಮುನೇಗೌಡ ಮಾತನಾಡಿದರು.
ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ್, ಸಮುದಾಯದ ವಿವಿಧ ರಾಜಕೀಯ ಮುಖಂಡ ಜಿಪಂ ಮಾಜಿ ಅಧ್ಯಕ್ಷ ಸಿ.ಡಿ.ಸತ್ಯನಾರಾಯಣಗೌಡ, ಮಾಜಿ ಸದಸ್ಯ ಎ. ನರಸಿಂ ಹಯ್ಯ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಟಿ.ವಿ. ಲಕ್ಷ್ಮೀನಾರಾಯಣ್, ದರ್ಗಾಜೋಗಿಹಳ್ಳಿ ಗ್ರಾಪಂ ಅಧ್ಯಕ್ಷ ನಾಗೇಶ್, ಬಿಜೆಪಿ ತಾಲೂಕು ಅಧ್ಯಕ್ಷ ನಾಗರಾಜು, ಜೆಡಿಎಸ್ ತಾಲೂಕು ಅಧ್ಯಕ್ಷ ಲಕ್ಷ್ಮೀಪತಯ್ಯ ಸೇರಿ ಮುಖಂಡರು ಇದ್ದರು.