ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ರೇಷ್ಮೆಗೂಡಿನ ಧಾರಣೆ ಕುಸಿದು ರೇಷ್ಮೆ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟ ದಲ್ಲಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಈ ಬಗ್ಗೆ ಕೂಡಲೇ ಸಮಗ್ರ ವರದಿಯೊಂದನ್ನು ಜಿಲ್ಲಾಡಳಿತದಿಂದ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ರೇಷ್ಮೆ ಬೆಳೆಗಾರರಿಗೆ ಬಸವರಾಜ್ ವರದಿ ಅನ್ವಯ ರಕ್ಷಣಾತ್ಮಕ ಬೆಂಬಲ ಬೆಲೆ ದೊರೆಕಿಸಿ ಕೊಡುವುದಾಗಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರೇಷ್ಮೆಗೂಡಿನ ಧಾರಣೆ ಕುಸಿತದ ಹಿನ್ನೆಲೆಯಲ್ಲಿ ಜಿಲ್ಲೆಯ ರೈತಪರ ಸಂಘಟನೆಗಳ, ರೇಷ್ಮೆಗೂಡು ರೀಲರ್‌ಗಳ ಹಾಗೂ ರೇಷ್ಮೆ ಇಲಾಖೆ ಅಧಿಕಾರಿಗಳನ್ನೊಳಗೊಂಡ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಗೂಡಿನ ಬೆಲೆ ಇಳಿಕೆ: ಜಿಲ್ಲೆಯಲ್ಲಿ ರೇಷ್ಮೆ ಗೂಡಿನ ಬೆಲೆ ಸಾಕಷ್ಟು ಕುಸಿತವಾಗಿರುವುದರಿಂದ ರೇಷ್ಮೆಬೆಳೆಗಾರರು ತೀವ್ರ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ ಕೆ.ಜಿ. ರೇಷ್ಮೆಗೂಡಿನ ಬೆಲೆ 260 ರಿಂದ 300 ರೂ, ವರೆಗೂ ಮಾರಾಟಗೊಳ್ಳುತ್ತಿದ್ದು, ಇದರಿಂದ ಉತ್ಪಾದನಾ ವೆಚ್ಚ ಕೂಡ ರೈತರಿಗೆ ಸಿಗುತ್ತಿಲ್ಲ ಎಂಬ ಮಾತು ರೇಷ್ಮೆ ಬೆಳೆಗಾರರಿಂದ ಸಭೆಯಲ್ಲಿ ವ್ಯಕ್ತ ವಾಯಿತು. ಇದಕ್ಕೆ ಸ್ಪಂದಿಸಿ ಮಾತನಾಡಿದ ಜಿಲ್ಲಾಧಿ ಕಾರಿಗಳು, ಈ ಬಗ್ಗೆ ಜಿಲ್ಲಾಡಳಿತ ರೇಷ್ಮೆ ಇಲಾಖೆ ರಾಜ್ಯ ಆಯುಕ್ತರನ್ನು ಅಥವಾ ಕಾರ್ಯದರ್ಶಿಗಳನ್ನು ಜಿಲ್ಲೆಗೆ ಆಹ್ವಾನಿಸಿ ರೇಷ್ಮೆ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುವ ರೀತಿಯಲ್ಲಿ ಜಿಲ್ಲಾಡಳಿತ ಕ್ರಮ ವಹಿಸಲಿದೆಯೆಂದು ಭರವಸೆ ನೀಡಿದರು.
ಭರವಸೆ: ಅಲ್ಲದೇ ರಾಜ್ಯ ಸರ್ಕಾರ ಈ ಹಿಂದೆ ನೇಮಿಸಿರುವ ಬಸವರಾಜ್ ವರದಿ ಅನ್ವಯ ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ರೇಷ್ಮೆ ಬೆಳೆಗಾರರಿಗೆ ನಿಗದಿ ಪಡಿಸಿರುವ ಬೆಂಬಲ ಬೆಲೆ ಸಹ ಒದಗಿಸಲಾ ಗುವುದೆಂದು ಡೀಸಿ ಅನಿರುದ್ಧ್ ಶ್ರವಣ್ ಸಭೆಯಲ್ಲಿ ಭಾಗವಹಿಸಿದ್ಧ ಬೆಳೆಗಾರರಿಗೆ ಭರವಸೆ ನೀಡಿದರು.
ತೀವ್ರ ತೊಂದರೆ: ಜಿಲ್ಲೆಯಲ್ಲಿ ರೇಷ್ಮೆ ಉತ್ಪಾದನೆ ಅಧಿಕವಾಗಿದ್ದು, ಬರಗಾಲದ ನಡುವೆಯು ರೈತರು ರೇಷ್ಮೆ ಬೆಳೆಯುತ್ತಿ ದ್ದಾರೆ. ಆದರೆ ಸಮರ್ಪಕವಾಗಿ ಮಾರುಕಟ್ಟೆಯಲ್ಲಿ ಬೆಲೆ ಸಿಗದೇ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಸತತ ನಾಲ್ಕೈದು ತಿಂಗಳಿಂದ ರೇಷ್ಮೆಗೂಡಿನ ಧಾರಣೆ ಪಾತಾಳಕ್ಕೆ ಕುಸಿದಿದೆ. ಇದಕ್ಕೆ ಮುಖ್ಯ ಕಾರಣ ಚೀನಾ ರೇಷ್ಮೆ, ಅದಕ್ಕೆ ಕೇಂದ್ರ ಸರ್ಕಾರ ಚೀನಾ ರೇಷ್ಮೆ ಮೇಲಿನ ಅಮದು ಸುಂಕವನ್ನು ಶೇ.50 ರಷ್ಟು ಹೆಚ್ಚಿಸಬೇಕೆಂದು ಸಭೆಯಲ್ಲಿದ್ದ ರೈತರು ಆಗ್ರಹಿಸಿದರು. ಬಹಳಷ್ಟು ರೈತರು ರೇಷ್ಮೆಗೂಡಿನ ಧಾರಣೆ ಕುಸಿತದಿಂದ ಕಂಗಾಲಾಗಿ ರೇಷ್ಮೆ ಕೃಷಿಯಿಂದ ವಿಮುಖರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ಮುಖಂಡರು ಜಿಲ್ಲಾಧಿಕಾರಿಗಳ ಗಮನ ಸೆಳೆದರು.
ಸಮಸ್ಯೆಗಳ ತೆರೆದಿಟ್ಟ ರೈತರು: ಸಭೆಯಲ್ಲಿ ಭಾಗ ವಹಿಸಿದ್ಧ ರೈತರು ವಿಶೇಷವಾಗಿ ಶಿಡ್ಲಘಟ್ಟದಲ್ಲಿ ಹೈಟೆಕ್ ಮಾರುಕಟ್ಟೆ ಸ್ಥಾಪನೆಗೆ ಕ್ರಮಕೈಗೊಳ್ಳಬೇಕು. ಕಚ್ಚಾ ರೇಷ್ಮೆ ಮಾರುಕಟ್ಟೆ ಸ್ಥಾಪಿಸಿದರೆ ಉದ್ಯೋಗ ಸೃಷ್ಟಿ ಯಾಗುವ ಜತೆಗೆ ರೇಷ್ಮೆಗೆ ನ್ಯಾಯಯುತ ಬೆಲೆ ದೊರೆಯಲಿದೆ. ಧರ್ಮಾವರಂ, ಕಂಚಿ, ಸೂರತ್ ಕಡೆಯ ವ್ಯಾಪಾರಿಗಳು ಜಿಲ್ಲೆಗೆ ಖರೀದಿಗೆ ಬರು ವಂತಹ ವಾತಾವರಣ ಸೃಷ್ಟಿಸಬೇಕು. ರೇಷ್ಮೆ ಗೂಡಿನ ಬಿಚ್ಚಾಣಿಕೆಯಿಂದ ಹಿಡಿದು ನಂತರದ ಪ್ರಕ್ರಿಯೆಯಲ್ಲಿ ತಾಂತ್ರಿಕತೆಗೆ ಹೆಚ್ಚಿನ ಒತ್ತು ನೀಡಿದರೆ ಅಭಿವೃದ್ಧಿಗೆ ಅನುಕೂಲವಾಗಲಿದೆಂದು ಹೇಳಿ ಶಿಡ್ಲಘಟ್ಟದಲ್ಲಿ ರೀಲರ್‌ಗಳು ಗೂಡಿನಿಂದ ದಾರ ತೆಗೆದ ನಂತರ ಉಳಿಯುವ ಪ್ಯೂಪಾ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿಲ್ಲ. ಹೀಗಾಗಿ ದುರ್ವಾಸನೆ ಹೆಚ್ಚಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಜನಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಈ ಬಗ್ಗೆ ಹಿಂದೆ ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಜಿಲ್ಲಾಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡರು.
ಸಭೆಯಲ್ಲಿ ರೇಷ್ಮೆ ಕೃಷಿ ಉಪ ನಿರ್ದೇಶಕರಾದ ಬೈರಾರೆಡ್ಡಿ, ಕೆ.ಎಸ್.ಪುಟ್ಟಣ್ಣಯ್ಯ ಬಣದ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಟಿ.ಲಕ್ಷ್ಮೀನಾರಾಯಣರೆಡ್ಡಿ, ಕೋಡಿಹಳ್ಳಿ ಚಂದ್ರಶೇಖರ್ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ, ರೈತ ಮುಖಂಡರಾದ ಲಕ್ಷ್ಮಣರೆಡ್ಡಿ, ರಾಮಾಂಜಿನಪ್ಪ. ತಾದೂರು ಮಂಜುನಾಥ. ವೆಂಕಟಸ್ವಾಮಿ, ರವಿ ಪ್ರಕಾಶ್, ಅರುಣ್ ಕುಮಾರ್, ದೇವರಾಜ್ ಇತರರು ಹಾಜರಿದ್ದರು.